ಶೀಘ್ರದಲ್ಲೇ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಇದೇ ವೇಳೆ ಬಿಜೆಪಿಯಲ್ಲಿ ಹೊಸ ರಾಜಕೀಯ ಅಧ್ಯಾಯ ಶುರುವಾಗಿದೆ ಎನ್ನಲಾಗಿದೆ. 

ಮಂಡ್ಯ (ಡಿ.03): ಕೆ.ಆರ್‌.ಪೇಟೆಯಲ್ಲಿ ಕೆ.ಸಿ.ನಾರಾಯಣಗೌಡರ ಗೆಲುವಿನಿಂದ ಆರಂಭಿಸಿ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧಿಕಾರವನ್ನು ಹಿಡಿಯುವವರೆಗೆ ಬಿಜೆಪಿ ಜಿಲ್ಲೆಯಲ್ಲಿ ಹೊಸ ರಾಜಕೀಯ ಅಧ್ಯಾಯ ಮುಂದುವರೆದಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

ಗ್ರಾಮ ಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್‌ ಸಮಸ್ಯೆ ಜಾಸ್ತಿಯಾಯಿತು ಎಂದು ಜೆಡಿಎಸ್‌ ಹಾಗೂ ಕಾಂಗ್ರೆಸ್‌ನವರು ಬೊಬ್ಬೆ ಹೊಡೆದರು. ಗೆಳೆಯ ನಾರಾಯಣಗೌಡರು ಬಾಂಬೆಯಿಂದ ಜನ ಕರೆಸುತ್ತಿದ್ದಾರೆ ಎಂದು ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿದರು. ಆದರೆ, ಈಗೇನಾಗಿದೆ. ಮಂಡ್ಯ ಸುಭದ್ರವಾಗಿದೆ. ಇದಕ್ಕೆ ಕಾರಣ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾರ್ಯಕ್ಷಮತೆ ಎಂದರು.

'ಸಿದ್ದರಾಮಯ್ಯ ಕ್ರಾಸ್‌ಬ್ರೀಡ್‌ ಹಿಂದೂ'

ಕೃಷಿ ಕಾಯ್ದೆಗಳ ಬಗ್ಗೆ ರೈತರನ್ನು ಎತ್ತಿಕಟ್ಟುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ರೈತ ತಾನು ಬೆಳೆದ ಬೆಳೆಯನ್ನು ಯಾರಿಗಾದರೂ ಮಾರಿಕೊಳ್ಳುತ್ತಾನೆ. ಇವರಿಗೇನು ಕಷ್ಟ? ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಂಕಲ್ಪವನ್ನು ಹಾಳುಮಾಡುವ ಹುನ್ನಾರವೇ?, ಇಂತಹದ್ದಕ್ಕೆಲ್ಲಾ ಬಿಜೆಪಿ ಸರ್ಕಾರ ಬಗ್ಗುವುದಿಲ್ಲ.

ರೈತರಿಗೆ ಒಳಿತಾಗುವ ತನಕ ವಿಶ್ರಮಿಸುವುದಿಲ್ಲ. ನಮ್ಮ ಅದೃಷ್ಟನೋಡಿ. ಕಾಂಗ್ರೆಸ್‌-ಜೆಡಿಎಸ್‌ನಿಂದ ಬೇಸತ್ತು ಬಿಜೆಪಿಗೆ ಸೇರಿದ ನಮ್ಮಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಎಂತೆಂತಹ ಖಾತೆಗಳನ್ನು ನೀಡಿದ್ದಾರೆ. ನೇರವಾಗಿ ರೈತರ, ಬಡವರ ಕಣ್ಣೀರನ್ನು ಒರೆಸುವ ಖಾತೆಗಳನ್ನು ನೀಡಿದ್ದಾರೆ. ಇಂತಹ ಹೃದಯ ವೈಶಾಲ್ಯತೆ ಯಾರಿಗಿದೆ ಎಂದು ಸೋಮಶೇಖರ್‌ ಪ್ರಶ್ನಿಸಿದರು.