ದಾವಣಗೆರೆ ಜಿಲ್ಲೆಯ ಗುಮ್ಮನೂರಲ್ಲಿ ಮದುವೆಯಾದ ಎರಡೂವರೆ ತಿಂಗಳಲ್ಲೇ ನವವಿವಾಹಿತ ಹರೀಶ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಆಘಾತಗೊಂಡ, ಮದುವೆ ಮಾಡಿಸಿದ್ದ ಯುವತಿಯ ಸೋದರ ಮಾವ ರುದ್ರೇಶ್ ಕೂಡಾ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.
ದಾವಣಗೆರೆ: ಮದುವೆ ಪ್ರತಿಯೊಬ್ಬರ ಜೀವನದಲ್ಲಿ ನಿರ್ಣಾಯಕ ಘಟ್ಟ. ಆದರೆ ಕೆಲವು ಮದುವೆಗಳು ಸುಖ-ಸಂಸಾರಕ್ಕೆ ರಾಜಮಾರ್ಗವಾದರೆ, ಇನ್ನೂ ಕೆಲವು ಮದುವೆಗಳು ನರಕದ ಕೂಪಗಳಾಗಿ ಬದಲಾಗುತ್ತವೆ. ಇದೀಗ ಇಂತಹದ್ದೇ ಒಂದು ಘಟನೆ ದಾವಣಗೆರೆ ಜಿಲ್ಲೆಯ ಗುಮ್ಮನೂರಲ್ಲಿ ನಡೆದಿದ್ದು, ಮದುವೆಯಾದ ಎರಡೂವರೆ ತಿಂಗಳಿನಲ್ಲೇ ನವವಿವಾಹಿತ ಹರೀಶ್ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಇನ್ನು ಹರೀಶ್ ಆತ್ಮ*ಹತ್ಯೆ ಮಾಡಿಕೊಂಡ ವಿಷಯ ಕೇಳಿ, ಆತನಿಗೆ ಮದುವೆ ಮಾಡಿಸಿದ್ದ ಯುವತಿಯ ಸೋದರ ಮಾವ 40 ವರ್ಷದ ರುದ್ರೇಶ್ ಕೂಡಾ ಸಾವಿಗೆ ಶರಣಾದ ವಿಚಿತ್ರ ಘಟನೆ ನಡೆದಿದೆ.
ಕಳೆದ ಎರಡೂವರೆ ತಿಂಗಳ ಹಿಂದಷ್ಟೇ ಹರೀಶ್, ಸರಸ್ವತಿ ಎನ್ನುವ ಯುವತಿಯನ್ನು ಮದುವೆಯಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಎಚ್‌ಆರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಅವರಿಗೆ ರುದ್ರೇಶ್ ಎನ್ನುವವರು ಸರಸ್ವತಿಯನ್ನು ಮದುವೆ ಮಾಡಿಸಿದ್ದರು. ಅಂದಹಾಗೆ ರುದ್ರೇಶ್, ಸರಸ್ವತಿಯವರ ಸೋದರ ಮಾವ. ಆದರೆ ಮದುವೆಯಾಗಿ ಇನ್ನೂ ಕೇವಲ ಮೂರು ತಿಂಗಳು ತುಂಬುವುದರೊಳಗಾಗಿ ಹರೀಶ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.
ಹರೀಶ್ ಸಾವಿನ ಬೆನ್ನಲ್ಲೇ ರುದ್ರೇಶ್ ಕೂಡಾ ಆತ್ಮ*ಹತ್ಯೆ:
ಗುಮ್ಮನೂರಿನ ನವ ವಿವಾಹಿತ ಹರೀಶ್ ಆತ್ಮ*ಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ, ಅವರಿಗೆ ಮದುವೆ ಮಾಡಿಸಿದ ಸರಸ್ವತಿ ಸೂದರ ಮಾವ ರುದ್ರೇಶ್ ಕೂಡಾ ವಿಷ ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಆನೆಕೊಂಡದ ತಮ್ಮ ಮನೆಯಲ್ಲಿ ರುದ್ರೇಶ್ ವಿಷ ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಇನ್ನು ತೀವ್ರವಾಗಿ ಅಸ್ವಸ್ಥಗೊಂಡಿದ್ದ ರುದ್ರೇಶ್ ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರುದ್ರೇಶ್ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.
ಆತ್ಮ*ಹತ್ಯೆಗೆ ನಿಖರ ಕಾರಣ ತಿಳಿದಿಲ್ಲ!
ಇನ್ನು ನವವಿವಾಹಿತ ಹರೀಶ್ ಹಾಗೂ ಸರಸ್ವತಿಯವರ ಸೋದರ ಮಾವ ಯಾವ ಕಾರಣಕ್ಕೆ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಬಗ್ಗೆ ಯಾವುದೇ ನಿಖರ ಮಾಹಿತಿ ತಿಳಿದುಬಂದಿಲ್ಲ. ಈ ಕುರಿತಂತೆ ದಾವಣಗೆರೆಯ ಆರ್‌ಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.


