ರಸ್ತೆ ಅಗಲೀಕರಣ, ರಸ್ತೆ ಸರಿಪಡಿಸುವುದು, ಕುಡಿಯುವ ನೀರು ಸಂಪರ್ಕ ಕಲ್ಪಿಸುವುದು, ಬಸ್ ಸೌಕರ್ಯ ಜೊತೆಗೆ ನ್ಯಾಯ ಬೆಲೆ ಅಂಗಡಿ ಕಲ್ಪಿಸುವುದು ಹೀಗೆ ಹಲವು ಮೂಲಭೂತ ಸೌಕರ್ಯವನ್ನು ತ್ವರಿತವಾಗಿ ಬಗೆಹರಿಸಲಾಗುವುದು:  ಶಾಸಕ ಡಾ.ಮಂತರ್ ಗೌಡ 

ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

Add Asianetnews Kannada as a Preferred SourcegooglePreferred

ಕೊಡಗು(ನ.16): ಹೊದ್ದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೆಮಾಡು ಕಾನ್ಸಿರಾಮ್ ನಗರ ನಿವಾಸಿಗಳ 90 ಕುಟುಂಬಗಳಿಗೆ ಹೊಸ ವರ್ಷದ ವೇಳೆಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ. 

ಮಡಿಕೇರಿ ತಾಲ್ಲೂಕು ಹೊದ್ದೂರು ಬಳಿಯ ಪಾಲೆಮಾಡು ಗ್ರಾಮದ ಕಾನ್ಸಿರಾಮ್ ನಗರ ನಿವಾಸಿಗಳ ಕುಂದುಕೊರತೆ ಸಭೆ ನಡೆಸಿ ಶಾಸಕ ಮಂತರ್ ಗೌಡ ಮಾತನಾಡಿದರು. ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಮಾಡು ಬಳಿಯಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಆಗುವುದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ. ಇದರಿಂದ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಪಾಲೆಮಾಡು ಕಾನ್ಸಿರಾಮ್ ನಗರದಲ್ಲಿ ವಾಸಿಸುತ್ತಿರುವ ಎಲ್ಲಾ ಅರ್ಹ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಹೇಳಿದರು. 

ಮಡಿಕೇರಿಯ ಹೊಟೇಲ್, ಬೇಕರಿಗಳಲ್ಲಿ ರುಚಿ ಅಂತ ತಿಂದ್ರೆ ರೋಗ ಗ್ಯಾರಂಟಿ..!

ಇಲ್ಲಿನ ರಸ್ತೆ ಅಗಲೀಕರಣ, ರಸ್ತೆ ಸರಿಪಡಿಸುವುದು, ಕುಡಿಯುವ ನೀರು ಸಂಪರ್ಕ ಕಲ್ಪಿಸುವುದು, ಬಸ್ ಸೌಕರ್ಯ ಜೊತೆಗೆ ನ್ಯಾಯ ಬೆಲೆ ಅಂಗಡಿ ಕಲ್ಪಿಸುವುದು ಹೀಗೆ ಹಲವು ಮೂಲಭೂತ ಸೌಕರ್ಯವನ್ನು ತ್ವರಿತವಾಗಿ ಬಗೆಹರಿಸಲಾಗುವುದು ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ಹೇಳಿದರು. 

ಸರ್ಕಾರ ಬಡ ಜನರ ಏಳಿಗೆಗಾಗಿ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅದನ್ನು ಬಳಸಿಕೊಂಡು ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದು ಶಾಸಕರು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಇಲ್ಲಿನ ಪಾಲೆಮಾಡು ನಿವಾಸಿಗಳಿಗೆ ಹಕ್ಕುಪತ್ರ ಕಲ್ಪಿಸುವ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿಯವರ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಿ ಕಾನೂನು ಪ್ರಕಾರ 90 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗುವುದು ಎಂದು ಹೇಳಿದರು. 

ಇಲ್ಲಿನ 34 ಕುಟುಂಬಗಳಿಗೆ 94ಸಿ ಅಡಿ ನಿವೇಶನ ರಹಿತರಿಗೆ ನಿವೇಶನ ಒದಗಿಸಲಾಗುವುದು. ಪಾಲೆಮಾಡು ಕಾನ್ಸಿರಾಮ್ ನಗರದ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ವತಿಯಿಂದ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರಕ್ಕೆ ಗ್ರಾಮ ಪಂಚಾಯತ್ ಮೂಲಕ ಕ್ರಿಯಾ ಯೋಜನೆಯ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. 

ಗ್ರಾಮದಲ್ಲಿ 260 ಕುಟುಂಬಗಳು ವಾಸಿಸುತ್ತಿದ್ದು, ನ್ಯಾಯಬೆಲೆ ಅಂಗಡಿ ಆರಂಭ, ಹಾಗೆಯೇ ಹತ್ತಿರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಕ್ಕೆ ಕ್ರಮವಹಿಸಲಾಗುವುದು. ಜೊತೆಗೆ ಬಸ್ ಸೌಲಭ್ಯ ಕಲ್ಪಿಸಲು ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ನುಡಿದರು. 

ಜಿಲ್ಲಾಡಳಿತ ವತಿಯಿಂದ ಗ್ರಾಮಕ್ಕೆ ಎಲ್ಲಾ ರೀತಿಯ ಮೂಲ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು. ತಮ್ಮ ಹಕ್ಕುಗಳಿಗೆ ಜಿಲ್ಲಾಡಳಿತ ಸ್ಪಂದಿಸಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಜಿಲ್ಲಾಡಳಿತ ಜೊತೆ ಸಹಕರಿಸಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆಯುವತ್ತ ಗಮನಹರಿಸಬೇಕು ಎಂದರು. 

ಗ್ರಾಮದ ಮುಖ್ಯಸ್ಥರಾದ ಕೆ.ಮೊಣ್ಣಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇಲ್ಲಿನ ಜನರ ಬದುಕು ಹಸನು ಮಾಡುವ ನಿಟ್ಟಿನಲ್ಲಿ ಕಳೆದ 16 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಇಲ್ಲಿನ ಕುಂದು ಕೊರತೆಯನ್ನು ಪರಿಹರಿಸಬೇಕು ಎಂದು ಮನವಿ ಮಾಡಿದರು. ಹಕ್ಕುಪತ್ರ ವಿತರಣೆಯಲ್ಲಿ ಲೋಪವಾಗಿದ್ದು, ಇದನ್ನು ಸರಿಪಡಿಸಬೇಕು. 1200 ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದು, ಕನಿಷ್ಠ ಸೌಲಭ್ಯಗಳನ್ನು ಈಡೇರಿಸಬೇಕು ಎಂದರು. 

ಮಡಿಕೇರಿ: ಕರುಳ ಬಳ್ಳಿಯ ತಾಯಿ ಜೊತೆ ಸೇರಿಸಿದ ಅರಣ್ಯ ಇಲಾಖೆ ಸಿಬ್ಬಂದಿ..!

ಇಲ್ಲಿನ ಕ್ರೀಡಾಂಗಣ ನಿರ್ಮಾಣ ಮತ್ತು ಸ್ಮಶಾನ ಜಾಗ ಸಂಬಂಧಿಸಿದಂತೆ ಗೊಂದಲವಿದ್ದು, ಇದನ್ನು ಸರಿಪಡಿಸಬೇಕು. ಜನಸಂಖ್ಯೆ ಆಧಾರದಲ್ಲಿ ಪ್ರತಿ ಕುಟುಂಬಕ್ಕೂ 2 ಎಕರೆ ಭೂಮಿ ಒದಗಿಸಬೇಕು. ಸಮಾಜ ಮುಖಿಯಾಗಿ ಬದುಕಲು ಅವಕಾಶ ಮಾಡಬೇಕು. ನೊಂದ ಜನರಿಗೆ ನ್ಯಾಯ ಒದಗಿಸಬೇಕು ಎಂದು ಮೊಣ್ಣಪ್ಪ ಅವರು ಕೋರಿದರು.

ಗ್ರಾ.ಪಂ.ಅಧ್ಯಕ್ಷರಾದ ಎಚ್.ಎ.ಹಂಸ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ತಹಶೀಲ್ದಾರರಾದ ಪ್ರವೀಣ್ ಕುಮಾರ್, ತಾ.ಪಂ.ಇಒ ಶೇಖರ್, ಭೂ ದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್, ಪಿಡಿಒ ಅಬ್ದುಲ್ಲಾ ಇದ್ದರು.