ಪಿಡಿಒ ನಿರ್ಲಕ್ಷ್ಯ: ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದು ಬಿಗುವಿನ ವಾತಾವರಣ
ತಾಲೂಕಿನ ಹೊಣಕೆರೆ ಗ್ರಾಮದಲ್ಲಿ ನಿಂಗರಾಜ್ ಎಂಬುವವರು ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದು ತೊಂದರೆ ಮಾಡಿದ ಪ್ರಕರಣದಲ್ಲಿ ಗ್ರಾಮ ಪಂಚಾಯ್ತಿಯ ಪಿಡಿಒ ಚಂದ್ರಶೇಖರ್ ನಿರ್ಲಕ್ಷ್ಯ ತೋರಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದೆ ಎಂದು ಸೊರವನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಎಚ್.ಎಂ. ಸಂದೇಶ್ ಆರೋಪಿಸಿದ್ದಾರೆ.
ತುರುವೇಕೆರೆ : ತಾಲೂಕಿನ ಹೊಣಕೆರೆ ಗ್ರಾಮದಲ್ಲಿ ನಿಂಗರಾಜ್ ಎಂಬುವವರು ಸಾರ್ವಜನಿಕರು ಓಡಾಡುವ ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದು ತೊಂದರೆ ಮಾಡಿದ ಪ್ರಕರಣದಲ್ಲಿ ಗ್ರಾಮ ಪಂಚಾಯ್ತಿಯ ಪಿಡಿಒ ಚಂದ್ರಶೇಖರ್ ನಿರ್ಲಕ್ಷ್ಯ ತೋರಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದೆ ಎಂದು ಸೊರವನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಎಚ್.ಎಂ. ಸಂದೇಶ್ ಆರೋಪಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಗ್ರಾಮದ ಸಾರ್ವಜನಿಕರ ರಸ್ತೆಯಲ್ಲಿ ನಿಂಗರಾಜ್ ಎಂಬುವವರು ಮಣ್ಣು ಸುರಿದ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಕಳೆದ ಒಂದೆರೆಡು ತಿಂಗಳ ಹಿಂದೆಯೇ ಗ್ರಾಮ ಪಂಚಾಯ್ತಿಗೆ ಮೌಖಿಕವಾಗಿ ದೂರು ಸಲ್ಲಿಸಿದ್ದರು. ಆದರೆ ಪಿಡಿಒ ಚಂದ್ರಶೇಖರ್ ಅವರು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರಿಗೆ ಸೂಕ್ತ ತಿಳುವಳಿಕೆ ನೀಡದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಜಗಳವಾಗಿದೆ. ಅಲ್ಲದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಲಕ್ಷಾಂತರ ರು. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ಈಗ ಜಮೀನು ಖರೀದಿ ಮಾಡಿರುವ ನಿಂಗರಾಜ್ ತಮ್ಮ ಜಮೀನಿನ ಮೂಲಕ ರಸ್ತೆ ನಿರ್ಮಾಣ ಮಾಡಲಾಗಿದೆ. ಇದು ತಮಗೆ ಸೇರಿದ ಜಮೀನೆಂದು ಹೇಳಿ ರಸ್ತೆಗೆ ಅಡ್ಡಲಾಗಿ ಮಣ್ಣು ಸುರಿದಿದ್ದಾರೆ. ಅಲ್ಲದೇ ರಸ್ತೆ ಮಧ್ಯೆ ತಂತಿ ಬೇಲಿ ನಿರ್ಮಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಹೊಣಕೆರೆ ಗ್ರಾಮದ ಹಲವಾರು ಮಂದಿ ಸೊರವನಹಳ್ಳಿ ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿದರು.
ಆಗ ಪ್ರತಿಭಟನಾಕಾರರ ಮನವೊಲಿಸಬೇಕಿದ್ದ ಪಿಡಿಒ ಚಂದ್ರಶೇಖರ್ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಕಚೇರಿಗೆ ಬೀಗ ಹಾಕಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರೂ ಪಿಡಿಒ ಬೀಗ ಹಾಕಿಕೊಳ್ಳಿ ಎಂದು ಒರಟಾಗಿ ಉತ್ತರಿಸಿದರು. ಇದರಿಂದ ಕುಪಿತಗೊಂಡ ಹೊಣಕೆರೆಯ ಕೆಲವು ಗ್ರಾಮಸ್ಥರು ಪಿಡಿಒ ಅವರ ವರ್ತನೆಯನ್ನು ಖಂಡಿಸಿ ಕಚೇರಿಯ ಬಾಗಿಲಿಗೆ ಬೀಗ ಹಾಕಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಇದೇ ಗ್ರಾಮ ಪಂಚಾಯ್ತಿಗೆ ಗ್ರಾಮ ಪಂಚಾಯ್ತಿಯ ಕೆಲವು ಸದಸ್ಯರು ಪಂಚಾಯ್ತಿಗೆ ಬೀಗ ಹಾಕಿದ್ದರು. ಆಗ ಯಾವುದೇ ಕಾನೂನು ಕ್ರಮ ಕೈಗೊಳ್ಳದ ಅಧಿಕಾರಿಗಳು ಈಗ ತಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಇದೊಂದು ದುರುದ್ದೇಶದ ಕ್ರಮವಾಗಿದೆ ಎಂದು ಸಂದೇಶ್ ಆರೋಪಿಸಿದ್ದಾರೆ.
ಸೊರವನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಆಗುತ್ತಿರುವ ಅವ್ಯವಹಾರಗಳ ವಿರುದ್ಧ ಹಾಗೂ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಮತ್ತು ಅಲ್ಲಿನ ಅಧ್ಯಕ್ಷರು, ಉಪಾಧ್ಯಕ್ಷರ ವಿರುದ್ಧ ದನಿ ಎತ್ತಿದ್ದರಿಂದ ನನಗೆ ಪೊಲೀಸರ ಮೂಲಕ ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಕಾನೂನಿನ ಮೂಲಕ ತಕ್ಕ ಪಾಠ ಕಲಿಸುವುದಾಗಿ ಅವರು ಹೇಳಿದರು.
ಕೂಡಲೇ ಗ್ರಾಮ ಪಂಚಾಯ್ತಿಯ ಪಿಡಿಒ ಚಂದ್ರಶೇಖರ್ ಅವರನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ ಅವರನ್ನು ಆಗ್ರಹಿಸಿದ್ದಾರೆ.