ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಶೌಚಾಲಯ ಗೋಡೆ ಬಿದ್ದು ಶಾಲಾ ಬಾಲಕಿಯರಿಗೆ ಗಂಭೀರ ಗಾಯ!
ಶಿಥಿಲಾವಸ್ಥೆಯಲ್ಲಿರೋ ಶೌಚಾಲಯ ಕಟ್ಟಡದ ಕಲ್ಲು ವಿದ್ಯಾರ್ಥಿನಿಯರಿಬ್ಬರ ತಲೆ ಮೇಲೆ ಬಿದ್ದು ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜ.22): ಶಿಥಿಲಾವಸ್ಥೆಯಲ್ಲಿರೋ ಶೌಚಾಲಯ ಕಟ್ಟಡದ ಕಲ್ಲು ವಿದ್ಯಾರ್ಥಿನಿಯರಿಬ್ಬರ ತಲೆ ಮೇಲೆ ಬಿದ್ದು ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಬಾಲಕಿಯ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಘಟನೆಯಿಂದ ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಾದಿಯಾಗಿ ಭಯಗೊಂಡಿದ್ದಾರೆ.
ಉರ್ದು ಶಾಲೆಯಲ್ಲಿ ಮಕ್ಕಳ ಮೇಲೆ ಬಿದ್ದ ಗೋಡೆ:
ವಿಜಯಪುರದ ಹೃದಯ ಭಾಗದಲ್ಲಿರೋ ದೌಲತ್ ಕೋಟೆಯ ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂಬರ್ 1 ರಲ್ಲಿ ಘಟನೆ ನಡೆದಿದೆ. 8 ನೇ ತರಗತಿಯ ಜುನೇರಾ ಚೋಕದಾರ್ ಹಾಗು ಹುಷ್ದಾ ಫತೇಪೂರ ಎಂಬ ವಿದ್ಯಾರ್ಥಿನಿಯರು ಶೌಚಾಲಯಕ್ಕೆ ತೆರಳಿದ್ದಾರೆ. ಈ ವೇಳೆ ಶಿಥಿಲಗೊಂಡ ಕಟ್ಟಡ ಮುಟ್ಟಿದಾಗ ಸಿಮೆಂಟ್ ಕಲ್ಲು ವಿದ್ಯಾರ್ಥಿನಿಯರ ತಲೆಮೇಲೆ ಬಿದ್ದು, ಗಂಭೀರ ಗಾಯವಾಗಿದೆ. ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ, ಬೆಂಗಳೂರಿನಲ್ಲಿ ಸಂಭ್ರಮ
ಬಾಲಕಿಯ ತಲೆಗೆ 8 ಸ್ಟಿಚ್ ; ಪೋಷಕರ ಆಕ್ರೋಶ
ವಿದ್ಯಾರ್ಥಿನಿ ಜುನೇರಾ ತಲೆಗೆ ವೈದ್ಯರು ಎಂಟು ಸ್ಟೀಚ್ ಹಾಕಿದ್ದು, ಪೋಷಕರು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಎಸ್ ಡಿಎಂಸಿ ಅಧ್ಯಕ್ಷರು ಹಲವು ಬಾರಿ ಶಿಕ್ಷಣ ಇಲಾಖೆ ಬಿಇಓ , ಡಿಡಿಪಿಐ ಹಾಗೂ ಜಿಲ್ಲಾ ಪಂಚಾಯತ್ ಸಿಇಓಗೂ ಮನವಿ ಮಾಡಿದ್ದಾರೆ. ಶಿಥಿಲಗೊಂಡ ಶೌಚಾಲಯ, ಕಟ್ಟಡ ತೆರವಿಗೆ ಮನವಿ ಮಾಡಿದ್ರೂ ಸ್ಪಂದಿಸಿಲ್ಲ,ಇದೀಗ ಶಿಥಿಲಗೊಂಡ ಶೌಚಾಲಯ ಕಟ್ಟಡದ ಕಲ್ಲು ವಿದ್ಯಾರ್ಥಿನಿಯರಿಬ್ಬರ ತಲೆ ಬಿದ್ದು ಭಾರೀ ಅನಾಹುತ ತಪ್ಪಿದೆ. ಘಟನೆ ನಡೆದ ಮೇಲೆ ಇದೀಗ ಬಿಇಓ ಅವರು ಶಿಥಿಲಗೊಂಡ ಶೌಚಾಲಯ ಕಟ್ಟಡದ ತೆರವಿಗೆ ಆದೇಶ ಕೊಟ್ಟಿದ್ದಾರೆ. ಅದಕ್ಕೆ ಅನುದಾನವೂ ಇಲ್ಲ, ಸ್ಥಳೀಯವಾಗಿ ದೇಣಿಗೆ ಸಂಗ್ರಹಿಸಿ ಶಿಥಿಲಗೊಂಡ ಕಟ್ಟಡ ತೆರವು ಮಾಡಿ ಅಂತಾರೆ ಅಧಿಕಾರಿಗಳು.
ನಿತ್ಯ ಆತಂಕದಲ್ಲೆ ಕಾಲ ಕಳೆಯುತ್ತಿರುವ ಮಕ್ಕಳು
ಶಿಥಿಲ ಶಾಲಾ ಕೊಠಡಿ ಮೇಲ್ಛಾವಣಿಗೆ ಹಸಿರು ಬಟ್ಟೆ ಕಟ್ಟಲಾಗಿದೆ, ನಿತ್ಯ ಆತಂಕದ ಮಧ್ಯೆಯೂ ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ. ಶಿಕ್ಷಕರ ಕೊಠಡಿ ಮೇಲ್ಛಾವಣಿ ಶಿಥಿಲವಿದೆ. ಅಂತಹುದರಲ್ಲಿ ಶಿಕ್ಷಕರು ಕುಳಿತುಕೊಳ್ಳುತ್ತಿದ್ದಾರೆ. ಉರ್ದು ಶಾಲೆ ಅನ್ನೋ ಕಾರಣಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
17ರಲ್ಲಿ 9 ಕೊಠಡಿ ಮೇಲ್ಚಾವಣಿ ಶಿಥಿಲ
ಉರ್ದು ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ 180ಕ್ಕೂ ಹೆಚ್ಚು ವಿದ್ಯಾರ್ಥಿನೀಯರು ಓದುತ್ತಿದ್ದಾರೆ. 17 ಕೊಠಡಿಯಲ್ಲಿ 9 ಕೊಠಡಿ ಮೇಲ್ಛಾವಣಿ ಶಿಥಿಲಗೊಂಡಿವೆ. ಇನ್ನು ಶಿಥಿಲಗೊಂಡ ಶೌಚಾಲಯ ಇದೆ. ವಿದ್ಯಾರ್ಥಿನಿಯರು ಬಯಲಿಗೆ ಶೌಚಾಲಯಕ್ಕೆ ಹೋಗಬೇಕು ಇಲ್ಲವೆ ಮಾನಕ್ಕೆ ಅಂಜಿ ಶಿಥಿಲಗೊಂಡ ಶೌಚಾಲಯವೇ ಗತಿ.
ಶಿಥಿಲ ಕಟ್ಟಡ ತೆರವಿಗೆ, ಬಾಲಕಿ ಚಿಕಿತ್ಸೆಗೆ ಪೋಷಕರ ಆಗ್ರಹ
ಸರ್ಕಾರದ ಶಿಕ್ಷಣ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಉರ್ದು ಶಾಲೆಯಲ್ಲಿ ಶಿಥಿಲಗೊಂಡ ಶೌಚಾಲಯ, ಕಟ್ಟಡ ತೆರವು ಮಾಡಲು ಕ್ರಮಕ್ಕೆ ಸೂಚನೆ ನೀಡುವಂತೆ ಪೋಷಕರು ಆಗ್ರಹಿಸಿದ್ದಾರೆ. ಶೌಚಾಲಯ ಹಾಗೂ ನೂತನ ಕೊಠಡಿ ನಿರ್ಮಿಸಿ ಕೊಡಬೇಕು ಎಂದು ಪೋಷಕರು, ಎಸ್ ಡಿಎಂಸಿ ಅಧ್ಯಕ್ಷರು ಒತ್ತಾಯಿಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನೀಯರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಬೇಕು ಎಂದು ನೊಂದು ಪೋಷಕರು ಮನವಿ ಮಾಡಿದ್ದಾರೆ.
ಶಿಥಿಲಗೊಂಡ ಶೌಚಾಲಯ ಹಾಗೂ ಕೊಠಡಿಗಳ ತೆರವಿಗೆ ನಿರ್ಲಕ್ಷ್ಯ ತೋರಿದ್ದಕ್ಕೆ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರುವಂತಾಗಿದೆ. ಪಾಲಕರಲ್ಲಿ ಆತಂಕ ಮನೆ ಮಾಡಿದ್ದು, ಇನ್ಮೇಲಾದ್ರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಜೀವ ಹಾನಿ ಆಗುವ ಮುನ್ನವೇ ಶಿಥಿಲಗೊಂಡ ಶೌಚಾಲಯ ಹಾಗೂ ಕೊಠಡಿ ತೆರವಿಗೆ ಕ್ರಮ ಕೈಗೊಳ್ಳಬೇಕಿದೆ.