Asianet Suvarna News Asianet Suvarna News

Mysuru : ಜಿಲ್ಲೆಗೊಂದು ವಿವಿ ಕಣ್ಣೊರಸುವ ತಂತ್ರವೇ?

ರಾಜ್ಯ ಸರ್ಕಾರ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಏಳು ವಿನೂತನ ಮಾದರಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಆದೇಶಿಸಿದೆ. ಆದರೆ ಅಲ್ಲಿ ಯಾವುದೇ ಹೊಸ ಕೋರ್ಸುಗಳನ್ನು ಆರಂಭಿಸುವಂತಿಲ್ಲ ಎಂಬುದು ಸೇರಿದಂತೆ ಹಲವಾರು ಷರತ್ತುಗಳನ್ನು ವಿಧಿಸಿದೆ. ಹೀಗಾಗಿ ಹೊಸ ವಿವಿ ಆರಂಭವಾದರೂ ಸ್ಥಳೀಯ ವಿದ್ಯಾರ್ಥಿಗಳಿಗೆ ಏನು ಪ್ರಯೋಜನ?. ಇದೊಂದು ಕಣ್ಣೊರಸುವ ತಂತ್ರವೇ? ಎಂಬ ಪ್ರಶ್ನೆ ಕೇಳಿ ಬಂದಿದೆ.

  new Mysuru university without new courses, without new recruitment snr
Author
First Published Nov 9, 2022, 5:16 AM IST

ಅಂಶಿ ಪ್ರಸನ್ನಕುಮಾರ್‌

 ಮೈಸೂರು (ನ.09): ರಾಜ್ಯ ಸರ್ಕಾರ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಏಳು ವಿನೂತನ ಮಾದರಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಆದೇಶಿಸಿದೆ. ಆದರೆ ಅಲ್ಲಿ ಯಾವುದೇ ಹೊಸ ಕೋರ್ಸುಗಳನ್ನು ಆರಂಭಿಸುವಂತಿಲ್ಲ ಎಂಬುದು ಸೇರಿದಂತೆ ಹಲವಾರು ಷರತ್ತುಗಳನ್ನು ವಿಧಿಸಿದೆ. ಹೀಗಾಗಿ ಹೊಸ ವಿವಿ ಆರಂಭವಾದರೂ ಸ್ಥಳೀಯ ವಿದ್ಯಾರ್ಥಿಗಳಿಗೆ ಏನು ಪ್ರಯೋಜನ?. ಇದೊಂದು ಕಣ್ಣೊರಸುವ ತಂತ್ರವೇ? ಎಂಬ ಪ್ರಶ್ನೆ ಕೇಳಿ ಬಂದಿದೆ.

ಕಾಲೇಜುಗಳ ಮೇಲ್ವಿಚಾರಣೆಯನ್ನು ಸುಧಾರಿಸುವ ಉದ್ದೇಶದಿಂದ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ ವಿವಿಗಳನ್ನು ಚಾಮರಾಜನಗರ, ಬೀದರ್‌, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ಸ್ಥಾಪಿಸಲಾಗುವುದು ಎಂದ 2022-23ರ ರಾಜ್ಯ ಬಜೆಟ್‌ನಲ್ಲಿ ಹೊಸ ವಿವಿಗಳ ಸ್ಥಾಪನೆಯನ್ನು ಘೋಷಿಸಲಾಗಿತ್ತು. ಅದರಂತೆ ನ.5 ರಂದು ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ (ವಿಶ್ವವಿದ್ಯಾಲಯ) ಅಧೀನ ಕಾರ್ಯದರ್ಶಿ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದಾರೆ.

ಈ ವಿವಿಗಳು ಸಾಂಪ್ರದಾಯಿಕ ವಿವಿಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೇ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಲಾಗಿದೆ. ಸ್ನಾತಕೋತ್ತರ ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯಗಳೊಂದಿಗೆ ಈ ವಿವಿಗಳಿಗೆ ವಾರ್ಷಿಕ 2 ಕೋಟಿ ರು. ಆವರ್ತಕ ವೆಚ್ಚ ಬಳಸಿ ಕಾರ್ಯನಿರ್ವಹಿಸಲಿವೆ.

ಈ ವಿವಿಗಳಲ್ಲಿ ಯಾವುದೇ ಜಮೀನು, ವಾಹನ ಖರೀದಿಸುವಂತಿಲ್ಲ. ಹೊಸ ಕಟ್ಟಡ ನಿರ್ಮಿಸುವಂತಿಲ್ಲ. ಯಾವುದೇ ಹೊಸ ಹುದ್ದೆಗಳನ್ನು ಸೃಜಿಸುವಂತಿಲ್ಲ. ಮಾತೃ ವಿವಿಗಳಿಗೆ ಮಂಜುರಾಗಿರುವ ಹುದ್ದೆಗಳನ್ನು ಬಳಸಿಕೊಂಡು ಹೊಸ ವಿವಿ ಸ್ಥಾಪಿಸಬೇಕು. ಸಂಪೂರ್ಣವಾಗಿ ಡಿಜಿಟಲ್‌, ಕೌಶಲ್ಯಾಧಾರಿತ ಕಲಿಕೆಯೊಂದಿಗೆ ದುಡಿ ಮಾದರಿಯಂತೆ ಸ್ಥಾಪಿಸಬೇಕು ಎಂಬುದು ಪ್ರಮುಖ ಷರತ್ತುಗಳು.

ಇದಲ್ಲದೇ ಇದರೊಂದಿಗೆ ಏಕಾತ್ಮಕ ಸ್ವರೂಪದ ವಿವಿಯಾಗಿರುವ ಮಂಡ್ಯ ವಿವಿಯನ್ನು ಸಂಯೋಜಿತ ವಿವಿಯಾಗಿ ಪರಿವರ್ತಿಸಲಾಗಿದೆ. ಚಾಮರಾಜನಗರ ವಿವಿ ಅಲ್ಲಿನ ಡಾ.ಬಿ.ಆರ್‌. ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರ, ಹಾಸನ ವಿವಿ- ಅಲ್ಲಿನ ಹೇಮ ಗಂಗೋತ್ರಿ ಸ್ನಾತಕೋತ್ತರ ಕೇಂದ್ರ, ಮಂಡ್ಯ ವಿವಿಯು ಅಲ್ಲಿನ ಸರ್‌ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಆರಂಭವಾಗಲಿವೆ.

ಅದೇ ರೀತಿ ಬೀದರ್‌ ವಿವಿಯು ಭಾಲ್ಕಿ ಹಾಲಹಳ್ಳಿಯ ಜ್ಞಾನ ಕಾರಂಜಿ, ಕೊಡಗು ವಿವಿಯು ಕುಶಾಲನಗರದ ಚಿಕ್ಕಅಲುವಾರ, ಕೊಪ್ಪಳ ವಿವಿಯು ತಳಕಲ್‌ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ 4ನೇ ಮಹಡಿ, ಬಾಗಲಕೋಟೆ ವಿವಿಯು ಜಮಖಂಡಿ, ಹಾವೇರಿ ವಿವಿಯು ಕರಿಮತ್ತಿಹಳ್ಳಿಯಲ್ಲಿ ಆರಂಭವಾಗಲಿವೆ.

ತೊಡಕುಗಳು?

ಮೈಸೂರು ವಿವಿ ವ್ಯಾಪ್ತಿಗೆ ಒಳಪಡುವ ಹಾಸನ, ಮಂಡ್ಯ ಹಾಗೂ ಚಾಮರಾಜನಗರ ಸ್ನಾತಕೋತ್ತರ ಕೇಂದ್ರಗಳು ಇನ್ನು ಮುಂದೆ ವಿವಿಗಳಾಗಲಿವೆ. ಪ್ರಸ್ತುತ ಹಾಸನ ಹಾಗೂ ಮಂಡ್ಯ ಕೇಂದ್ರಗಳಲ್ಲಿ ತಲಾ 10 ಮಂದಿ ಕಾಯಂ ಬೋಧಕರು ಇದ್ದಾರೆ. ಚಾಮರಾಜನಗರ ಕೇಂದ್ರದಲ್ಲಿ ಇರುವವರೆಲ್ಲಾ ಅತಿಥಿ ಉಪನ್ಯಾಸಕರೇ!.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ತರಾತುರಿಯಲ್ಲಿ ಜಾರಿ ಮಾಡಿರುವುದರಿಂದ ಸಾಕಷ್ಟುಗೊಂದಲಗಳಿವೆ. ವಿದ್ಯಾರ್ಥಿಗಳು, ಪೋಷಕರ ಕಾಟ ತಾಳಲಾರದೇ ಕೆಲವು ಪ್ರಾಂಶುಪಾಲರು ಈ ಜವಾಬ್ದಾರಿಯೇ ಬೇಡ ಎನ್ನುತ್ತಿದ್ದಾರೆ.

ಈ ಮೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಎಲ್ಲಾ ಕೋರ್ಸುಗಳು ಇಲ್ಲ. ಹೀಗಾಗಿ ಇನ್ನು ಮುಂದೆ ಮಂಡ್ಯ, ಹಾಸನ, ಚಾಮರಾಜಗರ ಜಿಲ್ಲೆಗಳ ವಿದ್ಯಾರ್ಥಿಗಳು ಮೈಸೂರು ವಿವಿಯಲ್ಲಿ ಹೊರ ವಿವಿಗಳ ಕೋಟಾದಲ್ಲಿ ಸೀಟು ಪಡೆಯಬೇಕಾಗುತ್ತದೆ. ಹೊರ ವಿವಿಗಳ ವಿದ್ಯಾರ್ಥಿಗಳಿಗೆ ಒಂದೆರೆಡು ಸೀಟುಗಳ ಮಾತ್ರ ಮೀಸಲಿರುತ್ತವೆ. ಹೀಗಾಗಿ ಈ ಮೂರು ಜಿಲ್ಲೆಗಳ ವಿದ್ಯಾರ್ಥಿಗಳು ಮೈಸೂರಿನಲ್ಲಿ ಓದಬಯಸುವ ರಾಜ್ಯದ ಇತರೆ ವಿವಿಗಳ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ.

-- ಪ್ರಯೋಜನ ಏನು?--

- ಇನ್ನೂ ಏಳು ಮಂದಿಗೆ ಕುಲಪತಿಗಳಾಗುವ ಅವಕಾಶ. ಇದಕ್ಕಾಗಿ ಪೈಪೋಟಿ

- ನೇಮಕಾತಿ ನಂತರ ಭರಿಸಿರುವ ‘ಸಂಪನ್ಮೂಲ’ ಕ್ರೋಢೀಕರಣಕ್ಕೆ ಯತ್ನ.

- ಇದಕ್ಕಾಗಿ ಶೈಕ್ಷಣಿಕ, ಸಂಶೋಧನಾ ಕಾರ್ಯಗಳಿಗಿಂತ ಸಿವಿಲ್‌ ಕಾಮಗಾರಿಗಳಿಗೆ ಆದ್ಯತೆ

- ಅವಕಾಶ ಸಿಕ್ಕರೆ ಪ್ರಭಾವ, ಒತ್ತಡಕ್ಕೆ ಮಣಿದು, ಅಧ್ಯಾಪಕರು, ಅಧ್ಯಾಪಕೇತರರ ನೇಮಕಾತಿ

ಅರ್ಧದಷ್ಟುಹುದ್ದೆ ಖಾಲಿ

ಈಗಾಗಲೇ ಇರುವ ವಿವಿಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಬೋಧಕ, ಬೋಧಕೇತರ ಹುದ್ದೆಗಳು ಖಾಲಿ ಇವೆ. ಪ್ರತಿಷ್ಠಿತ ಮೈಸೂರು ವಿವಿಯಲ್ಲಿ ಅಗತ್ಯ ಬೋಧಕರು ಇಲ್ಲ ಎಂಬ ಕಾರಣಕ್ಕೆ ವಿಶ್ವ ವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಕಡಿಮೆ ಶ್ರೇಣಿ ನೀಡಿದೆ.

ಯಾವುದೇ ವಿವಿ ಕುಲಪತಿಗಳಾದರೂ 10 ರಿಂದ 15 ಸಾವಿರ ಸಂಚಿತ ವೇತನ ನೀಡಿ, ಅಧ್ಯಾಪಕೇತರರು, 25 ಸಾವಿರ ರು.ವರೆಗೆ ವೇತನ ನೀಡಿ ಅತಿಥಿ ಉಪನ್ಯಾಸಕರನ್ನು ತುಂಬಿದ್ದಾರೆ. ಇದರಲ್ಲಿ ಕೂಡ ಸಾಕಷ್ಟುಅವ್ಯವಹಾರಗಳು ನಡೆದಿರುವ ಆರೋಪಗಳು ಕೇಳಿ ಬರುತ್ತವೆ. ಕಾಯಂ ಅಧ್ಯಾಪಕರು, ಅಧ್ಯಾಪಕರ ನೇಮಕಾತಿ ಆಗುವುದಿಲ್ಲ. ಅಲ್ಲಿಯವರೆಗೆ ಇವರನ್ನು ತೆಗೆಯುವಂದಿಲ್ಲ ಎಂಬ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತದೆ.

Follow Us:
Download App:
  • android
  • ios