ನಿಂಗರಾಜ ಬೇವಿನಕಟ್ಟಿ

ನರೇಗಲ್ಲ(ಅ.2):  ಒಟ್ಟು 17 ಸದಸ್ಯ ಬಲ ಹೊಂದಿರುವ ನರೇಗಲ್ಲ ಪಪಂಗೆ 2018ರ ಅಗಸ್ಟ್‌ 31ಕ್ಕೆ ಚುನಾವಣೆ ನಡೆದು ಸೆಪ್ಟೆಂಬರ್‌ 3ಕ್ಕೆ ಫಲಿತಾಂಶ ಹೊರಬಿದ್ದಿದ್ದು ಅದೇ ದಿನ ಮೀಸಲಾತಿ ಕೂಡಾ ಪ್ರಕಟಗೊಂಡು ಕಾರಣಾಂತರಗಳಿಂದ ತಡೆಯೊಡ್ಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಅಧಿಕಾರಕ್ಕಾಗಿ ಕಾದು ಕುಳಿತಿದ್ದ ಸದಸ್ಯರಿಗೆ ಇನ್ನೂ ಅಧಿಕಾರ ಸ್ವೀಕರಿಸುವ ಭಾಗ್ಯ ಒದಗಿ ಬಂದಿಲ್ಲ.

ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಸದಸ್ಯರುಗಳ ವಾರ್ಡುಗಳು ಅಭಿವೃದ್ಧಿ ಕುಂಠಿತಗೊಂಡಿರುವುದರಿಂದ ಸದಸ್ಯರಿಗೆ ಯಾವಾಗ ಅಧಿಕಾರ ದೊರಕುತ್ತದೆಯೋ ಎನ್ನುವುದು ಯಕ್ಷಪ್ರಶ್ನೆಯಾಗಿ ಕಾಡಲಾರಂಭಿಸಿದೆ.

ಚುನಾವಣೆ ಮುಗಿದು ವರ್ಷವಾಯಿತು:

ಒಂದು ವರ್ಷದ ಹಿಂದೆ ಪಪಂಗೆ ಚುನಾವಣೆ ನಡೆಯಿತು. ಹಿಂದಿನ ಅವಧಿಯಲ್ಲಿ ಮತದಾರ ಪ್ರಭು ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿರಲಿಲ್ಲ. ಆಗ ಕಾಂಗ್ರೆಸ್‌ 6, ಬಿಜೆಪಿ 8, ಕೆಜೆಪಿ 1 ಮತ್ತು ಪಕ್ಷೇತರರು ಇಬ್ಬರನ್ನೊಳಗೊಂಡಂತೆ ಒಟ್ಟು 17 ವಾರ್ಡುಗಳಲ್ಲಿ ಜಯ ಸಾಧಿಸಿ ಕೆಜೆಪಿ ಹಾಗೂ ಇಬ್ಬರೂ ಪಕ್ಷೇತರರನ್ನು ಕಾಂಗ್ರೆಸ್‌ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಐದು ವರ್ಷಗಳ ಕಾಲ ಅಧಿಕಾರ ನಿರ್ವಹಿಸಿತ್ತು. ಆ ಅವಧಿಯಲ್ಲಿ ಒಟ್ಟು ನಾಲ್ಕು ಜನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಈ ಬಾರಿ ಮತದಾರ ಪ್ರಭು ಬಿಜೆಪಿ ಪಕ್ಷಕ್ಕೆ 12 ಜನ ಸದಸ್ಯರನ್ನು ಆಯ್ಕೆಗೊಳಿಸುವ ಮೂಲಕ ಸ್ಪಷ್ಟಬಹುಮತ ನೀಡಿದ್ದಾನೆ. ಈ ಬಾರಿ ಬಿಜೆಪಿ 12, ಕಾಂಗ್ರೆಸ್‌ 3 ಹಾಗೂ ಪಕ್ಷೇತರರು ಇಬ್ಬರನ್ನೊಳಗೊಂಡಂತೆ ಒಟ್ಟು 17 ಜನ ಆಯ್ಕೆ ಗೊಂಡಿದ್ದಾರೆ. ಈ ಬಾರಿ ಬಿಜೆಪಿಗೆ ಸ್ಪಷ್ಟಬಹುಮತ ಇರುವುದರಿಂದ ಯಾರು ಅಧ್ಯಕ್ಷ ಗಾದಿಗೆ ಅರ್ಹರಾಗುತ್ತಾರೋ, ಮುಖಂಡರು ಯಾರಿಗೆ, ಯಾವ ಯಾವ ಮಾನದಂಡಗನ್ನು ಅನುಸರಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ದೊರಕಿಸಿಕೊಡುತ್ತಾರೋ ಕಾದು ನೋಡಬೇಕಾಗಿದೆ. ಆದರೆ ಇದಕ್ಕೆ ಇನ್ನು ತಡೆ ಇರುವುದರಿಂದ ಇವರು ಯಾವಾಗ ಅಧಿಕಾರ ಹಿಡಿಯುತ್ತಾರೆ ಎಂಬುದನ್ನು ಪಟ್ಟಣದ ಜನತೆ ನಿರೀಕ್ಷಿಸುತ್ತಿದ್ದಾರೆ.

ಮೀಸಲಾತಿ ಸಮಸ್ಯೆ:

ಪಪಂ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದರೂ ಮೀಸಲಾತಿಯ ಸಮಸ್ಯೆಯಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿರಾಸೆ ಮೂಡಿಸಿತ್ತು. 2018ರ ಸೆ. 3ರಂದು ಪ್ರಕಟಗೊಂಡಿದ್ದ ಮೀಸಲಾತಿಯಿಂದ ಬಿಜೆಪಿಯಲ್ಲಿನ ಪುರುಷ ಸದಸ್ಯರಿಗೆ ಕಸಿವಿಸಿಯಾಗಿ​ತ್ತು. ರಾಜ್ಯದ ಬಹುತೇಕ ಪುರಸಭೆ, ನಗರಸಭೆ ಪಪಂಗಳ ಮೀಸಲಾತಿ ಕುರಿತು ಕೆಲವರು ಅಸಮಾಧಾನಗೊಂಡು ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಚುನಾವಣೆ ನಡೆದು ಒಂದು ವರ್ಷ ಗತಿಸಿದರೂ ನಿರ್ಣಯ ದೊರೆಯಲಾರದೆ ನೂತನ ಸದಸ್ಯರು ಕಾಯುತ್ತಾ ಕೂರುವಂತಾಗಿದೆ. 

ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಕೂಡಲೇ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳಿಗೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಸೂಕ್ತ ದಾಖಲಾತಿ ಸಮೇತ ಮನವಿ ಸಲ್ಲಿಸಿ ಕೂಡಲೇ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಮುಂದಾಗಬೇಕು. ಸ್ಥಳೀಯ ಆಡಳಿತ ಯಂತ್ರ ಚುರುಕುಗೊಳ್ಳುವಂತೆ ಮಾಡಬೇಕು ಅಂದಾಗ ಮಾತ್ರ ಪಪಂ ಅಭಿವೃದ್ಧಿ ಸಾಧ್ಯ. ಈ ಕಾರ್ಯ ಯಾವಾಗ ಆಗುತ್ತದೆಯೋ ಕಾದು ನೋಡಬೇಕಿದೆ.