ಬೆಂಗಳೂರು(ಅ.09): ಐಸಿಸ್‌ (ಇ​ಸ್ಲಾ​ಮಿಕ್‌ ಸ್ಟೇಟ್‌) ಉಗ್ರ ಸಂಘ​ಟ​ನೆ ಸೇರ್ಪಡೆಗೆ ಸಿರಿಯಾಗೆ ಕಳುಹಿಸುವ ಮುನ್ನ ಮುಸ್ಲಿಂ ಯುವಕರಿಗೆ ಮೂಲಭೂತವಾದದ ಬೋಧಿಸಲು ಬೆಂಗಳೂರು ನಗರ ಹೊರವಲಯದಲ್ಲಿ ತರಬೇತಿ ಕಾರ್ಯಾಗಾರ (ಇಕ್ರಾ ಕ್ಯಾಂಪ್‌)ವನ್ನು ‘ಕುರಾನ್‌ ಸರ್ಕಲ್‌’ ಸಮೂ​ಹ ನಡೆಸಿತ್ತು ಎಂಬ ಸಂಗತಿ ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕುರಾನ್‌ ಸರ್ಕಲ್‌ ಸಮೂ​ಹದ ಇಬ್ಬರು ಬೆಂಗ​ಳೂ​ರಿ​ನ​ಲ್ಲಿ ಗುರು​ವಾರ ಎನ್‌​ಐ​ಎ​ಯಿಂದ ಬಂಧಿ​ತ​ರಾ​ಗಿದ್ದು, ಈ ವೇಳೆ ಇವರ ಚಟು​ವ​ಟಿ​ಕೆ​ಯ ಕೆಲವು ಮಾಹಿ​ತಿ​ಗಳು ಲಭಿ​ಸಿ​ವೆ.

ಧಾರ್ಮಿಕ ವಿಚಾರಗಳ ಬಗ್ಗೆ ಶ್ರದ್ಧೆ ಹೊಂದಿರುವ ಯುವಕರನ್ನು ಆರೋಪಿಗಳು ಗುರುತಿಸುತ್ತಿದ್ದರು. ಬಳಿಕ ಆ ಯುವಕರನ್ನು ಸ್ನೇಹದ ಸೋಗಿನಲ್ಲಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದ ‘ಕುರಾನ್‌ ಸರ್ಕಲ್‌’, ಆ ಯುವಕರನ್ನು ಮೂಲಭೂತವಾದಿಗಳಾಗಿ ರೂಪಿಸಲು ನಗರ ಹೊರವಲಯದ ಗೌಪ್ಯ ಸ್ಥಳದಲ್ಲಿ ಕ್ಯಾಂಪ್‌ ನಡೆಸುತ್ತಿದ್ದರು. ಈ ಕ್ಯಾಂಪ್‌ನಲ್ಲಿ ಇಸ್ಲಾಂ ಧರ್ಮ ಅಪಾಯದಲ್ಲಿದೆ. ನಾವು ಧರ್ಮಕ್ಕೆ ಹೋರಾಟ ಮಾಡಬೇಕಿದೆ ಎಂದು ಪ್ರಚೋದಾನಕಾರಿ ಭಾಷಣ ಮಾಡುತ್ತಿದ್ದರು. ಅಲ್ಲದೆ ದೇಶ-ವಿದೇಶಗಳಲ್ಲಿ ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯ ನಡೆದಿದೆ ಎಂದೂ ಬಿಂಬಿಸುವ ಕೆಲವು ವಿಡಿಯೋಗಳನ್ನು ಸಹ ಯುವಕರಿಗೆ ಆರೋಪಿಗಳು ತೋರಿಸುತ್ತಿದ್ದರು. ಈ ಕ್ಯಾಂಪ್‌ಗೆ ‘ಇಕ್ರಾ ಕ್ಯಾಂಪ್‌’ ಎಂದು ಕರೆಯುತ್ತಿದ್ದರು. ಇಲ್ಲಿ ‘ಭವಿಷ್ಯದ ಐಸಿಸ್‌ ದೇಶ’ ನಿರ್ಮಾಣದ ದುಷ್ಟ ಕನಸಿನ ಯೋಜನೆ ಸಾಕಾರಗೊಳಿಸುವ ತಯಾರಿ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೌದಿಯಲ್ಲೇ ಕುಳಿತು ಬೆಂಗ್ಳೂರಿ​ಗ​ನ ಸಂಘಟನೆ

ಐಸಿಸ್‌ ಸಂಘಟನೆಗೆ ಕಾರ್ಯನಿರ್ವಹಿಸುತ್ತಿದ್ದ ‘ಕುರಾನ್‌ ಸರ್ಕಲ್‌’ ಸಮೂ​ಹಕ್ಕೆ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಬೆಂಗಳೂರು ಮೂಲದ ವ್ಯಕ್ತಿಯೇ ಬಾಸ್‌ ಆಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೌದಿ ಅರೇಬಿಯಾದ ನೆಲೆಸಿರುವ ಸೈಯದ್‌ ಇಕ್ಬಾಲ್‌ ಝಹೀರ್‌, ಕುರಾನ್‌ ಸರ್ಕಲ್‌ಗೆ ಆರ್ಥಿಕ ನೆರವು ನೀಡುತ್ತಿದ್ದ. ಬೆಂಗಳೂರಿನಲ್ಲಿ ಯಾವ ವ್ಯಕ್ತಿಯನ್ನು ಸಂಘಟನೆಗೆ ಸೇರಿಸಿಕೊಳ್ಳಬೇಕು. ಯಾರನ್ನು ಗುರಿಯಾಗಿಸಿ ಕೆಲಸ ಮಾಡಬೇಕು ಹೀಗೆ ಸಂಘಟನೆಯ ಪ್ರತಿಯೊಂದು ಸೂಚನೆಯನ್ನು ಆತನೇ ನೀಡುತ್ತಿದ್ದ. ಬೆಂಗಳೂರಿನಲ್ಲಿ ತನ್ನ ಸಂಪರ್ಕ ಜಾಲವನ್ನು ಇಕ್ಬಾಲ್‌ ಹೊಂದಿದ್ದಾನೆ. ಆ ಸ್ನೇಹ ಬಳಸಿಕೊಂಡು ಐಸಿಸ್‌ ಬಲವರ್ಧನೆಗೆ ಯತ್ನಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಂಡ್ಲುಪೇಟೆ, ಶಿವನಸಮುದ್ರದಲ್ಲಿ ಐಸಿಸ್‌ ಉಗ್ರ ಶಿಬಿರ!

6-7 ಗುಂಪುಗಳು ಸಿರಿಯಾಗೆ!

ಹಲವು ವರ್ಷಗಳಿಂದ ಐಸಿಸ್‌ ಸಂಘಟನೆಯಲ್ಲಿ ತೊಡಗಿರುವ ಕುರಾನ್‌ ಸರ್ಕಲ್‌, ಇದುವರೆಗೆ ಸುಮಾರು 6 ರಿಂದ 7 ಗುಂಪುಗಳನ್ನು ಸಿರಿಯಾಗೆ ಕಳುಹಿಸಿರುವ ಮಾಹಿತಿ ಸಿಕ್ಕಿದೆ. ಇದರಲ್ಲಿ ಡಾ.ಅಬ್ದುರ್‌ ರೆಹಮಾನ್‌ ಸಹ ಒಬ್ಬನಾಗಿದ್ದಾನೆ. ಹೀಗೆ ಸಿರಿಯಾಗೆ ಐಸಿಸ್‌ ತರಬೇತಿಗೆ ತೆರಳಿದ್ದ ಯುವಕರಲ್ಲಿ ಇಬ್ಬರು ಹತರಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಕುರಾನ್‌ ಸರ್ಕಲ್‌’ ವಾಟ್ಸಾಪ್‌ ಗ್ರೂಪ್‌

ತಮ್ಮ ಗುಂಪಿನ ಸದಸ್ಯರೊಂದಿಗೆ ಸಂವಹನಕ್ಕೆ ‘ಕುರಾನ್‌ ಸರ್ಕಲ್‌’ ವಾಟ್ಸಾಪ್‌ ಗ್ರೂಪ್‌ ಸಹ ರಚಿಸಿಕೊಂಡಿದ್ದರು. ಇದರಲ್ಲಿ ಐಸಿಸ್‌ ಬಗ್ಗೆ ಅನುಕಂಪ ಹೊಂದಿರುವ ಯುವಕರನ್ನು ಸೇರಿಸಿಕೊಂಡಿದ್ದರು. ಇಸ್ಲಾಂ ಧರ್ಮದ ವಿದ್ಯಮಾನಗಳ ಬಗ್ಗೆ ಚರ್ಚೆಗಳು ನಡೆದಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.