ಕಲಬುರಗಿ: ದಾಸೋಹ ಪೀಠಕ್ಕೆ 2 ವರ್ಷದ ಚಿ. ದೊಡ್ಡಪ್ಪ ಅಪ್ಪ ಪೀಠಾಧಿಪತಿ
ದಾಸೋಹ ಪೀಠದಲ್ಲಿ ವಿರಾಜಮಾನ ೮ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರಿಂದ ಚಿ. ದೊಡ್ಡಪ್ಪರಿಗೆ ರಜಿತ ಕಿರೀಟ ಧಾರಣೆ| ಪೀಠಾಧಿಪತಿ ದೀಕ್ಷೆ ಬೋಧನೆ ಥಿ ದಾಸೋಹ ಮಹಾಮನೆಯಲ್ಲಿನ ಧಾರ್ಮಿಕ ಸಮಾರಂಭದಲ್ಲಿ ನಾಡಿನ ವೀರಶೈವ ಸಮಾಜದ ವಿವಿಧ ಮಠಾಧೀಶರು ಭಾಗಿ, ಶರಣರ ನಂದಾದೀವಿಗೆ ಮುಂದೆಯೇ ದೀಕ್ಷೆ|
ಕಲಬುರಗಿ(ಡಿ.23): ಎರಡು ಶತಮಾನಗಳಷ್ಟು ಪ್ರಾಚೀನವಾಗಿರುವ ಹಾಗೂ ಮಹಾ ದಾಸೋಹ ಪರಂಪರೆ ಪೋಷಿಸಿಕೊಂಡು ಹೊರಟಿರುವ ಇಲ್ಲಿನ ಶರಣಬಸವೇಶ್ವರ ಮಹಾ ದಾಸೋಹ ಪೀಠದ 9ನೇ ಪೀಠಾಧಿಪತಿಯಾಗಿ ಎರಡು ವರ್ಷದ ಚಿ. ದೊಡ್ಡಪ್ಪ ಅಪ್ಪ ಅವರಿಗೆ ಅಭಿಷೇಕ ಮಾಡಲಾಗಿದೆ.
ಈ ಪೀಠದದಲ್ಲಿ ಡಾ. ಶರಣಬಸವಪ್ಪ ಅಪ್ಪ 8ನೇ ಪೀಠಾಧಿಪತಿಯಾಗಿ ಪ್ರಸ್ತುತ ವಿರಾಜಮಾನರಾಗಿದ್ದಾರೆ. ಚಿ. ದೊಡ್ಡಪ್ಪ ಅವರು ಡಾ. ಶರಣಬಸವಪ್ಪನವರ ಪುತ್ರರು. ಹೀಗಾಗಿ ಡಾ. ಅಪ್ಪ ನಂತರ ದಾಸೋಹ ಸಂಸ್ಥಾನದ ಉತ್ತರಾಧಿಕಾರಿಯಾಗಿ ಚಿ. ದೊಡ್ಡಪ್ಪ ಅವರನ್ನು ನಾಡಿನ ಹರಗುರುಚರ ಮೂರ್ತಿಗಳೆಲ್ಲರೂ ಸೇರಿಕೊಂಡು ಅಧಿಕೃತವಾಗಿ ಘೋಷಣೆ ಮಾಡಿದರು.
ಚಿ. ದೊಡ್ಡಪ್ಪ ಅಪ್ಪ ಅವರ 9ನೇ ಪೀಠಾಧಿಪತಿ ಘೋಷಣೆ ಧಾರ್ಮಿಕ ಸಮಾರಂಭಗಳು 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾ ಅವರ ಸಮ್ಮುಖದಲ್ಲಿಯೇ ನಡೆದವು. ಧಾರ್ಮಿಕ ವಿಧಿವಿಧಾನ, ಸ್ತೋತ್ರಗಳನ್ನು ಪಠಿಸುವ ಮೂಲಕ ಮಾತೋಶ್ರೀ ದಾಕ್ಷಾಯಿಣಿ, ವೀರಶೈವ ಮಠಗಳ ಗುರುಗಳ ಸಮ್ಮುಖದಲ್ಲಿ 2 ಶತಮಾನಗಳ ಹಿಂದೆಯೇ ಶರಣರು ಬೆಳಗಿಸಿದ ಈಗಲೂ ಪ್ರಕಾಶಮಾನವಾಗಿರುವ ‘ನಂದಾ ದೀಪ’ದ ಎದುರು ಚಿ. ದೊಡ್ಡಪ್ಪ ಅವರಿಗೆ ಪಟ್ಟಾಧಿಕಾರ ಅಭಿಷೇಕ ಮತ್ತು ಉತ್ತರಾಧಿಕಾರ ಸಾಕಾರಗೊಳಿಸಲಾಯಿತು.
ದಾಸೋಹ ಮೂರುತಿ ಶರಣಬಸವೇಶ್ವರರು ತಮ್ಮ ಕೊನೆಯ ದಿನಗಳನ್ನು ಕಳೆದ ಕೋಣೆಯ ಪಕ್ಕದಲ್ಲಿದ್ದ ಪೂಜಾ ಕೋಣೆಯನ್ನು ಪವಿತ್ರ ಸ್ಥಳವೆಂದು ಪರಿಗಣಿಸಿಲಾಗಿದ್ದು, ಡಾ. ಅಪ್ಪಾ ಅವರು ಮೊದಲು ಬೆಳಗ್ಗೆ ನಂದಾ ದೀಪಕ್ಕೆ ಪೂಜೆ ಸಲ್ಲಿಸಿಯೇ ತಮ್ಮ ದಿನಚರಿ ಪ್ರಾರಂಭಿಸುವುದು ವಾಡಿಕೆ. ಇದೇ ಪವಿತ್ರ ಸ್ಥಳದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಚಿ. ದೊಡ್ಡಪ್ಪರಿಗೆ ಉತ್ತರಾಧಿಕಾರತ್ವ ಸಾಕಾರಗೊಳಿಸಿದ ಧಾರ್ಮಿಕ ಮಠಾಧೀಶರಲ್ಲಿ ಪ್ರಮುಖರಾದ ಬೀದರ್ ಜಿಲ್ಲೆಯ ಹಾರಕೂಡ ಸಂಸ್ಥಾನ ಮಠದ ಡಾ. ಚೆನ್ನವೀರ ಶಿವಾಚಾರ್ಯರು, ಆಂಧ್ರಪ್ರದೇಶದ ಶ್ರೀಶೈಲಂ ಮಠದ ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಸುಲಫಲ ಮಠ, ಚೌಡಾಪುರ ಮಠದ ರಾಜಶೇಖರ ಸ್ವಾಮೀಜಿ, ಕಲಬುರಗಿ, ಮುಗಳನಾಗಾಂವ ಕಟ್ಟಿಮನಿ ಹಿರೇಮಠ ಸಂಸ್ಥಾನದ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಬೆಳಗುಂಪಿಯ ಅಭಿನವ ಮುನೀಂದ್ರ ಸ್ವಾಮೀಜಿ, ಸಿದ್ದಲಿಂಗ ಶಿವಾಚಾರ್ಯರು ಮಡಕಿ ಹಾಗೂ ದೊಡ್ಡಪ್ಪರ ಸಹೋದರಿಯರಾದ ಶಿವಾನಿ, ಕೋಮಲ ಮತ್ತು ಮಹೇಶ್ವರಿ ಹಾಜರಿದ್ದರು.
ಎಂಎಲ್‌ಸಿ ಬಿ.ಜಿ. ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ಪಾಲಿಕೆ ಮೇಯರ್ ಶರಣು ಮೋದಿ, ಮಾಜಿ ಎಂಎಲ್‌ಸಿ ಶಶೀಲ್ ನಮೋಶಿ, ನಿವೃತ ಪೊಲೀಸ್ ವರಿಷ್ಠಾಧಿಕಾರಿ ಬಸವರಾಜ, ವೀರಶೈವ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯ ಅರುಣಕುಮಾರ್ ಪಾಟೀಲ, ಶ್ರೀಶೈಲ್ ಗೂಳಿ, ಹಿರಿಯ ವಕೀಲ ಶರಣಬಸವಪ್ಪ ದೇಶಮುಖ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಡಾ. ಗಂಗಾಂಬಿಕ ನಿಷ್ಟಿ ಮತ್ತು ಕುಟುಂಬದ ಸದಸ್ಯರು ಇದ್ದರು.
ಅಭಿಷೇಕಕ್ಕೂ ಮುಂಚೆ ದಾಕ್ಷಾಯಿಣಿ ಅವರು ಗಣೇಶ, ಶರಣಬಸವೇಶ್ವರ ಮತ್ತು ಇತರ ವಿಗ್ರಹಗಳಿಗೆ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ಆಚರಣೆ ನೆರವೇರಿಸಿದರು. ಧಾರ್ಮಿಕ ವಚನಗಳು ಮತ್ತು ಸ್ತುತಿಗೀತೆಗಳ ಪಠಣದೊಂದಿಗೆ ಗುರುಗಳು ಚಿ. ದೊಡ್ಡಪ್ಪಗೆ ದೀಕ್ಷೆ ನೀಡಿದರು.
ದೀಕ್ಷಾ ಸಮಾರಂಭದ ಪ್ರಕ್ರಿಯೆಯಾದ್ಯಂತ ದೊಡ್ಡಪ್ಪ ಅಪ್ಪಾ ತಮ್ಮ ತಂದೆ ಡಾ. ಶರಣಬಸವಪ್ಪ ಅಪ್ಪಾ ಮಡಿಲಲ್ಲಿದ್ದು ಗಮನ ಸೆಳೆದರು. ದಾಸೋಹ ಮಹಾಮನೆ ಮುಖ್ಯ ಸಭಾಂಗಣದಲ್ಲಿ ಪೀಠಾರೋಹಣ ನಡೆಯಿತು. ಪ್ರಸ್ತುತ ಪೀಠಾಧಿಪತಿ ಡಾ. ಅಪ್ಪಾ ಅವರ ಗದ್ದಿಗೆಯಲ್ಲಿ ಉತ್ತರಾಧಿಕಾರಿ ಚಿ. ದೊಡ್ಡಪ್ಪ ಅಪ್ಪಾ ಅವರನ್ನು ಕೂಡಿಸಿ ಅವರನ್ನು 9ನೇ ಪೀಠಾಧೀಪತಿ ಎಂದು ವಿವಿಧ ಮಠಾಧೀಶರು ಹಾಗೂ ಭಕ್ತ ಸಮೂಹದ ಮಧ್ಯೆ ಅಧಿಕೃತವಾಗಿ ಘೋಷಿಸಲಾಯಿತು.
ಡಾ. ಅಪ್ಪಾ ಅವರಿಗೆ ಸಲ್ಲುವ ಸಕಲ ಗೌರವ ಮರ್ಯಾದೆಗಳನ್ನು ಉತ್ತರಾಧಿಕಾರಿಗೆ ವಿಸ್ತರಿಸಬೇಕು ಎಂದು ಸಮಾರಂಭದಲ್ಲಿ ಬೋಧಿಸಲಾಯಿತು. ಇದೇ ಸಂದರ್ಭದಲ್ಲಿ ತಮ್ಮ ತಂದೆ ದೊಡ್ಡಪ್ಪ ಅವರು 36 ವರ್ಷಗಳ ಹಿಂದೆ ಸಂಸ್ಥಾನದ ೮ನೇ ಪೀಠಾಧಿಪತಿಯಾಗಿ ಅಭಿಷೇಕ ಮಾಡಿದ ದಿನವನ್ನು ಡಾ. ಅಪ್ಪಾ ನೆನಪಿಸಿಕೊಂಡರು. ಶರಣಬಸವ ವಿವಿ ಕುಲಸಚಿವ ಡಾ. ಅನಿಲಕುಮಾರ ಬಿಡವೆ, ವಿವಿಯ ಮೌಲ್ಯಮಾಪನ ಕುಲಸಚಿವ ಲಿಂಗರಾಜ ಶಾಸ್ತ್ರಿ, ಡೀನ್ ಲಕ್ಷ್ಮೀ ಪಾಟೀಲ್ ಇದ್ದರು.
ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲರಿಗೂ ಅವರ ದಯೆ ಮತ್ತು ಕರುಣೆ ಪ್ರದರ್ಶಿಸುವ ಮೂಲಕ 7ನೇ ಪೀಠಾಧಿಪತಿಯಾಗಿದ್ದ ದೊಡ್ಡಪ್ಪ ಅಪ್ಪಾ ಅವರು ಚಿ. ದೊಡ್ಡಪ್ಪ ರೂಪದಲ್ಲಿ ಪುನರವರಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಚಿ. ದೊಡ್ಡಪ್ಪ ಅಪ್ಪಾ ಅವರು ನನ್ನ ತಂದೆಯ ಎಲ್ಲಾ ಸದ್ಗುಣ ಮೈಗೂಡಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಅಪ್ಪ ಶರಣ ಸಂಸ್ಥಾನ ಕಲಬುರಗಿ ಡಾ. ಶರಣಬಸವಪ್ಪ ಅವರು ತಿಳಿಸಿದ್ದಾರೆ.
ಈ ದಿನವನ್ನು ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಪದಗಳಲ್ಲಿ ಬರೆಯಲಾಗುವುದು. ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಅಭಿಷೇಕ ಸಮಾರಂಭಕ್ಕೆ ಸಾಕ್ಷಿಯಾಗಲು ನಾವು ಅದೃಷ್ಟಶಾಲಿಗಳು. ಭಾರತದಾದ್ಯಂತ ಮತ್ತು ಹೊರಗಿನ ಲಕ್ಷಾಂತರ ಭಕ್ತರಿಂದ ಈ ಸಂಸ್ಥಾನ ಪೂಜಿಸಲ್ಪಟ್ಟಿದೆ ಎಂದು ಶ್ರೀಶೈಲಂ (ಆಂಧ್ರಪ್ರದೇಶ) ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಅವರು ಹೇಳಿದ್ದಾರೆ.