ನೀರು ಬಹಳ ಅಮೂಲ್ಯವಾದುದು. ಅದರ ಮಹತ್ವವನ್ನು ಎಲ್ಲರೂ ಅರಿತು ಬಳಕೆ ಮಾಡಬೇಕಿದೆ. ನೀರಿನ ಮಿತಿಮೀರಿದ ಬಳಕೆಯಿಂದ ಪ್ರಕೃತಿ ನಮಗೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.

ಮಂಡ್ಯ ಮಂಜುನಾಥ

(ತ್ರಿವೇಣಿ ಸಂಗಮ) ಮಂಡ್ಯ (ಅ.15): ನೀರು ಬಹಳ ಅಮೂಲ್ಯವಾದುದು. ಅದರ ಮಹತ್ವವನ್ನು ಎಲ್ಲರೂ ಅರಿತು ಬಳಕೆ ಮಾಡಬೇಕಿದೆ. ನೀರಿನ ಮಿತಿಮೀರಿದ ಬಳಕೆಯಿಂದ ಪ್ರಕೃತಿ ನಮಗೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.

ಕೆ.ಆರ್‌.ಪೇಟೆ (KR Pete) ತಾಲೂಕಿನ ಅಂಬಿಗರಹಳ್ಳಿ, ಸಂಗಾಪುರ, ಪುರ ಗ್ರಾಮಗಳ ಸಮೀಪದ ತ್ರಿವೇಣಿ (Triveni sangama ) ಸಂಗಮದಲ್ಲಿ ಶುಕ್ರವಾರ ನಡೆದ ಮಹಾಕುಂಭಮೇಳ ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗಷ್ಟೇ ಸಾಕಷ್ಟುಪ್ರಮಾಣದಲ್ಲಿ ಎಲ್ಲೆಡೆ ಮಳೆಯಾಗಿ ಅತಿವೃಷ್ಟಿಸಂಭವಿಸಿದೆ. ಆ ನೀರನ್ನು ಹೇಗೆ ಉಳಿಸಿಕೊಂಡು ಬಳಸುತ್ತಿದ್ದೇವೆ ಎನ್ನುವುದು ಮುಖ್ಯವಾಗಿದೆ. ಅನಾವೃಷ್ಟಿಅನುಭವಿಸಿದ ಸಂದರ್ಭದಲ್ಲಿ ಪ್ರತಿ ಹನಿ ನೀರಿನ ಬೆಲೆ ನಮಗೆ ತಿಳಿದಿದೆ. ಪ್ರತಿದಿನ ನಲ್ಲಿಯಲ್ಲಿ ಪೂರೈಕೆಯಾಗುತ್ತಿದ್ದ ನೀರು ನಿಗದಿತ ಸಮಯಕ್ಕೆ ಸೀಮಿತವಾಗುತ್ತಿದೆ. ಇದು ನೀರನ್ನು ಉಳಿಸಿ ಎಂದು ಪೃಕೃತಿ ನಮಗೆ ನೀಡಿರುವ ಎಚ್ಚರಿಕೆ ಗಂಟೆ.

ಧರ್ಮಸ್ಥಳದಲ್ಲೂ ಈಗ ಎಲ್ಲೆಡೆ ಪ್ರವಾಹ ಸ್ಥಿತಿ ಇದೆ. ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ. ಆದರೆ, ಬೇಸಿಗೆ ಸಮಯದಲ್ಲಿ ನೇತ್ರಾವತಿ ನದಿಯಲ್ಲಿ ನೀರು ಹರಿಯದೆ ನಿಂತಿರುತ್ತದೆ. ಭಕ್ತರು ನಿಂತ ನೀರಿನಲ್ಲೇ ಸ್ನಾನ ಮಾಡಿ ನೀರೆಲ್ಲವೂ ಮಲಿನಗೊಳ್ಳುತ್ತದೆ ಎಂದು ಬೇಸರದಿಂದ ನುಡಿದರು.

ನದಿಗಳಿಂದ, ಅಂತರ್ಜಲದಿಂದ ದೊರೆಯುವ ಅಮೂಲ್ಯ ಜಲವನ್ನು ಮಿತವಾಗಿ ಮತ್ತು ಹಿತವಾಗಿ ಬಳಸಬೇಕಿದೆ. ಕೃಷಿ, ಕೈಗಾರಿಕೆ ಮತ್ತು ನಿತ್ಯದ ಬಳಕೆಯಲ್ಲಿ ಜಲ ಅವಶ್ಯಕವಾಗಿ ಬಳಸುವ ಸಾಧನವಾಗಿದೆ. ಕೃಷಿಯಲ್ಲಿ ಹನಿ ಮತ್ತು ತುಂತುರು ನೀರಾವರಿಯನ್ನು ಅಳವಡಿಸಿಕೊಂಡು ನೀರನ್ನು ವೈಜ್ಞಾನಿಕವಾಗಿ ಬಳಸುವ ವಿಧಾನವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಹಾಗಾಗಿ ಪ್ರಕೃತಿದತ್ತವಾಗಿ ದೊರಕುವ ನೀರನ್ನು ಸಂರಕ್ಷಿಸಿ, ಮಿತವಾಗಿ ಬಳಸಿದಾಗ ಅದು ಜೀವಜಲವಾಗುತ್ತದೆ. ಅಂತಹ ಜಲಕ್ಕೆ ಗೌರವ ಸಮರ್ಪಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.

ಜೀವಜಲಕ್ಕೆ ನಮ್ಮ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ. ಜಲದಿಂದ ಜೀವವನ್ನು ಉಳಿಸಿಕೊಂಡು ಬದುಕುತ್ತಿರುವ ನಾವೆಲ್ಲರೂ ಅದಕ್ಕೆ ಕೃತಜ್ಞತೆ ಸಲ್ಲಿಸಬೇಕು. ಕುಂಭಮೇಳದ ಮೂಲ ಉದ್ದೇಶವೇ ಗೌರವ ಸಮರ್ಪಣೆ ಎಂದರು.

ಜಲದಿಂದ ನಾವೆಲ್ಲರೂ ಉಪಕಾರ ಪಡೆಯುತ್ತಿದ್ದೇವೆ. ನೀರಿಲ್ಲದೆ ಯಾರೂ ಬದುಕುಳಿಯಲು ಸಾಧ್ಯವಿಲ್ಲ. ಹಾಗಾಗಿ ಗಂಗೆಗೆ ಋುಣಿಯಾಗಿರಬೇಕಿರುವುದು ನಮ್ಮ ಕರ್ತವ್ಯ. ಪವಿತ್ರ ಗಂಗೆಯನ್ನು ಆಹ್ವಾನಿಸಿಕೊಂಡು ಗೌರವ ಸಲ್ಲಿಸುವುದರೊಂದಿಗೆ ನಾವು ಕೃತಾರ್ಥರಾಗಬೇಕಿದೆ ಎಂದರು.

ನದಿಗಳಲ್ಲಿ ಗಂಗೆ, ಗೋದಾವರಿ, ಸರಸ್ವತಿ, ಯಮುನೆಯಂತಹ ಹಲವಾರು ದೈವವನ್ನು ಕಾಣುತ್ತೇವೆ. ಅದರ ಜೊತೆಗೆ ಭೂ ಗರ್ಭದಲ್ಲಿ ಗುಪ್ತಗಾಮಿನಿಯಂತಿರುವ ಜಲವನ್ನು ಕೃತಜ್ಞತಾಭಾವದಿಂದ ಕಾಣಬೇಕಿದೆ ಎಂದು ನುಡಿದರು.

ಈ ಸ್ಥಳದಲ್ಲಿ ಹೇಮಾವತಿ ಹಾಗೂ ಲಕ್ಷ ್ಮಣತೀರ್ಥ ಜೊತೆಗೆ ಕಾವೇರಿ ನದಿ ಸೇರ್ಪಡೆಯಾಗಿರುವುದರಿಂದ ಹೆಚ್ಚಿನ ಮಹತ್ವ ಬಂದಿದೆ. ಇಲ್ಲಿನ ಜಲ ಮತ್ತು ಕ್ಷೇತ್ರವನ್ನು ಶುದ್ಧತೆಯಿಂದ ಕಾಪಾಡಿಕೊಂಡು ಪವಿತ್ರ ಕ್ಷೇತ್ರವಾಗಿ ಉಳಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಜೀ ಮಹಾರಾಜ…, ಕಾಗಿನೆಲೆ ಕನಕಗುರು ಪೀಠ ಶಿವಾನಂದಪುರಿ ಸ್ವಾಮೀಜಿ, ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಶ್ರೀಮಲೆ ಮಹದೇಶ್ವರ ಬೆಟ್ಟಸುಕ್ಷೇತ್ರ ಶ್ರೀಸಾಲೂರು ಬೃಹನ್ಮಠ ಪೀಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ರೇಷ್ಮೆ, ಯುವಸಬಲೀಕರಣ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌ ಅಶ್ವತ್ಥನಾರಾಯಣ್‌, ಮುಜರಾಯಿ, ಹಜ್‌ ಮತ್ತು ವP್ಫ… ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿಪಂ ಸಿಇಒ ಶಾಂತ ಎಲ…. ಹುಲ್ಮನಿ, ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ತಹಸೀಲ್ದಾರ್‌ ರೂಪ, ಅಂಬಿಗರಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣ ಸ್ವಾಮಿಗೌಡ ಇತರರಿದ್ದರು.

ಪ್ರಕೃತಿ ಮತ್ತು ಪರಿಸರವನ್ನು ಆರಾಧಿಸುವುದು ಸನಾತನ ಧರ್ಮಸಂಸ್ಕೃತಿ. ಪ್ರಕೃತಿಯ ಭಾಗವಾಗಿರುವ ನದಿಗೆ ಪೂಜನೀಯ ಸ್ಥಾನ ಕೊಟ್ಟು ಮಹಾ ಕುಂಭಮೇಳ ನಡೆಸಲಾಗುತ್ತಿದೆ. ಇದರ ಯಶಸ್ಸು ದೇಶ- ವಿದೇಶಗಳಿಗೂ ಹರಡಲಿ. ಶ್ರದ್ಧೆ ಮತ್ತು ಭಕ್ತಿಯಿಂದ ದೇಶವನ್ನು ಕಟ್ಟೋಣ. ರಾಷ್ಟ್ರೀಯತೆ, ಐಕ್ಯತೆಗೆ ಪ್ರೇರಕವಾಗಿರುವ ಕುಂಭಮೇಳದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು.

-ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವರು

ನಮ್ಮ ಈ ಭರತ ಭೂಮಿ ಧರ್ಮ, ಸಂಸ್ಕಾರ, ಸಂಸ್ಕೃತಿಗಳಿಗೆ ಹೆಸರಾಗಿದೆ. ಸಾಧು-ಸಂತರು, ಯೋಗಿಗಳು ಭರತಖಂಡದ ಮಹತ್ವ ಸಾರಿದ್ದಾರೆ. ಆಧುನಿಕತೆ, ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದರೂ ಭರತ ಭೂಮಿಯ ಧಾರ್ಮಿಕ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಅರ್ಥಪೂರ್ಣ ಹಾಗೂ ಪವಾಡಪುರುಷ ಮಹದೇಶ್ವರರು ಪ್ರಥಮ ಹೆಜ್ಜೆ ಇಟ್ಟಈ ಸ್ಥಳದಲ್ಲಿ ಕುಂಭಮೇಳ ಆಯೋಜಿಸಿರುವುದು ಐತಿಹಾಸಿಕವಾಗಿದೆ.

-ಶಶಿಕಲಾ ಜೊಲ್ಲೆ, ಮುಜರಾಯಿ ಖಾತೆ ಸಚಿವರು

ನದಿಗಳಲ್ಲಿ ನಾವು ಮಾಡುವ ಪುಣ್ಯಸ್ನಾನಕ್ಕಿಂತ ಮನಸ್ಸಿನ ಸ್ನಾನ ಮುಖ್ಯ. ಮನಸ್ಸಿನೊಳಗೆ ಅನಂತ ಜನ್ವದ ಕೊಳೆ ತುಂಬಿದೆ. ಆ ಕೊಳಯನ್ನು ತೊಳೆದು ಸನ್ಮಾರ್ಗದಲ್ಲಿ ಎಲ್ಲರೂ ಮುನ್ನಡೆದಾಗ ಪುಣ್ಯ ಪ್ರಾಪ್ತಿಯಾಗುತ್ತದೆ. ಜಲಕ್ಕೆ ನಮ್ಮ ಸಂಸ್ಕೃತಿಯಲ್ಲಿ ಹೆಚ್ಚಿನ ಮಹತ್ವವಿದೆ. ದೇಹವೆಂಬ ಕುಂಭಕ್ಕೆ ಪವಿತ್ರವಾದ ಜಲವನ್ನು ತುಂಬುವುದರೊಂದಿಗೆ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಬೇಕಿದೆ.

-ಶಿವಾನಂದಪುರಿ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠ