ಬೆಂಗಳೂರು(ಅ.10):  ಐಸಿಸ್‌ ಶಂಕಿತ ಉಗ್ರರು ಸೆರೆಯಾದ ಬೆನ್ನೆಲ್ಲೇ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಬೆಂಗಳೂರಿನಲ್ಲಿ ಅಡಗಿರುವ ‘ಕುರಾನ್‌ ಸರ್ಕಲ್‌’ನ ಮತ್ತಷ್ಟು ಸದಸ್ಯರ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಿದೆ.

"

ಅತ್ಯುಗ್ರ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್‌ ಸ್ಟೇಟ್ಸ್‌ಗೆ (ಐಸಿಸ್‌) ಬೆಂಗಳೂರಿನ ಮುಸ್ಲಿಂ ಯುವಕರಿಗೆ ಮೂಲಭೂತವಾದದ ಬೋಧಿಸಿ ಸಿರಿಯಾಗೆ ಕಳುಹಿಸುತ್ತಿದ್ದ ‘ಕುರಾನ್‌ ಸರ್ಕಲ್‌’ನ ನಾಯಕರಾದ ಫ್ರೇಜರ್‌ ಟೌನ್‌ನ ಇರ್ಫಾನ್‌ ನಾಸೀರ್‌ ಹಾಗೂ ತಮಿಳುನಾಡು ರಾಮನಾಥಪುರದ ಅಹ್ಮದ್‌ ಅಬ್ದುಲ್‌ ಖಾದರ್‌ನನ್ನು ಎನ್‌ಐಎ ಬಂಧಿಸಿತ್ತು. ಬಳಿಕ ಈ ಇಬ್ಬರ ಮೊಬೈಲ್‌ ಕರೆಗಳು ಹಾಗೂ ವಾಟ್ಸಾಪ್‌ನಲ್ಲಿ ಗ್ರೂಪ್‌ಗಳನ್ನು ಪರಿಶೀಲಿಸಿದ ಅಧಿಕಾರಿಗಳು, ಕುರಾನ್‌ ಸರ್ಕಲ್‌ ಸದಸ್ಯರ ಪಟ್ಟಿಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.

ಆದರೆ ತಮ್ಮ ನಾಯಕರು ಎನ್‌ಐಎ ಬಲೆಗೆ ಬಿದ್ದ ಮಾಹಿತಿ ತಿಳಿದ ಕೂಡಲೇ ಆತನ ಸಹಚರರು ಭೂಗತರಾಗಿದ್ದಾರೆ. ಇದಕ್ಕಾಗಿ ಗುರಪ್ಪನಪಾಳ್ಯ, ಫ್ರೇಜರ್‌ ಟೌನ್‌, ಸದ್ದುಗುಂಟೆ ಪಾಳ್ಯ ಹಾಗೂ ಡಿ.ಜೆ.ಹಳ್ಳಿ ಸೇರಿದಂತೆ ಕೆಲವು ಕಡೆ ಎನ್‌ಐಎ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಬೆಂಗಳೂರಿನಲ್ಲಿ ‘ಐಸಿಸ್‌ ಉಗ್ರರ ಕ್ಯಾಂಪ್‌’: ಸ್ಫೋಟಕ ಮಾಹಿತಿ ಬಹಿರಂಗ..!

ಶಂಕಿತರನ್ನು ದೆಹಲಿಗೆ ಕರೆದೊಯ್ದು ಎನ್‌ಐಎ:

ಬೆಂಗಳೂರಿನಲ್ಲಿ ಸೆರೆಯಾದ ಅಹ್ಮದ್‌ ಅಬ್ದುಲ್‌ ಖಾದರ್‌ ಹಾಗೂ ಇರ್ಫಾನ್‌ ನಾಸೀರ್‌ನನ್ನು ಎನ್‌ಐಎ ಅಧಿಕಾರಿಗಳು ಹೆಚ್ಚಿನ ವಿಚಾರಣೆ ಸಲುವಾಗಿ ದೆಹಲಿಗೆ ಕರೆದೊಯ್ದಿದ್ದಾರೆ. ಈಗಾಗಲೇ ಐಸಿಸ್‌ ಆ್ಯಪ್‌ಗೆ ಸಿದ್ಧಪಡಿಸುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಡಾ.ಅಬ್ದುರ್‌ ರೆಹಮಾನ್‌ ಅಲಿಯಾಸ್‌ ಡಾ.ಬ್ರೇವ್‌ ಸಹ ಎನ್‌ಐಎ ಕಸ್ಟಡಿಯಲ್ಲಿದ್ದಾನೆ. 2014ರಲ್ಲಿ ಡಾ.ಬ್ರೇವ್‌ ಸಿರಿಯಾಗೆ ಐಸಿಸ್‌ ತರಬೇತಿಗೆ ಕಳುಹಿಸಿದರ ಹಿಂದೆ ಸಹ ಕುರಾನ್‌ ಸರ್ಕಲ್‌ ಕೈವಾಡ ಬಯಲಾಗಿದೆ. ಹೀಗಾಗಿ ದೆಹಲಿಯಲ್ಲಿ ಡಾ.ಬ್ರೇವ್‌ ಹಾಗೂ ಕುರಾನ್‌ ಸರ್ಕಲ್‌ ಸದಸ್ಯರನ್ನು ಮುಖಾಮುಖಿಯಾಗಿ ‘ಸಿರಿಯಾ ಯಾತ್ರೆ’ ಕುರಿತು ಪ್ರಶ್ನಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಧರ್ಮಕ್ಕೆ ಹಣ ಸುರಿದವರಿಗೆ ನಡುಕ

ಐಸಿಸ್‌ ಸಂಘಟನೆಗೆ ಟೊಂಕ ಕಟ್ಟಿದ್ದ ‘ಕುರಾನ್‌ ಸರ್ಕಲ್‌’ಗೆ ಹಣಕಾಸು ನೆರವು ನೀಡಿದ ದಾನಿಗಳಿಗೆ ಈಗ ಎನ್‌ಐಎ ನಡುಕು ಹುಟ್ಟಿಸಿದೆ. ಬ್ಯಾಂಕ್‌ ಉದ್ಯೋಗಿಯಾಗಿದ್ದ ಖಾದರ್‌, ಬ್ಯಾಂಕ್‌ನಲ್ಲಿ ಸಾಲ ಕೊಡಿಸುವ ನೆಪದಲ್ಲಿ ತನ್ನ ಸಮುದಾಯದ ಉದ್ಯಮಿಗಳಿಗೆ ಬಲೆ ಬೀಳಿಸಿಕೊಂಡಿದ್ದ. ಅದೇ ರೀತಿ ಅಕ್ಕಿ ವ್ಯಾಪಾರದಲ್ಲಿ ಪರಿಚಿತರಾದ ಸಮುದಾಯದ ವ್ಯಾಪಾರಿಗಳಿಗೆ ಇರ್ಫಾನ್‌ ಕೂಡಾ ಧರ್ಮ ಬೋಧನೆ ಮಾಡಿದ್ದ. ಹೀಗೆ ಕುರಾನ್‌ ಸರ್ಕಲ್‌ ಸದಸ್ಯರ ಪ್ರಭಾವಕ್ಕೊಳಗಾಗಿ ಧರ್ಮ ರಕ್ಷಣೆ ಸಲುವಾಗಿ ದೇಣಿಗೆ ನೀಡಿದವರಿಗೆ ಸಂಕಷ್ಟಎದುರಾಗಿದೆ. ಈಗಾಗಲೇ ಖಾದರ್‌ ಹಾಗೂ ಇರ್ಫಾನ್‌ ಬ್ಯಾಂಕಿನ ವಹಿವಾಟಿನ ಕುರಿತು ಕೆಲವು ದಾಖಲೆಗಳನ್ನು ಎನ್‌ಐಎ ಜಪ್ತಿ ಮಾಡಿದೆ ಎಂದು ತಿಳಿದು ಬಂದಿದೆ.

ಹವಾಲಾ ಮೂಲಕ ದೇಣಿಗೆ ಶಂಕೆ

ಕುರಾನ್‌ ಸರ್ಕಲ್‌ಗೆ ಕೆಲವು ವಿದೇಶೀಯರು ಸಹ ಆರ್ಥಿಕ ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ಆರೋಪಿಗಳಿಗೆ ಹವಾಲಾ ದಂಧೆ ಮೂಲಕ ವಿದೇಶೀಯರು ಹಣ ವರ್ಗಾವಣೆ ಮಾಡಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸಹ ಅವರು ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ.