ಧಾರವಾಡ(ಜೂ.17): ಜಿಲ್ಲೆಯಲ್ಲಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಈ ರೋಗ ತಡೆಯುವ ನಿಟ್ಟಿನಲ್ಲಿ ಸ್ವಯಂಪ್ರೇರಿತವಾಗಿ ನರೇಂದ್ರ ಗ್ರಾಮದಲ್ಲಿ ಲಾಕ್‌ಡೌನ್‌ ಘೋಷಿಸಿಕೊಳ್ಳುವ ಮೂಲಕ ಮುಂಜಾಗ್ರತೆ ವಹಿಸಿದೆ.

ತಾಲೂಕಿನ ಮನಸೂರ ಗ್ರಾಮಸ್ಥರು ಊರಿಗೆ ಬಸ್‌ ಬಿಡದಂತೆ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವ ಮೂಲಕ ಮುಂಜಾಗ್ರ​ತಾ ಕ್ರಮ ವಹಿಸಿದ್ದ ಬೆನ್ನಲ್ಲೆ ತಾಲೂಕಿನ ನರೇಂದ್ರ ಗ್ರಾಮದ ಜನರು ಇದೀಗ ಸ್ವಯಂಪ್ರೇರಣೆಯಿಂದ ಲಾಕ್‌ಡೌನ್‌ ಘೋಷಿಸಿಕೊಂಡಿದೆ. ಗ್ರಾಮದಲ್ಲಿನ ಚಹಾ ಅಂಗಡಿ, ಪ್ರಾರ್ಥನಾ ಮಂದಿರಗಳು ಸೇರಿದಂತೆ ಸಾರ್ವಜನಿಕರು ಗುಂಪುಗೂಡುವ ಇನ್ನಿತರ ಸ್ಥಳಗಳನ್ನು ಸಂ​ಪೂರ್ಣ ಬಂದ್‌ ಮಾಡಿಕೊಂಡಿದ್ದಾರೆ. ಖಾಸಗಿ ವಾಹನಗಳ ಸಂಚಾರಕ್ಕೆ ಅನುಮತಿಸದಿರುವ ಗ್ರಾಮ ಪಂಚಾಯಿತಿ, ನಮ್ಮೂರಿಗೆ ಸದ್ಯಕ್ಕೆ ಬಸ್‌ಗಳನ್ನು ಬಿಡಬೇಡಿ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಕೂಡ ಬರೆದಿದೆ. ಈ ಮಧ್ಯೆ ಊರಿನಿಂದ ಯಾರೂ ​ಆಚೆ ಹೋಗ​ಬೇ​ಡಿ ಗ್ರಾಪಂ ಡಂಗೂ​ರ ಸಾರಿ​ದೆ.

ಧಾರವಾಡ: ನಾಲ್ಕು ಮಂದಿಗೆ ಕೊರೋನಾ ಸೋಂಕು ತಗುಲಿಸಿದ ಶಿಕ್ಷಕಿ, 163ಕ್ಕೇರಿದ ಪಾಸಿಟಿವ್‌ ಕೇಸ್‌

ಗ್ರಾಮಸ್ಥರ ಮನವಿ ಹಿನ್ನೆಲೆಯಲ್ಲಿ ಬಸ್‌ ಸೇವೆ ನಿಲ್ಲಿಸಲು ಪತ್ರ ಬರೆದಿರುವ ಗ್ರಾಪಂಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕಾದು ನೋಡಬೇಕಿದೆ. ಈ ಗ್ರಾಮಗಳ ಜನರ ತೀರ್ಮಾನ ಸಮಯೋಚಿತವಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ಇನ್ನೂ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಕೊಂಡರೂ ಅಚ್ಚರಿಪಡಬೇಕಿಲ್ಲ. ತಾಲೂಕಿನ ಈ ಎರಡು ಗ್ರಾಮಗಳು ಸ್ವಯಂಪ್ರೇರಣೆಯಿಂದ ಲಾಕ್‌ಡೌನ್‌ ಘೋಷಿಸಿಕೊಳ್ಳುವ ಮೂಲಕ ಅನ್ಯಗ್ರಾಮಗಳಿಗೆ ಮಾದರಿಯಾಗಿವೆ.