ನವರಾತ್ರಿಯ ಸಂದರ್ಭದಲ್ಲಿ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಏನೆಲ್ಲ ಕಾರ್ಯಕ್ರಮ ನಡೆಯಲಿದೆ, ಯಾವೆಲ್ಲ ಪೂಜೆಗೆ ಗಿರಿನಗರದಲ್ಲಿರುವ ಶಾಖೆ ಸಜ್ಜಾಗಿದೆ ಎನ್ನುವ ಮಾಹಿತಿ ಇಲ್ಲಿದೆ.
ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈ ಬಾರಿ ವಿಶೇಷ ನವರಾತ್ರಿ ಆಚರಣೆ ನಡೆಯಲಿದೆ. ನವರಾತ್ರ ನಮಸ್ಯಾ ಹೆಸರಿನಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ಗಿರಿನಗರದಲ್ಲಿರುವ ಶ್ರೀಮಠದ ಶಾಖೆಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ರಾಜರಾಜೇಶ್ವರಿ ದೇವಿ ಆರಾಧನೆ
ಮಹಾನಗರದಲ್ಲಿ ಮಹಾದೇವಿಯ ಮಹಾರಾಧನೆ ಎಂಬ ಆಶಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ದೇವಿಯ ವಿಶೇಷ ಆರಾಧನೆ ಪ್ರಮುಖ ಆಕರ್ಷಣೆಯಾಗಿರಲಿದೆ. ಒಂಬತ್ತು ದಿನಗಳ ಕಾಲ ಶ್ರೀಗಳು ಉಪವಾಸ ವ್ರತ ಆಚರಿಸಿ ರಾಜರಾಜೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇದೇ ವೇಳೆ ಪ್ರತಿದಿನ ಲಲಿತೋಪಾಖ್ಯಾನ ಪ್ರವಚನವೂ ನಡೆಯಲಿದೆ.
ಶ್ರೀದುರ್ಗಾ ಮಂಟಪದಲ್ಲಿ ಮಣ್ಣಿನಿಂದ ನಿರ್ಮಿಸಲಾದ ಶ್ರೀರಾಜರಾಜೇಶ್ವರಿ ದೇವಿಯ ಮೂರ್ತಿಗೆ ವಿಶೇಷ ಮಹಾಪೂಜೆ ನಡೆಯಲಿದೆ. ಇದರ ಜೊತೆಗೆ ಪ್ರತಿದಿನ 100 ಸಪ್ತಶತೀ ಪಾರಾಯಣಗಳಂತೆ ಒಟ್ಟು 1,000 ಸಪ್ತಶತೀ ಪಾರಾಯಣಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ.
ಒಂಬತ್ತು ದಿನ ಒಂಬತ್ತು ಹವನ
ನವರಾತ್ರಿ ಅವಧಿಯಲ್ಲಿ ಪ್ರತಿದಿನವೂ ವಿಶೇಷ ಹವನಗಳನ್ನು ಆಯೋಜಿಸಲಾಗಿದ್ದು, ಒಟ್ಟು ಒಂಬತ್ತು ಹವನಗಳು ನಡೆಯಲಿವೆ. ವಿಜಯದಶಮಿಯಂದು ಶತಚಂಡಿಕಾ ಮಹಾಯಾಗ ನಡೆಯಲಿದೆ. ಪ್ರತಿದಿನ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ, ಸಂಜೆ ದುರ್ಗಾದೀಪ ನಮಸ್ಕಾರ, ಮಹಿಳೆಯರಿಂದ ಕುಂಕುಮಾರ್ಚನೆ ಮತ್ತು ಉಡಿಸೇವೆ ನಡೆಯಲಿದೆ. ಭಜನಾ ತಂಡಗಳಿಂದ ಭಜನೆ ಹಾಗೂ ವಿವಿಧ ಕಲಾ ಕಾರ್ಯಕ್ರಮಗಳ ಮೂಲಕವೂ ದೇವಿಯ ಆರಾಧನೆ ನಡೆಯಲಿದೆ.
ಅನ್ನಬ್ರಹ್ಮ ಸಂಕೀರ್ತನಮ್ ವಿಶೇಷ ಕಾರ್ಯಕ್ರಮ
ಶ್ರೀಗಳವರ ಚಾತುರ್ಮಾಸ್ಯ ಪ್ರವಚನದಲ್ಲಿ ಪ್ರತಿಪಾದಿಸಿದ ‘ಅನ್ನಂ ಬ್ರಹ್ಮ’ ಪರಿಕಲ್ಪನೆಯ ಆಧಾರದ ಮೇಲೆ ‘ಅನ್ನಬ್ರಹ್ಮ ಸಂಕೀರ್ತನಮ್’ ಎಂಬ ವಿಶೇಷ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಊಟದ ಸಮಯದಲ್ಲಿ ಭಗವಂತನ ಸ್ಮರಣೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಲಿದೆ.
ಅ.21ರಂದು ಸಮಾರೋಪ
ಅಕ್ಟೋಬರ್ 21ರಂದು ಬುಧವಾರ ವಿದ್ಯಾದಶಮಿಯಂದು ನವರಾತ್ರ ನಮಸ್ಯಾ ಕಾರ್ಯಕ್ರಮದ ಮಹಾಸಮಾರೋಪ ನಡೆಯಲಿದೆ. ಈ ಸಂದರ್ಭದಲ್ಲಿ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶೀರ್ವಚನ ಹಾಗೂ ಸಾರ್ವಜನಿಕ ಮಂತ್ರಾಕ್ಷತೆ ಕಾರ್ಯಕ್ರಮ ಇರಲಿದೆ.
ನವರಾತ್ರಿ ಅವಧಿಯಲ್ಲಿ ವಿವಿಧ ರೀತಿಯ ಪೂಜೆ, ಪಾರಾಯಣ, ಯಜ್ಞ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನವರಾತ್ರ ನಮಸ್ಯಾ ಸಮಿತಿ ಮನವಿ ಮಾಡಿದೆ.
ಕಾರ್ಯಾಲಯ ಉದ್ಘಾಟನೆ
ನವರಾತ್ರ ನಮಸ್ಯಾ ಕಾರ್ಯಕ್ರಮದ ಕಾರ್ಯಾಲಯವನ್ನು ಬಸವನಗುಡಿ ಶಾಸಕ ಎಲ್.ಎ. ರವಿ ಸುಬ್ರಹ್ಮಣ್ಯ ಅವರು ಈಗಾಗಲೇ ಉದ್ಘಾಟಿಸಿದ್ದಾರೆ. ಬೆಂಗಳೂರಿನಲ್ಲಿ ಈ ಬಾರಿ ನಡೆಯುತ್ತಿರುವ ವಿಶೇಷ ನವರಾತ್ರಿ ಆಚರಣೆಗೆ ತಮ್ಮ ಸಂಪೂರ್ಣ ಸಹಕಾರವಿರುವುದಾಗಿ ಅವರು ತಿಳಿಸಿದ್ದಾರೆ. ನಗರದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.


