ಕೊಡಗು: ಕಾಫಿ ಎಸ್ಟೇಟ್‌ಗಳಲ್ಲಿ ಧೂಳೆಬ್ಬಿಸಿದ ಕಾರು ರ್‍ಯಾಲಿ..!
ಕಣ್ಮುಚ್ಚಿ, ಕಣ್ಣು ಬಿಡುವುದರ ಒಳಗಾಗಿ ಮುನ್ನುಗ್ಗಿ ಮಾಯವಾಗುತ್ತಿರುವ ಕಾರುಗಳು, ಹಸಿರು ಕಾಫಿ ತೋಟಗಳ ನಡುವೆ ಧೂಳೆಬ್ಬಿಸಿ ಸಾಗುತ್ತಿರುವ ಜಿಪ್ಸಿಗಳು. ಅಯ್ಯೋ ಇನ್ನೇನು ಕೆರೆ, ಬೇಲಿಯೊಳಕ್ಕೆ ನುಗ್ಗಿಬಿಡ್ತು ಎನ್ನುವಷ್ಟರಲ್ಲಿ ಮತ್ತೆ ಟ್ರ್ಯಾಕಿನಲ್ಲೇ ನುಗ್ಗಿ ಸಾಗಿದ ಕಾರು. ಅಬ್ಬಬ್ಬಾ ಒಂದಾ, ಎರಡಾ ಕಾರುಗಳು ಭಯಂಕರವಾಗಿ ಮುನ್ನುಗ್ಗುವ ಈ ರ್ಯಾಲಿ ಎಂತಹವರಿಗಾದರೂ ಎದೆ ನಡುಗಿಸದೆ ಬಿಡದು.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ನ.18): ಸ್ಫೋರ್ಟ್ಸ್ ಅಂದರೆ ಯಾರಿಗೆ ತಾನೆ ಇಷ್ಟ ಇರಲ್ಲ ಹೇಳಿ. ಅದರಲ್ಲೂ ವೆಹಿಕಲ್ ಸ್ಪೋರ್ಟ್ಸ್ ಅಂದರೆ ತುಂಬಾ ಕ್ರೇಜ್ ಇರುತ್ತೆ ಅಲ್ವಾ. ಜೇನುನೊಳಗಳಂತೆ ಗುಯ್ಯೋ ಎಂದು ಶಬ್ಧ ಮಾಡುತ್ತಾ ಧೂಳೆಬ್ಬಿಸಿ ಶರವೇಗದಲ್ಲಿ ನುಗ್ಗುತ್ತಿದ್ದ ಕಾರುಗಳ ರ್‍ಯಾಲಿ ಎಲ್ಲರನ್ನು ಎದೆನಡುಗಿಸುವಂತೆ ಇತ್ತು. ಅಂತಹ ಮೈಜುಮ್ಮೆನಿಸುವ ಕಾರು ರ್‍ಯಾಲಿಯನ್ನು ನೀವು ನೋಡಬೇಕು.
ಕಣ್ಮುಚ್ಚಿ, ಕಣ್ಣು ಬಿಡುವುದರ ಒಳಗಾಗಿ ಮುನ್ನುಗ್ಗಿ ಮಾಯವಾಗುತ್ತಿರುವ ಕಾರುಗಳು, ಹಸಿರು ಕಾಫಿ ತೋಟಗಳ ನಡುವೆ ಧೂಳೆಬ್ಬಿಸಿ ಸಾಗುತ್ತಿರುವ ಜಿಪ್ಸಿಗಳು. ಅಯ್ಯೋ ಇನ್ನೇನು ಕೆರೆ, ಬೇಲಿಯೊಳಕ್ಕೆ ನುಗ್ಗಿಬಿಡ್ತು ಎನ್ನುವಷ್ಟರಲ್ಲಿ ಮತ್ತೆ ಟ್ರ್ಯಾಕಿನಲ್ಲೇ ನುಗ್ಗಿ ಸಾಗಿದ ಕಾರು. ಅಬ್ಬಬ್ಬಾ ಒಂದಾ, ಎರಡಾ ಕಾರುಗಳು ಭಯಂಕರವಾಗಿ ಮುನ್ನುಗ್ಗುವ ಈ ರ್ಯಾಲಿ ಎಂತಹವರಿಗಾದರೂ ಎದೆ ನಡುಗಿಸದೆ ಬಿಡದು.
ಕೊಡಗು: ಆಸ್ತಿಗಾಗಿ ತಹಶೀಲ್ದಾರ್ ಸಹಿ, ಸೀಲ್‌ಗಳನ್ನೇ ನಕಲು ಮಾಡಿದ ಭೂಪ..!
ಹೌದು ಇಂತಹ ಎದೆ ನಡುಗಿಸುವ ದೃಶ್ಯಗಳು ಕಂಡು ಬಂದಿದ್ದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದಲ್ಲಿ. ಅಲ್ಲಿನ ರೊಬೋಸ್ಟಾ ಸ್ಫೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿ ವತಿಯಿಂದ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್ ಕಾರು ರ್ಯಾಲಿಯನ್ನು ಏರ್ಪಡಿಸಲಾಗಿತ್ತು. 2008 ರಲ್ಲಿ ಚಾಂಪಿಯನ್ ಶಿಪ್ ರ್ಯಾಲಿಯನ್ನು ಏರ್ಪಡಿಸಲಾಗಿತ್ತು. ಕಾಫಿ ತೋಟದೊಳಗೆ ಬೆಟ್ಟಗುಡ್ಡಗಳ ಒಳಗೆ ಇರುವ ಸಣ್ಣ ಸಣ್ಣ ಮಣ್ಣಿನ ರಸ್ತೆಗಳಲ್ಲಿ ಕಡಿದಾದ ತಿರುವುಗಳಲ್ಲಿ ಅಷ್ಟೇ ವೇಗವಾಗಿ ಕಾರುಗಳು ಮುನ್ನುಗ್ಗುತ್ತಿದ್ದವು. ರಸ್ತೆಗಳೇ ಕಾಣದಷ್ಟು ಧೂಳು ಮೇಲೇರುತ್ತಿದ್ದರೆ ಅದರಲ್ಲಿಯೇ ಕಾರುಗಳು ಭೋರ್ಗರೆದು ಮುನ್ನುಗ್ಗುತ್ತಿದ್ದವು. ತಿರುವುಗಳಲ್ಲಿ ಅಲ್ಲಲ್ಲಿ ಇರುವ ಜಾಗಗಳಲ್ಲಿ ಜನರು ನಿಂತು ಈ ಕಾರುಗಳು ಹಕ್ಕಿಗಳಂತೆ ಹಾರಿ ಹೋಗುತ್ತಿರುವುದನ್ನು ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸುತ್ತಿದ್ದರು. ಇಂತಹ ರ್ಯಾಲಿಗಳನ್ನು ನೋಡುವುದೆಂದರೆ ನಮಗೆ ಇನ್ನಿಲ್ಲದ ಖುಷಿ. ಕಾರುಗಳ ರ್‍ಯಾಲಿಯನ್ನು ನೋಡುವುದಕ್ಕಾಗಿಯೇ ಹೊರ ಜಿಲ್ಲೆಗಳಿಗೂ ಹೋಗಿ ನೋಡಿದ್ದೇವೆ.
ಇನ್ನು ನಮ್ಮದೇ ಜಿಲ್ಲೆಯಲ್ಲಿ ನಡೆಯುತ್ತಿರುವ ರ್‍ಯಾಲಿಯನ್ನು ಫುಲ್ ಎಂಜಾಯ್ ಮಾಡುತ್ತಿದ್ದೇವೆ ಎಂದು ಕ್ರೀಡಾಪ್ರೇಮಿ ಅಂಕಿತ್ ಪೊನ್ನಪ್ಪ ಹೇಳಿದರು. ಕೊಡಗಿನ ಕಾಫಿ ತೋಟದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಈ ರ್ಯಾಲಿಯಲ್ಲಿ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ದೆಹಲಿ, ಛತ್ತೀಸ್ಘಡ ಸೇರಿದಂತೆ ಸಾಕಷ್ಟು ರಾಜ್ಯಗಳ 60 ಕ್ಕೂ ಹೆಚ್ಚು ಕಾರು ರ್ಯಾಲಿಪಟುಗಳು ಕಾರು ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಒಟ್ಟು ಮೂರು ಕಾಫಿ ಎಸ್ಟೇಟ್ಗಳಲ್ಲಿ 8, 10 ಮತ್ತು 12 ಕಿಲೋ ಮೀಟರ್ ಉದ್ದದ ಟ್ರ್ಯಾಕಿನಲ್ಲಿ ಕಾರು ರ್ಯಾಲಿ ನಡೆಯಿತು. ಒಂದೊಂದು ಟ್ರ್ಯಾಕಿನಲ್ಲೂ ಮೂರು ರೌಂಡ್ಸ್ ನಲ್ಲಿ ಕ್ರೀಡಾಪಟುಗಳು ಕಾರುಗಳನ್ನು ಧೂಳೆಬ್ಬಿಸಿ ಓಡಿಸಿದ್ದು ವಿಶೇಷವಾಗಿತ್ತು. 12 ಕಿಲೋ ಮೀಟರ್ ಟ್ರ್ಯಾಕನ್ನು 12 ನಿಮಿಷಗಳಲ್ಲಿಯೇ ಪೂರೈಸಿ ತಮ್ಮ ಗುರಿಮುಟ್ಟುವಲ್ಲಿ ಯಶಸ್ವಿಯಾದರು. ಜೊತೆಗೆ ಹಸಿರುಮಯವಾದ ಕಾಫಿತೋಟಗಳ ನಡುವೆ ಯು ಆಕಾರದ ಮಣ್ಣಿನ ಟ್ರ್ಯಾಕಿನಲ್ಲಿ ತುಂಬಾ ಖುಷಿಯಾಗಿಯೇ ಕಾರುಗಳನ್ನು ಚಲಾಯಿಸಿದರು.
ಕೊಡಗು: 90 ಕುಟುಂಬಗಳಿಗೆ ಶೀಘ್ರವೇ ಹಕ್ಕುಪತ್ರ ವಿತರಣೆ, ಶಾಸಕ ಮಂತರ್ ಗೌಡ ಭರವಸೆ
ಈ ಸಂದರ್ಭ ಪ್ರತಿಕ್ರಿಯಿಸಿದ ಸ್ಪರ್ಧಿ ಶಿವಪ್ರಕಾಶ್ ಕಳೆದ 12 ವರ್ಷಗಳ ಹಿಂದೆ ಇಂತಹ ರ್ಯಾಲಿಯನ್ನು ಏರ್ಪಡಿಸಲಾಗಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಸ್ಪರ್ಧೆ ನಡೆಯುತ್ತಿದೆ. ಕೊಡಗಿನ ಪರಿಸರದಲ್ಲಿ ರ್ಯಾಲಿಯಲ್ಲಿ ಭಾಗವಹಿಸಿರುವುದು ಇನ್ನೂ ಖುಷಿಕೊಟ್ಟಿದೆ ಎಂದು ಹೇಳಿದರು.
ಒಟ್ಟಿನಲ್ಲಿ ದಶಕಗಳ ಬಳಿಕವೇ ರಾಷ್ಟ್ರಮಟ್ಟದ ಇಂತಹ ರೋಮಾಂಚನಕಾರಿ ಕಾರು ರ್ಯಾಲಿಯೊಂದು ಕೊಡಗಿನಲ್ಲಿ ನಡೆಯುತ್ತಿದ್ದು ಜಿಲ್ಲೆಯ ಕಾರು ರ್‍ಯಾಲಿ ಪ್ರೇಮಿಗಳು ಇದನ್ನು ಕಣ್ತುಂಬಿಕೊಂಡು ಫುಲ್ ಎಂಜಾಯ್ ಮಾಡುತ್ತಿದ್ದಾರೆ.