ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎನ್ಎಂಪಿಎ ತನ್ನ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಸರಕು ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ವಿದೇಶಿ ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯ ಒದಗಿಸಲು ಒಟ್ಟು 9.48 ಕೋಟಿ ರೂ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದೆ.
ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ (ಎನ್ಎಂಪಿಎ) ಸರಕು ನಿರ್ವಹಣಾ ಮೂಲಸೌಕರ್ಯ ಬಲವರ್ಧನೆ ಹಾಗೂ ಕ್ರೂಸ್ ಪ್ರಯಾಣಿಕರಿಗೆ ಆಧುನಿಕ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಒಟ್ಟು ₹ 9.48 ಕೋಟಿ ವೆಚ್ಚದ ಎರಡು ಪ್ರಮುಖ ಯೋಜನೆಗಳನ್ನು ಶುಕ್ರವಾರ ಉದ್ಘಾಟಿಸಲಾಯಿತು.
ನವ ಮಂಗಳೂರು ಬಂದರು ಪ್ರಾಧಿಕಾರ ಹಾಗೂ ದೀನದಯಾಳ್ ಬಂದರು ಪ್ರಾಧಿಕಾರದ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ಅವರು ನೂತನ ಸರಕು ಸಂಗ್ರಹಣಾ ಶೆಡ್ ಮತ್ತು ನವೀಕರಿಸಿದ ಅಂತಾರಾಷ್ಟ್ರೀಯ ಕ್ರೂಸ್ ಲೌಂಜ್ಗೆ ಚಾಲನೆ ನೀಡಿದರು.
ಬಂದರಿನ ವಾರ್ಫ್ ಪ್ರದೇಶದ ಒಳಭಾಗದಲ್ಲಿ ₹ 8.65 ಕೋಟಿ ವೆಚ್ಚದಲ್ಲಿ ನೂತನ ಮುಚ್ಚಿದ ಸರಕು ಸಂಗ್ರಹಣಾ ಶೆಡ್ ನಿರ್ಮಿಸಲಾಗಿದೆ. 120 ಮೀಟರ್ ಉದ್ದ ಹಾಗೂ 40 ಮೀಟರ್ ಅಗಲ ಹೊಂದಿದೆ. ರಸಗೊಬ್ಬರ, ಸಕ್ಕರೆ, ಮೆಕ್ಕೆಜೋಳ, ಆಹಾರ ಧಾನ್ಯಗಳು ಹಾಗೂ ಪಶು ಆಹಾರ ಸೇರಿದಂತೆ ಆಮದು-ರಫ್ತು ಸರಕುಗಳನ್ನು ಸಂಗ್ರಹಿಸಲು ಇಲ್ಲಿ ಹೆಚ್ಚುವರಿ ಸ್ಥಳಾವಕಾಶ ಕಲ್ಪಿಸಲಾಗಿದೆ.
ಸರಕುಗಳಿಗೆ ಮಳೆ ಸೇರಿದಂತೆ ಹವಾಮಾನ ವೈಪರೀತ್ಯಗಳಿಂದ ರಕ್ಷಣೆ ಒದಗಿಸುವುದರ ಜತೆಗೆ ಸಂಗ್ರಹಣೆ ಮತ್ತು ನಿರ್ವಹಣಾ ದಕ್ಷತೆ ಹೆಚ್ಚಿಸಲು ಈ ಸೌಲಭ್ಯ ಸಹಕಾರಿಯಾಗಲಿದೆ. ಹೆಚ್ಚುತ್ತಿರುವ ವ್ಯಾಪಾರ ಬೇಡಿಕೆಯನ್ನು ಪೂರೈಸುವುದರೊಂದಿಗೆ ಬಂದರಿನಲ್ಲಿ ಹೊಸ ಸರಕುಗಳ ನಿರ್ವಹಣೆಗೂ ಇದು ಅವಕಾಶ ಕಲ್ಪಿಸಲಿದೆ.
ಇದೇ ವೇಳೆ ₹ 83.26 ಲಕ್ಷ ವೆಚ್ಚದಲ್ಲಿ ನವೀಕರಿಸಲಾದ ಎನ್ಎಂಪಿಎ ಅಂತಾರಾಷ್ಟ್ರೀಯ ಕ್ರೂಸ್ ಲೌಂಜ್ ಕೂಡ ಉದ್ಘಾಟಿಸಲಾಯಿತು. ಸುಮಾರು 18 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಲೌಂಜ್ನ್ನು ಅಂತಾರಾಷ್ಟ್ರೀಯ ಕ್ರೂಸ್ ಪ್ರಯಾಣಿಕರು ಹಾಗೂ ವಿದೇಶಿ ಪ್ರವಾಸಿಗರಿಗೆ ಆಧುನಿಕ ಮತ್ತು ಆರಾಮದಾಯಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಸಮಗ್ರವಾಗಿ ನವೀಕರಿಸಲಾಗಿದೆ.
2,582 ಚದರ ಮೀಟರ್ ವಿಸ್ತೀರ್ಣದ ಪ್ರದೇಶದಲ್ಲಿ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದ್ದು, ಹೆಚ್ಚುವರಿಯಾಗಿ 432 ಚದರ ಮೀಟರ್ ವಿಸ್ತರಣೆ ಮಾಡಲಾಗಿದೆ. ಹೊಸ ವಿಟ್ರಿಫೈಡ್ ಟೈಲ್ಸ್ ನೆಲಹಾಸು, ಅಲ್ಯೂಮಿನಿಯಂ ಕಾಂಪೋಸಿಟ್ ಪ್ಯಾನೆಲ್ ಹೊದಿಕೆ ಹಾಗೂ ಫಾಲ್ಸ್ ಸೀಲಿಂಗ್ ಅಳವಡಿಸಲಾಗಿದೆ.
ಈ ಎರಡೂ ಯೋಜನೆಗಳು ಬಂದರಿನ ಸರಕು ನಿರ್ವಹಣಾ ಸಾಮರ್ಥ್ಯ ಹೆಚ್ಚಿಸುವುದು, ಆಮದು-ರಫ್ತು ವ್ಯಾಪಾರಕ್ಕೆ ಉತ್ತೇಜನ ನೀಡುವುದು ಹಾಗೂ ಕ್ರೂಸ್ ಪ್ರವಾಸೋದ್ಯಮಕ್ಕೆ ಪೂರಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿವೆ.
ರೈಲ್ವೆ ಸಂಪರ್ಕ ಬಲವರ್ಧನೆ ಪ್ರಸ್ತಾಪ
ಉದ್ಘಾಟನೆಗೆ ಮುನ್ನ ಸುಶೀಲ್ ಕುಮಾರ್ ಸಿಂಗ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧ್ಯಕ್ಷತೆಯಲ್ಲಿ ನಡೆದ ರೈಲ್ವೆ ಸಂಪರ್ಕ ವ್ಯವಸ್ಥೆಯ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದರು.
ಮಂಗಳೂರು-ಬೆಂಗಳೂರು ರೈಲು ಮಾರ್ಗದ ದ್ವಿಪಥೀಕರಣ ಸೇರಿದಂತೆ ಮಂಗಳೂರು ಪ್ರದೇಶದ ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ಒಳನಾಡು ಪ್ರದೇಶಗಳಿಗೆ ರೈಲ್ವೆ ಸಂಪರ್ಕವನ್ನು ವಿಸ್ತರಿಸುವುದರಿಂದ ಬಂದರಿನ ಸರಕು ಸಾಗಣೆ ಸುಗಮಗೊಳ್ಳುವುದರ ಜತೆಗೆ ಪ್ರಾದೇಶಿಕ ಸಾರಿಗೆ ಮತ್ತು ಸರಕು ಸಾಗಣೆ ಜಾಲ ಮತ್ತಷ್ಟು ಬಲಗೊಳ್ಳಲಿದೆ ಎಂದು ತಿಳಿಸಿದರು.














