ಕಳೆಗುಂದಿದ್ದ ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಅಧಿಕಾರಕ್ಕೇರುತ್ತಿದ್ದಂತೆ ಮತ್ತೆ ಜೀವಕಳೆ!
ಕಾಂಗ್ರೆಸ್ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದ್ದ ಇಂದಿರಾ ಕ್ಯಾಂಟೀನ್ ಪರಿಸ್ಥಿತಿ ಜಿಲ್ಲೆಯಲ್ಲಿ ಸುಗಮವಾಗಿಯೇನೂ ನಡೆಯುತ್ತಿಲ್ಲ. ಅಂಕಿ ಅಂಶಗಳು ಮಾತ್ರ ಸರಿಯಾಗಿ ದಾಖಲಾಗುತ್ತಿದೆಯೇ ವಿನಃ ಏನಾಗಬೇಕಿತ್ತೋ ಅದಾಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಗೋಪಾಲ್ ಯಡಗೆರೆ
ಶಿವಮೊಗ್ಗ (ಮೇ.26) : ಕಾಂಗ್ರೆಸ್ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದ್ದ ಇಂದಿರಾ ಕ್ಯಾಂಟೀನ್ ಪರಿಸ್ಥಿತಿ ಜಿಲ್ಲೆಯಲ್ಲಿ ಸುಗಮವಾಗಿಯೇನೂ ನಡೆಯುತ್ತಿಲ್ಲ. ಅಂಕಿ ಅಂಶಗಳು ಮಾತ್ರ ಸರಿಯಾಗಿ ದಾಖಲಾಗುತ್ತಿದೆಯೇ ವಿನಃ ಏನಾಗಬೇಕಿತ್ತೋ ಅದಾಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಜಿಲ್ಲಾ ಕೇಂದ್ರ ಶಿವಮೊಗ್ಗದಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆಯ ಆಗರವಾಗಿದೆ. ಸರಿಯಾದ ಮೂಲ ಸೌಲಭ್ಯಗಳಿಲ್ಲದೆ ಇಂದಿರಾ ಕ್ಯಾಂಟೀನ್‌ಗಳು ಇದ್ದೂ ಇಲ್ಲದಂತಾಗಿವೆ.
ಸಿದ್ದು ಮುಖ್ಯಮಂತ್ರಿ ಪ್ರಮಾಣವಚನ ಹಿನ್ನೆಲೆ: ಧಾರವಾಡ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ ವಿತರಣೆ
ಬಡವರ ಹಸಿವು ನೀಗಿಸುವ ಸಲುವಾಗಿ 2013ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿತ್ತು. ಶಿವಮೊಗ್ಗ ನಗರದಲ್ಲಿ ನಾಲ್ಕು ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಸದ್ಯ ಈ ಕ್ಯಾಂಟೀನ್‌ಗಳಲ್ಲಿ ಶುಚಿತ್ವ ಕಾಪಾಡುವಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಹೀಗಾಗಿ ಇಲ್ಲಿಗೆ ಬರುತ್ತಿದ್ದ ಜನಸಂಖ್ಯೆ ಇಳಿಮುಖವಾಗಿದ್ದು, ಮೇಲ್ನೋಟಕ್ಕೆ ಕಾಣಿಸುತ್ತಿದೆ.
ಇಂದಿರಾ ಕ್ಯಾಂಟೀನ್ ಪ್ರಾರಂಭವಾದ ಬಳಿಕ ಅದರ ಉಸ್ತುವಾರಿಯನ್ನು ಆಯಾ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ವಹಿಸಿದೆ. ಅದರ ನಿರ್ವಹಣೆ, ಅಗತ್ಯ ವಸ್ತುಗಳ ಪೂರೈಕೆ ಸೇರಿದಂತೆ ಎಲ್ಲಾ ಹೊಣೆಯನ್ನು ಇದರ ವ್ಯಾಪ್ತಿಗೆ ಒಳಪಡಿಸಲಾಗಿದೆ. ಈ ಕ್ಯಾಂಟೀನ್‌ನಲ್ಲಿ ಸರ್ಕಾರÜ ರೂಪಿಸಿರುವ ಮೆನು ಪ್ರಕಾರ ಊಟ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟವನ್ನು ಮೆನು ಪ್ರಕಾರ ನಿರ್ವಹಣೆ ಮಾಡುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಬೆಳಗ್ಗೆ ತಿಂಡಿ, ಊಟವನ್ನು ಟೋಕನ್ ಇಲ್ಲದೆ ಗ್ರಾಹಕರಿಂದ ನೇರ ಹಣ ಪಡೆದು ವ್ಯವಹಾರ ನಡೆಸಲಾಗುತ್ತಿದೆ. ನಿತ್ಯ ಬೆಳಗ್ಗೆ 50ರಿಂದ 70 ತಿಂಡಿ, ಮಧ್ಯಾಹ್ನ 50 ಊಟ ಮಾತ್ರ ಹೋಗುತ್ತಿದೆ. ಈ ಕಳ್ಳಾಟವನ್ನು ಪರಿಶೀಲಿಸಬೇಕಿದ್ದ ಅಧಿಕಾರಿಗಳು ಕಚೇರಿಗೆ ಸೀಮಿತಗೊಂಡಿರುವುದರಿಂದ ಕ್ಯಾಂಟೀನ್‌ಗಳ ಅವ್ಯವಸ್ಥೆ, ಆಹಾರ, ಗುಣಮಟ್ಟ, ಮೆನು ಪಾಲನೆ, ಸ್ವಚ್ಛತೆ, ಬಿಲ್ಲಿಂಗ್ ಹೀಗೆ ಯಾವುದೊಂದು ವಿಚಾರಗಳನ್ನು ಕೇಳೋರಿಲ್ಲ ಎಂಬಂತಾಗಿದೆ.
ಬೇಕಾಬಿಟ್ಟಿಆಹಾರ ತಯಾರಿಕೆ:
ಕಡಿಮೆ ಬೆಲೆಗೆ ಊಟ ಸಿಕ್ಕರೆ ಸಾಕೆಂದು ಕ್ಯಾಂಟೀನ್ನತ್ತ ಧಾವಿಸುವವರ ಪೈಕಿ ಬಹುತೇಕರು ಬಡವರು. ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡಿರುವ ಅಲ್ಲಿನ ಉಸ್ತುವಾರಿಗಳು, ಬೇಕಾಬಿಟ್ಟಿಆಹಾರ ತಯಾರು ಮಾಡಿ ಹಂಚಿಕೆ ಮಾಡುತ್ತಿದ್ದಾರೆ ಎಂಬ ದೂರು ನಿರಂತರವಾಗಿ ಕೇಳಿ ಬರುತ್ತಿದೆ. ಯಾವುದೇ ನಿಯಮ ಇಲ್ಲಿ ಪಾಲನೆಯಾಗುತ್ತಿಲ್ಲ. ತರಕಾರಿ ಬೆಲೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ನಿತ್ಯ ಸೊಪ್ಪಿನ ಸಾಂಬರ್ ಸಿದ್ಧವಾಗುತ್ತಿದೆ. ರಾತ್ರಿಯ ಊಟವೂ ಅಷ್ಟಕ್ಕಷ್ಟೇ ಎಂಬ ಆರೋಪ ಕೇಳಿಬಂದಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಶುಚಿತ್ವ ಎಂಬುದು ಮರೀಚಿಕೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಸರಿಯಾದ ವೇತನ ಇಲ್ಲ:
ಅಡುಗೆ ತಯಾರಕ ಹಾಗೂ ಸಿಬ್ಬಂದಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಜೊತೆಗೆ ಇತರೆ ಸೌಲಭ್ಯ ಒದಗಿಸಿಲ್ಲ ಎಂಬ ದೂರು ಕೇಳಿಬಂದಿದೆ. ಸಿಬ್ಬಂದಿಗೆ 8 ಸಾವಿರ ರು. ನೀಡಲಾಗುತ್ತಿದೆ. ಅದು ಸಹ ಪ್ರತಿ ತಿಂಗಳು ಸರಿಯಾಗಿ ಪಾವತಿಸುತ್ತಿಲ್ಲ. ಜೊತೆಗೆ, ಎರಡು ಮೂರು ತಿಂಗಳಿಗೊಮ್ಮೆ ನೀಡಲಾಗುತ್ತದೆ ಎಂಬ ಅಸಮಾಧಾನ ಕೇಳಿಬಂದಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ರೂಪ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನ ದೊರೆಯದಿರುವುದು, ಜಲಮಂಡಳಿಯ ನೀರಿನ ಬಿಲ್ ಕಟ್ಟದಿರುವುದು, ಗ್ರಾಹಕರಿಗೆ ರುಚಿಯಿಲ್ಲದ ಆಹಾರ ದೊರೆಯದೇ ಇರುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹಳ್ಳ ಹಿಡಿದಿದ್ದ ಇಂದಿರಾ ಕ್ಯಾಂಟೀನ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಮತ್ತೆ ಹೊಸ ರೂಪ ಪಡೆಯುವ ನಿರೀಕ್ಷೆಯಿದೆ.
ಇಂದಿರಾ ಕ್ಯಾಂಟೀನ್‌ನಲ್ಲಿ ರುಚಿ ಮತ್ತು ಶುಚಿತ್ವ ಆಹಾರ ದೊರೆಯುತ್ತಿಲ್ಲ ಎಂಬ ಕಾರಣದಿಂದಾಗಿ ಗ್ರಾಹಕರ ಸಂಖ್ಯೆ ಕೂಡ ಕಡಿಮೆಯಾಗಿತ್ತು. ಆ ಹಿನ್ನೆಲೆಯಲ್ಲಿ ಎಲ್ಲಿ ಇಂದಿರಾ ಕ್ಯಾಂಟೀನ್‌ಗಳು ಮುಚ್ಚಿ ಹೋಗುತ್ತವೆಯೋ ಎಂಬ ಆಂತಕ ನಗರದಲ್ಲಿ ನೆಲೆಸಿದ್ದ ಕೂಲಿ ಕಾರ್ಮಿಕರು, ವಲಸಿಗರು ಮತ್ತು ಆಟೋ ಚಾಲಕರಲ್ಲಿ ಮನೆ ಮಾಡಿತ್ತು. ಆದರೀಗ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಿರುವುದರಿಂದ ಇಂದಿರಾ ಕ್ಯಾಂಟೀನ್‌ಗಳಿಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಹೆಚ್ಚಿದೆ.
ಕ್ಯಾಂಟೀನ್ ಸುತ್ತ ಜನ ವಿರಳ:
ಶಿವಮೊಗ್ಗ ನಗರದಲ್ಲಿ ನಾಲ್ಕು ಇಂದಿರಾ ಕ್ಯಾಂಟೀನ್ ಹಾಗೂ ಒಂದು ಅಡುಗೆ ಮನೆ ಇದೆ. ಅಧಿಕಾರಿಗಳ ಪ್ರಕಾರ ಎಲ್ಲ ಇಂದಿರಾ ಕ್ಯಾಂಟೀನ್‌ಗಳು ಉತ್ತಮವಾಗಿ ನಡೆಯುತ್ತಿವೆ. ಆದರೆ, ವಾಸ್ತವದಲ್ಲಿ ಕ್ಯಾಂಟೀನ್‌ನಿಂದ ಜನ ದೂರ ಉಳಿಯುತ್ತಿದ್ದಾರೆ. ಕ್ಯಾಂಟೀನ್‌ನಲ್ಲಿ 100 ಮಂದಿಯೂ ಹೋಗಿ ತಿಂಡಿ ಊಟ ಮಾಡುತ್ತಿಲ್ಲ. ಕಳಪೆ ಆಹಾರ, ಅಶುಚಿತ್ವ ಕಾರಣದಿಂದ ಜನ ಕ್ಯಾಂಟೀನ್‌ನಿಂದ ದೂರವೇ ಉಳಿದಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಚೆನ್ನಾಗಿಯೇ ನಡೆಯುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳು ಬಿಜೆಪಿ ಸರ್ಕಾರದಲ್ಲಿ ಸರಿಯಾದ ಅನುದಾನ ಸಿಗದೇ ಇದ್ದು, ಇಲ್ಲದಂತಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇಂದಿರಾ ಕ್ಯಾಂಟೀನ್ ಪುನಾರಂಭಕ್ಕೆ ಸಿದ್ಧತೆ..!
ಈಚೇಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಅವರು ಖಾಸಗಿ ಬಸ್ ನಿಲ್ದಾಣದಲ್ಲಿರುವ ಇಂದಿರಾ ಕ್ಯಾಂಟೀನ್ ಭೇಟಿ ನೀಡಿ ತಿಂಡಿ ಸವಿದು ಕಳಪೆ ಆಹಾರ ಬಗ್ಗೆ ಆರೋಪ ಮಾಡಿದ್ದರು. ಶುಚಿತ್ವ ಕಾಪಾಡಿಕೊಳ್ಳುವಂತೆಯೂ ಅಲ್ಲಿನ ಸಿಬ್ಬಂದಿಗೆ ತಾಕೀತು ಮಾಡಿದ್ದರು. ಆದರೆ, ಪ್ರತಿ ಇಂದಿರಾ ಕ್ಯಾಂಟೀನ್‌ನಲ್ಲಿ 400 ಮಂದಿಗೆ ಬೆಳಗ್ಗೆ ತಿಂಡಿ, 150 ಮಂದಿಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ನೀಡಲಾಗುತ್ತಿದೆ ಎಂಬುದು ಅಧಿಕಾರಿಗಳ ಮಾಹಿತಿ.