Asianet Suvarna News Asianet Suvarna News

Omicron Variant: ಸಿಎಂ ಸಭೆ ಬಳಿಕ ಹೊಸ ಮಾರ್ಗಸೂಚಿ : ಕರ್ನಾಟಕದಲ್ಲಿ ಕಠಿಣ ನಿಯಮ ಜಾರಿ!

*ಕೇರಳ, ಮಹಾರಾಷ್ಟ್ರದಿಂದ ಬರಲು ನೆಗೆಟಿವ್‌ ವರದಿ ಕಡ್ಡಾಯ
*ರಾಜ್ಯದ ಗಡಿ, ಏರ್‌ಪೋರ್ಟಲ್ಲಿ ಕಟ್ಟೆಚ್ಚರ
*ಗಡಿಯಲ್ಲಿ 24 ತಾಸೂ ತಪಾಸಣೆ
*ಕೇರಳದಿಂದ ಬಂದವರಿಗೆ ಮತ್ತೆ ಟೆಸ್ಟ್‌
*ಏರ್‌ಪೋರ್ಟಲ್ಲಿ ಬಿಗಿ ತಪಾಸಣೆ
*ನೆಗೆಟಿವ್‌ ವರದಿ ಇದ್ದರೆ ಮಾತ್ರ ಪ್ರವೇಶ

New guideline issued after CM Basavaraj Bommai meeting to curb covid spike in Karnataka mnj
Author
Bengaluru, First Published Nov 28, 2021, 6:28 AM IST

ಬೆಂಗಳೂರು(ನ.28): ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ‘ಒಮಿಕ್ರೋನ್‌’ (Omicron) ತಳಿಯ ಕೊರೋನಾ ಸೋಂಕಿನ ಬಗ್ಗೆ ರಾಜ್ಯದಲ್ಲೂ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಶನಿವಾರ ಮಹತ್ವದ ಸಭೆ ನಡೆದಿದ್ದು, ರಾಜ್ಯದ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲು ನಿರ್ಧರಿಸಲಾಗಿದೆ.ಹಾಲಿ ವೈರಸ್‌ಗಿಂತ ಹೊಸ ತಳಿ ಐದು ಪಟ್ಟು ವೇಗವಾಗಿ ಹರಡುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಎಂದು ಸಭೆಯಲ್ಲಿ ತಜ್ಞರು ಸಲಹೆ ಮಾಡಿದ್ದಾರೆ.

ಇದರ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ (International Airport) ಕಠಿಣ ತಪಾಸಣೆ ನಡೆಸಬೇಕು. ಪಾಸಿಟಿವ್‌ ಬಂದವರನ್ನು ಆಸ್ಪತ್ರೆಗೆ ದಾಖಲಿಸಬೇಕು. ನೆಗೆಟಿವ್‌ ಬಂದವರು ಹಾಗೂ ಪಾಸಿಟಿವ್‌ ಸಂಪರ್ಕಿತರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೆ (Quarantine) ಒಳಪಡಿಸಬೇಕು. ವೈದ್ಯಕೀಯ ಹಾಗೂ ನರ್ಸಿಂಗ್‌ ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಶಾಲಾ-ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೂಡಬೇಕು ಎಂದು ನಿರ್ಧಾರ ಮಾಡಲಾಗಿದೆ.

Omicron: ನಿಯಂತ್ರಣಕ್ಕೆ ರಾಜ್ಯ ಸಜ್ಜು: ಸಚಿವ ಸುಧಾಕರ್‌

ಇನ್ನು ಕೇರಳ ಹಾಗೂ ಮಹಾರಾಷ್ಟ್ರದಿಂದ ಆಗಮಿಸುವವರಿಗೆ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ (RTPCR Negative Report) ಕಡ್ಡಾಯ ಮಾಡಬೇಕು. ಗಡಿ ಭಾಗಗಳಲ್ಲಿ ದಿನದ 24 ಗಂಟೆಯೂ ಕಡ್ಡಾಯ ತಪಾಸಣೆ ನಡೆಸಬೇಕು. ಜೊತೆಗೆ 16 ದಿನಗಳಿಂದ ಈಚೆಗೆ ಕೇರಳದಿಂದ (Kerala) ಆಗಮಿಸಿ ನರ್ಸಿಂಗ್‌, ವೈದ್ಯಕೀಯ ಕಾಲೇಜು, ವಿದ್ಯಾರ್ಥಿ ನಿಲಯಗಳಲ್ಲಿರುವವರಿಗೆ ಮತ್ತೊಮ್ಮೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಬೇಕು ಎಂಬುದು ಸೇರಿದಂತೆ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

‘ಒಮಿಕ್ರೋನ್‌’ ತಳಿ ವಿಶ್ವದೆಲ್ಲೆಡೆ ಭೀತಿ ಸೃಷ್ಟಿಸಿರುವ ಬೆನ್ನಲ್ಲೇ ರಾಜ್ಯದ ಕೆಲ ಶಾಲಾ-ಕಾಲೇಜುಗಳಲ್ಲಿ ಸೋಂಕಿನ ಹೊಸ ಪ್ರಕರಣಗಳು ಸ್ಫೋಟಗೊಳ್ಳುತ್ತಿವೆ. ಸೋಂಕು ಪತ್ತೆ ಪರೀಕ್ಷೆಗಳು ಯಥಾಸ್ಥಿತಿ/ಕಡಿಮೆ ಇದ್ದರೂ ಹೊಸ ಪ್ರಕರಣಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಈ ಬೆಳವಣಿಗೆಗಳು ಮತ್ತೆ ರಾಜ್ಯ ಸೋಂಕಿನ ಸುಳಿಗೆ ಸಿಲುಕುವುದೇ ಎಂಬ ಆತಂಕ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಬಂಧಪಟ್ಟಸಚಿವರು, ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಕುರಿತು ನಿರ್ಧಾರ ಮಾಡಿದ್ದಾರೆ.

ಕೇರಳ ಗಡಿಯಲ್ಲಿ ಕಟ್ಟೆಚ್ಚರ- ಅಶೋಕ್‌:

ಸಭೆ ಬಳಿಕ ಮಾಹಿತಿ ನೀಡಿದ ಕಂದಾಯ ಸಚಿವ ಆರ್‌. ಅಶೋಕ್‌, ಕೇರಳದಿಂದ ಆಗಮಿಸುವವರ ಬಗ್ಗೆ ವಿಶೇಷ ನಿಗಾ ವಹಿಸಲಾಗುವುದು. ಕೇರಳದಿಂದ ಬರುವವರಿಗೆ ನೆಗೆಟಿವ್‌ ವರದಿ ಕಡ್ಡಾಯ ಮಾಡಿದ್ದು, ಮಂಗಳೂರು, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳ ಗಡಿಗಳಲ್ಲಿ ಕಟ್ಟೆಚ್ಚರ ಮಾಡಲಾಗುವುದು. ಕೇರಳದಿಂದ ಆಗಮಿಸಿ ವಿದ್ಯಾರ್ಥಿನಿಲಯಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ನೆಗೆಟಿವ್‌ ವರದಿ ಬಂದ 7ನೇ ದಿನಕ್ಕೆ ಮತ್ತೊಮ್ಮೆ ಕೊರೋನಾ ಪರೀಕ್ಷೆ (Corona Test) ಮಾಡಲಾಗುವುದು. ಜತೆಗೆ ಸರ್ಕಾರಿ ಕಚೇರಿ, ಮಾಲ್‌, ಹೋಟೆಲ್‌, ರೆಸ್ಟೋರೆಂಟ್‌ಗಳು, ಸಿನಿಮಾ ಹಾಲ್‌ಗಳು, ಈಜುಕೊಳ, ಸಾರ್ವಜನಿಕ ಗ್ರಂಥಾಲಯ, ಮೃಗಾಲಯಗಳು ಮತ್ತು ಜೈವಿಕ ಉದ್ಯಾನವನಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆ ಪಡೆದಿರಬೇಕು ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ ಮುಂದೂಡಿಕೆ:

ರಾಜ್ಯಾದ್ಯಂತ ಹಲವೆಡೆ ಶಾಲಾ-ಕಾಲೇಜುಗಳಲ್ಲಿ (Schools and Colleges) ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಶಾಲಾ-ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೂಡಲು ಸಲಹೆ ನೀಡಲು ನಿರ್ಧರಿಸಿದ್ದು, ಆರೋಗ್ಯ ಇಲಾಖೆಯಿಂದ ಈ ಬಗ್ಗೆ ಮಾರ್ಗಸೂಚಿ ಪ್ರಕಟಿಸಲಾಗುವುದು. ಜತೆಗೆ ಶಾಲಾ- ಕಾಲೇಜುಗಳಲ್ಲಿ ಹೆಚ್ಚು ಜನ ಸೇರುವ ವಿಚಾರ ಸಂಕಿರಣಗಳು, ಸಭೆಗಳನ್ನೂ ನಿರ್ಬಂಧಿಸಲಾಗುವುದು ಎಂದರು.

ಮಾಸ್ಕ್‌ ಧರಿಸುವುದು ಕಡ್ಡಾಯ:

ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳು, ಸಭೆ- ಸಮಾರಂಭಗಳಲ್ಲಿ ಮಾಸ್ಕ್‌ (Mask) ಧರಿಸುವ ಬಗ್ಗೆ ನಿರ್ಲಕ್ಷ್ಯ ಉಂಟಾಗಿದೆ. ಹೀಗಾಗಿ ಇನ್ನು ಮುಂದೆ ಮದುವೆ, ರಾಜಕೀಯ ಕಾರ್ಯಕ್ರಮ, ಚುನಾವಣಾ ಪ್ರಚಾರ ಸಭೆ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳ, ಕಾರ್ಯಕ್ರಮಗಳಲ್ಲೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಈ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುವುದು ಎಂದು ಅಶೋಕ್‌ ತಿಳಿಸಿದರು.

ಹೊಸ ವರ್ಷಾಚರಣೆ ಕುರಿತು ಪ್ರತ್ಯೇಕ ಸಭೆ

ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ (New Year Celebration) ಕುರಿತು ಮಾರ್ಗಸೂಚಿ ರೂಪಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು. ಹೊಸ ವರ್ಷದ ಆಚರಣೆ ಅಧ್ವಾನ ಆಗುತ್ತದೆ. ಮೋಜು, ಮಸ್ತಿ ಇರುತ್ತದೆ. ಹೀಗಾಗಿ ಆ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಮಾರ್ಗಸೂಚಿ ಸಿದ್ಧಪಡಿಸಲಾಗುವುದು ಎಂದು ಕಂದಾಯ ಸಚಿವ ಅಶೋಕ್‌ ತಿಳಿಸಿದರು. ಇದೇ ವೇಳೆ ವಿಧಾನಪರಿಷತ್‌ ಚುನಾವಣೆ ಹಾಗೂ ಕಡಲೆಕಾಯಿ ಪರಿಷೆ ಬಗ್ಗೆ ಚರ್ಚೆ ನಡೆಸಿಲ್ಲ ಎಂದರು.

ಬೂಸ್ಟರ್‌ ಡೋಸ್‌ಗೆ ಕೇಂದ್ರಕ್ಕೆ ಮನವಿ

ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಆರಂಭದಲ್ಲಿಯೇ ಕೊರೋನಾ ಲಸಿಕೆ ಪಡೆದಿದ್ದರು. ಸದ್ಯ ಅವರಿಗೆ ಮೂರನೇ (ಬೂಸ್ಟರ್‌) ಡೋಸ್‌ (Booster Dose) ನೀಡುವ ಕುರಿತು ಚರ್ಚಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅನುಮತಿ ನೀಡಿದರೆ ಶೀಘ್ರದಲ್ಲಿಯೇ ಮೂರನೇ ಡೋಸ್‌ ನೀಡಲಾಗುತ್ತದೆ ಎಂದು ಸಚಿವ ಅಶೋಕ್‌ ತಿಳಿಸಿದರು.

ಪ್ರಕರಣಗಳ ಹೆಚ್ಚಳದ ಬಗ್ಗೆ ತಜ್ಞರ ಮಾಹಿತಿ

ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಪ್ರಕರಣದ ಹೆಚ್ಚಳದ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಒಂದು ತಿಂಗಳಿಂದ ರಾಜ್ಯದಲ್ಲಿ ಸರಾಸರಿ 200 ಆಸುಪಾಸಿನಲ್ಲಿ ಕೊರೋನಾ ಹೊಸ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಕಳೆದ ಐದು ದಿನಗಳಿಂದ ಸರಾಸರಿ 400ಕ್ಕೆ ಹೆಚ್ಚಿವೆ. ಪರೀಕ್ಷೆಗಳಲ್ಲಿ ಸೋಂಕು ದೃಢಪಡುವ ಪ್ರಮಾಣ (ಪಾಸಿಟಿವಿಟಿ ದರ) ಶೇ.0.3 ರಿಂದ 0.6ಕ್ಕೆ ಹೆಚ್ಚಳವಾಗಿದೆ. ಕಳೆದ ವಾರದಂತೆಯೇ 70 ಸಾವಿರ ಆಸುಪಾಸಿನಲ್ಲಿಯೇ ಸೋಂಕು ಪರೀಕ್ಷೆ ನಡೆದರೂ ಹೆಚ್ಚಿನ ಮಂದಿಯಲ್ಲಿ ಸೊಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

Follow Us:
Download App:
  • android
  • ios