ಇನ್ಮೇಲೆ ನಂದಿಬೆಟ್ಟ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಹೊಸ ರೂಲ್ಸ್

* ನಂದಿಗಿರಿಧಾಮ ಪ್ರವೇಶಕ್ಕೆ ಇನ್ಮೇಲೆ ಪಾಸ್ ಕಡ್ಡಾಯ
* ಪಾರ್ಕಿಂಗ್ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರಿಗೆ ನಂದಿಗರಿಧಾಮ ಪ್ರವೇಶ
* ನಂದಿಬೆಟ್ಟವನ್ನು ವೀಕ್ಷಿಸಲು ಜಿಲ್ಲಾಡಳಿತ ರೂಪಿಸಲಿರುವ ನೂತನ ನಿಯಮಗಳನ್ನು ಪಾಲಿಸಬೇಕು

New Rules For Chikkaballapur District nandi hills tourists rbj

ಚಿಕ್ಕಬಳ್ಳಾಪುರ, (ಜುಲೈ.15): ಜಿಲ್ಲೆಯ ನಂದಿಗಿರಿಧಾಮಕ್ಕೆ ಪ್ರವಾಸಿಗರು ಪ್ರವೇಶ ಪಡೆಯಬೇಕಾದರೆ ಇನ್ಮೇಲೆ ಕಡ್ಡಾಯವಾಗಿ  ಪಾಸ್ ಪಡೆಯಬೇಕು. ನೀವು ತೆರಳುವ ವಾಹನಕ್ಕೆ ಗಿರಿಧಾಮದ ಪಾರ್ಕಿಂಗ್ ಸ್ಥಳದಲ್ಲಿ ಜಾಗ ಸಿಕ್ಕರೆ ಮಾತ್ರ ಗಿರಿಧಾಮ ದರ್ಶನ ಆಗುತ್ತದೆ. ಪಾಸ್ ಇಲ್ಲದೇ ಹೋದರೆ ಗಿರಿಧಾಮ ದರ್ಶನ ಸಿಗದೇ ಬರಿಗೈಯಲ್ಲಿ ವಾಪಸ್ಸು ಬರಬೇಕು.

 ಹೌದು, ಪರಿಸರ ಸಂರಕ್ಷಣೆ, ವಾಹನ ದಟ್ಟಣೆ ಹಾಗೂ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಜುಲೈ 19 ರಿಂದ ನಂದಿಬೆಟ್ಟದ ವಾಹನ ನಿಲ್ದಾಣದಲ್ಲಿನ ವಾಹನ ನಿಲುಗಡೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರವಾಸಿಗರ ಭೇಟಿಗೆ ಅವಕಾಶ ನೀಡಲಾಗುವುದು. ಸಪ್ತಗಿರಿಗಳ ಧಾಮ, ಸಪ್ತ ನದಿಗಳ ಉಗಮ ಸ್ಥಾನವಾದ ನಂದಿಬೆಟ್ಟವನ್ನು ವೀಕ್ಷಿಸಲು ಜಿಲ್ಲಾಡಳಿತ ರೂಪಿಸಲಿರುವ ನೂತನ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ವೀಕೆಂಡ್ ಹಿನ್ನೆಲೆ : ನಂದಿ ಬೆಟ್ಟಕ್ಕೆ ಪ್ರವಾಸಿಗರ ದಂಡು

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ -19 ಲಾಕ್ ಡೌನ್ ಪ್ರಯುಕ್ತ ಏಪ್ರಿಲ್ 27 ರಿಂದ ಜಾರಿಯಲ್ಲಿದ್ದ ನಿರ್ಬಂಧವನ್ನು ತೆರೆವುಗೊಳಿಸಿ ಜೂನ್ 21 ರಿಂದ ನಂದಿಬೆಟ್ಟಕ್ಕೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿದ್ದರಿಂದ ಜುಲೈ 10 ರಂದು 2858 ಮತ್ತು ಜುಲೈ 11 ರಂದು 4895 ಪ್ರವಾಸಿಗರು ಭೇಟಿ ನೀಡಿದ್ದರು ಎಂದು ಹೇಳಿದರು.

  ಜನಸಂದಣಿ ದಿನೇ ದಿನೇ ಹೆಚ್ಚಾಗುತ್ತಿರುವುದನ್ನು ಮನಗಂಡ ಜಿಲ್ಲಾಡಳಿತ ಜುಲೈ 7 ರಂದು ವಾರಾಂತ್ಯದ ಪ್ರವಾಸಿಗರ ಭೇಟಿಯನ್ನು ನಿಷೇಧಿಸಿತ್ತು.  ಬಡವರ ಊಟಿ ಎಂದೇ ಹೆಸರುವಾಸಿಯಾದ ನಂದಿಬೆಟ್ಟವೂ ಬೆಂಗಳೂರು ರಾಜ್ಯಧಾನಿಗೆ ತುಂಬಾ ಹತ್ತಿರವಿರುದರಿಂದ ಹೆಚ್ಚೆಚ್ಚು ಪ್ರವಾಸಿಗರು ನಂದಿಬೆಟ್ಟಕ್ಕೆ ಭೇಟಿ ನೀಡುವುದನ್ನು ಮನಗಂಡ ಜಿಲ್ಲಾಡಳಿತ ನಂದಿಬೆಟ್ಟದ ಮೇಲೆ ಮುಂದಾಗಬಹುದಾದ ಜನಸಂದಣಿಯನ್ನು ತಡೆಗಟ್ಟಿ ಸುರಕ್ಷಿತವಾಗಿ ಪ್ರವಾಸಿಗರು ಬಂದು ಹೋಗಲು ವೈಜ್ಞಾನಿಕವಾಗಿ ವ್ಯವಸ್ಥಿತ ಯೋಜನೆಯನ್ನು ರೂಪಿಸುವ ಉದ್ದೇಶ ಹೊಂದಿದೆ ಎಂದರು.

ಈ ಹಿನ್ನಲೆಯಲ್ಲಿ ಜುಲೈ 19 ರಿಂದ ವಾಹನ ನಿಲುಗಡೆಗೆ ಅವಕಾಶವಿರುವಷ್ಟು ಮಂದಿಯನ್ನು ಮಾತ್ರ ಪ್ರವೇಶ ಪಾಸ್ ಅನ್ನು ನೀಡಿ ನಂದಿಬೆಟ್ಟಕ್ಕೆ ಭೇಟಿ ನೀಡಲು ಯೋಜಿಸಲಾಗಿದೆ. ಅದಕ್ಕೆ ಪ್ರವಾಸಿಗರು ಸಹಕರಿಸಬೇಕು. ಆರಂಭದಲ್ಲಿ ಈ ಪ್ರಕ್ರಿಯೆಯು ಒಂದೆರಡು ವಾರ ಭೌತಿಕವಾಗಿ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆನ್‌ಲೈನ್ ಮೂಲಕ ನಿರ್ವಹಿಸಲಾಗುವುದು ಎಂದು ತಿಳಿಸಿದರು.

ಶೇ.50% ರಷ್ಟು ಪಾಸ್ ಗಳನ್ನು ಆನ್‌ಲೈನ್ ನಲ್ಲಿ ಶೇ.50% ಪಾಸ್ ಗಳನ್ನು ಬೆಟ್ಟಕ್ಕೆ ಪ್ರವೇಶಿಸುವ ಮುಖ್ಯದ್ವಾರದಲ್ಲಿ ನೀಡಲಾಗುತ್ತದೆ. ಸಾರ್ವಜನಿಕರು ಕೋವಿಡ್ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಿ ಪಾಸ್ ಪಡೆಯಬೇಕು. ಆರಂಭದಲ್ಲಿ ತುಸು ಗೊಂದಲವಾದರೂ ಸಹ ಮುಂದಿನ ದಿನಗಳಲ್ಲಿ ಈ ರೀತಿಯ ವ್ಯವಸ್ಥಿತ ವೀಕ್ಷಣೆಯಿಂದ ಪ್ರವಾಸಿತಾಣವನ್ನು ವೈಜ್ಞಾನಿಕವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರಸ್ತುತ ನಂದಿಗಿರಿಧಾಮದ ಮೇಲಿರುವ ವಾಹನ ನಿಲ್ದಾಣದಲ್ಲಿ ಪ್ರಸ್ತುತ 310 ಕಾರು, 550 ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಿದ್ದು, ಬೆಟ್ಟದ ಕೆಳಭಾಗದಲ್ಲಿ 350 ಕಾರು ಹಾಗೂ 200 ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡಬಹುದಾಗಿದೆ. ಈ ನಿಲುಗಡೆಯಲ್ಲಿ ಪಾರ್ಕ್ ಮಾಡಲು ವ್ಯವಸ್ಥೆ ಇರುವ ವಾಹನಗಳಲ್ಲಿನ ಪ್ರವಾಸಿಗರಿಗೆ ಮಾತ್ರ ಪಾಸ್ ವಿತರಿಸಿ ನಂದಿಬೆಟ್ಟ ವೀಕ್ಷಿಸಲು ಅನುಮತಿ ನೀಡಲಾಗುವುದು. ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಅವರ ನಿರ್ದೇಶನದಂತೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios