ದಾವಣಗೆರೆ [ಮಾ.02]:  ಮಹಾ ನಗರಕ್ಕೆ ಕುಡಿಯುವ ನೀರು ಪೂರೈಸಲು ಹರಿಹರ ತಾ. ರಾಜನಹಳ್ಳಿ ಬಳಿ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾಗೆ ಅಡ್ಡಲಾಗಿ ಸುಮಾರು 98.16 ಕೋಟಿ ವೆಚ್ಚದ ಬ್ಯಾರೇಜ್‌ ನಿರ್ಮಾಣಕ್ಕೆ ಸ್ಮಾರ್ಟ್‌ ಸಿಟಿ ಯೋಜನೆಯಡಿ  ಚಾಲನೆ ನೀಡಲಾಯಿತು. ಬ್ಯಾರೇಜ್‌ ನಿರ್ಮಾಣ ಕಾರ್ಯಕ್ಕೆ ಸಂಸದ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಉತ್ತರ ಶಾಸಕ ಎಸ್‌.ಎ.ರವೀಂದ್ರನಾಥ ಭೂಮಿಪೂಜೆ ನೆರವೇರಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಅತೀ ವೇಗದಲ್ಲಿ ಬೆಳೆಯುತ್ತಿರುವ, ಅಭಿವೃದ್ಧಿ ಹೊಂದುತ್ತಿರುವ ದಾವಣಗೆರೆ ಮಹಾ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ರಾಜನಹಳ್ಳಿ ಸಮೀಪ ನಿರ್ಮಾಣಗೊಳ್ಳಲಿರುವ ಬ್ಯಾರೇಜ್‌ ವರದಾನವಾಗಲಿದೆ. ಇದರಿಂದ ಜಿಲ್ಲಾ ಕೇಂದ್ರದ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ದಿನದ 24 ಗಂಟೆಯೂ ನೀರು ಪೂರೈಸುವ ನಿಟ್ಟಿನಲ್ಲಿ ರಾಜನಹಳ್ಳಿ ಬಳ್ಳಿ ತುಂಗಭದ್ರಾ ನದಿಗೆ ಅಡ್ಡಲಾಗಿ 9816 ಕೋಟಿ ವೆಚ್ಚದಲ್ಲಿ ಬ್ಯಾರೇಡ್‌ ನಿರ್ಮಿಸಲು ಇದೀಗ ಭೂಮಿ ಪೂಜೆ ಮಾಡಲಾಗಿದೆ. 21 ತಿಂಗಳ ಕಾಲಾವಧಿಯಲ್ಲಿ ಬ್ಯಾರೇಜ್‌ ನಿರ್ಮಿಸಬೇಕೆಂಬ ಷರತ್ತಿನೊಂದಿಗೆ ಬಳ್ಳಾರಿ ಜಿಲ್ಲೆ ಹೊಸಪೇಟೆಯ 1ನೇ ದರ್ಜೆಯ ಪಿಡಬ್ಲ್ಯುಡಿ ಗುತ್ತಿಗೆದಾರ ಕೆ.ದೊಡ್ಡ ಹನುಮಂತಪ್ಪಗೆ ಕಾಮಗಾರಿ ವಹಿಸಲಾಗಿದೆ ಎಂದು ತಿಳಿಸಿದರು.

ದಶಕದ ಕನಸು : ದಾವಣಗೆರೆ ನೇರ ರೈಲ್ವೆ ಮಾರ್ಗಕ್ಕೆ ಒತ್ತಾಯ

ಬೇಸಿಗೆ ಸೇರಿ ವರ್ಷದ ಎಲ್ಲಾ ದಿನಗಳಲ್ಲೂ ನಿರಂತರವಾಗಿ ಜಿಲ್ಲಾ ಕೇಂದ್ರಕ್ಕೆ ನೀರು ಪೂರೈಸಲು ರಾಜನಹಳ್ಳಿ-ಮಾಕನೂರು ಬಳಿ ಬ್ಯಾರೇ ನ್ನು ಸ್ಮಾರ್ಟ್‌ ಸಿಟಿಯಡಿ ಕೈಗೆತ್ತಿಕೊಳ್ಳಲಾಗಿದೆ. 98.16 ಕೋಟಿ ಅಂದಾಜು ಪಟ್ಟಿಹಾಗೂ ಗುತ್ತಿಗೆ ಕರಾರು ಮೊತ್ತ 76.10 ಕೋಟಿ ಆಗಿದೆ. ಕಾಮಗಾರಿಯನ್ನು ಟರ್ನ್‌ ಕೀ ಆಧಾರದ ಮೇಲೆ ವಹಿಸಲಾಗಿದೆ ಎಂದರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲಿ ತಾವು, ಎಸ್‌.ಎಸ್‌.ಮಲ್ಲಿಕಾರ್ಜುನ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಜಿಲ್ಲಾ ಕೇಂದ್ರದ ನೀರಿನ ಸಮಸ್ಯೆ ಪರಿಹರಿಸಲು ಜಲ ಸಿರಿ ಯೋಜನೆಯಡಿ ಬ್ಯಾರೇಜ್‌ ನಿರ್ಮಿಸುವ ಬಗ್ಗೆ ಆಲೋಚನೆ ಮಾಡಿದ್ದೆವು. ಬೇಸಿಗೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ನೀರಿನ ಅಭಾವವಾಗುತ್ತದೆಂಬ ಕಾರಣಕ್ಕೆ ಜಲಸಿರಿ ಯೋಜನೆಯಡಿ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ಯಾರೇಜ್‌ ನಿರ್ಮಿಸಲು 80 ಕೋಟಿಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ಇದೀಗ ಸ್ಮಾರ್ಟ್‌ ಸಿಟಿ ಯೋಜನೆಯಡಿ ಬ್ಯಾರೇಜ್‌ ನಿರ್ಮಾಣ ಕಾರ್ಯವಾಗುತ್ತಿರುವುದು ಸಂತೋಷದ ಸಂಗತಿ ಎಂದ ಅವರು, ಆದಷ್ಟುಬೇಗನೆ ಗುಣಮಟ್ಟದ ಕಾಮಗಾರಿ ನಡೆದು, ಯೋಜನೆ ಕಾರ್ಯ ರೂಪಕ್ಕೆ ಬರಲಿ ಎಂದು ಹಾರೈಸಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಅಬ್ದುಲ್‌ ಜಬ್ಬಾರ್‌, ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ್‌, ಮೇಯರ್‌ ಬಿ.ಜಿ.ಅಜಯಕುಮಾರ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಪೈಲ್ವಾನ್‌, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ರವೀಂದ್ರ ಮಲ್ಲಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ, ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಸ್ಮಾರ್ಟ್‌ ಸಿಟಿ ನಿರ್ದೇಶಕ ಎಂ.ನಾಗರಾಜ, ಆರ್‌.ನಟರಾಜ, ಮಾಕನೂರು ಗ್ರಾಪಂ ಅಧ್ಯಕ್ಷ ಎಸ್‌.ಬಿ.ಮಲ್ಲನಗೌಡ್ರು, ಸ್ಮಾರ್ಟ್‌ ಸಿಟಿ ಮುಖ್ಯ ಅಭಿಯಂತರ ಎಂ.ಸತೀಶ, ಇಇ ಕೆ.ಎಂ.ಗುರುಪಾದಯ್ಯ, ಎಚ್‌.ಎಸ್‌.ರಾಜು, ಐಡೆಕ್‌ಪಿಎಂಸಿ ಟೀಮ್‌ ಲೀಡರ್‌ ಆರ್‌.ನಟರಾಜ, ಕನ್ಸಟ್ರಕ್ಷನ್‌ ವ್ಯವಸ್ಥಾಪಕ ಶ್ರೀನಾಥ ರೆಡ್ಡಿ ಇತರರು ಇದ್ದರು.