ನರಗುಂದ:(ಸೆ.28) ಆಗಸ್ಟ್‌ ತಿಂಗ​ಳಲ್ಲಿ ಉಕ್ಕಿ ಹರಿ​ದ ಬೆಣ್ಣಿಹಳ್ಳದ ಪ್ರವಾಹಕ್ಕೆ ತಾಲೂಕಿನ ಕುರ್ಲಗೇರಿ, ನವಲಗುಂದ ತಾಲೂಕಿನ ತಡಹಾಳದ ಬಳಿ ಬೆಣ್ಣಿ ಹಳ್ಳದ ಸೇತುವೆ ಪಕ್ಕದ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಅಂದಿನಿಂದಲೇ ನರಗುಂದ-ಗದಗ ಒಳಮಾರ್ಗದಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ವಿದ್ಯಾ​ರ್ಥಿಗಳ ಹಾಗೂ ಪ್ರಯಾಣಿಕರ ಪರದಾಟ ಹೇಳತೀರದಾಗಿದೆ.

ವಾಹನ ಸಂಚಾರ ವಿರ​ಳ:

ರಸ್ತೆ ದುರ್ಗ​ಮ​ವಾ​ದ ಹಿ​ನ್ನ​ಲೆ​ಯಲ್ಲಿ ಈ ಮಾರ್ಗ​ದಲ್ಲಿ ಬಸ್‌ ಸಂಚಾರ ವಿರಳ​ವಾ​ಗಿದ್ದು, ನರಗುಂದ, ಕುರ್ಲಗೇರಿ, ತಡಹಾಳ, ನಾಯ್ಕನೂರು, ಕೊಂಗವಾಡ, ಶಲವಡಿ, ಹೊಂಬಳ ಪ್ರಯಾಣಿಕರಿಗಂತೂ ತೀವ್ರ ತೊಂದರೆಯಾಗಿ ಪರಿಣಮಿ​ಸಿದೆ. ಅದರಲ್ಲೂ ತಡಹಾಳ ಹಾಗೂ ಕುರ್ಲಗೇರಿ ವಿದ್ಯಾ​ರ್ಥಿಗಳ ಪಾಡಂತೂ ದೇವ​ರಿಗೆ ಪ್ರೀತಿ. ಕುರ್ಲಗೇರಿ ಹಾಗೂ ತಡಹಾಳದ ಬಹುತೇಕ ವಿದ್ಯಾ​ರ್ಥಿ​ಗಳು ಕಾಲೇಜು ಶಿಕ್ಷಣಕ್ಕಾಗಿ ನರಗುಂದಕ್ಕೆ ಬರುತ್ತಾರೆ. ಈಗ ಅವರಿಗಂತೂ ಸಕಾಲಕ್ಕೆ ಯಾವ ಬಸ್‌ಗಳೂ ಸಿಗುತ್ತಿಲ್ಲ. ಕುರ್ಲಗೇರಿಯ ವಿದ್ಯಾ​ರ್ಥಿಗಳಿಗೆ ನರಗುಂದ ಡಿಪೋ ಕೆಲ ಬಸ್‌ಗಳ ವ್ಯವಸ್ಥೆ ಮಾಡಿದೆ.

ತಡ​ಹಾ​ಳಕ್ಕೆ ತೊಂದ​ರೆ:

ತಡಹಾಳ ಗ್ರಾಮದ ಗ್ರಾಮ​ಸ್ಥರು ಮತ್ತು ವಿದ್ಯಾ​ರ್ಥಿ​ಗಳು ತೀವ್ರ ತೊಂದ​ರೆಗೆ ಸಿಲು​ಕಿ​ಕೊಂಡಿ​ದ್ದಾರೆ. ಇಲ್ಲಿಂದ ನರಗುಂದಕ್ಕೆ ಬರಬೇಕಾದ ಹಾಗೂ ಇಲ್ಲಿಗೆ ತೆರೆಳಬೇಕಾದ ವಿದ್ಯಾ​ರ್ಥಿಗಳು ಸುಮಾರು ಮೂರು ಕಿ.ಮೀ. ನಡೆದು ಬಂದು ಕುರ್ಲಗೇರಿ ಬಸ್‌ ಹಿಡಿಯಬೇಕಿದೆ. ಇಲ್ಲವಾದರೆ ಸುಮರು 20 ಕಿ.ಮೀ. ದೂರದ ನವಲಗುಂದಕ್ಕೆ ತೆರಳಿ ನರಗುಂದಕ್ಕೆ ಬರಬೇಕು. ಇದರಿಂದ ವಿದ್ಯಾ​ರ್ಥಿಗಳು ಕೆಲವೊಮ್ಮ ತರಗತಿಗಳಿಂದ ಹಾಗೂ ಪರೀಕ್ಷೆಗಳಿಂದ ವಂಚಿತರಾಗಬೇಕಿದೆ. ಇದರ ಬಗ್ಗೆ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಕುರ್ಲಗೇರಿ ಹಾಗೂ ತಡಹಾಳದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಈ ಬಗ್ಗೆ ಮಾತನಾಡಿದ ಕುರ್ಲಗೇರಿಯ ವಿದ್ಯಾ​ರ್ಥಿ ನದಾಫ್‌, ಸಂಚಾ​ರಕ್ಕೆ ಕೊಂಚ ಅನು​ಕೂ​ಲ​ವಾ​ಗಿ​ರುವ ಕುರ್ಲ​ಗೇ​ರಿ​ಯ​ವ​ರೆಗೆ ಕೆಲವೇ ಕಲ ಬಸ್‌​ಗಳು ಸಂಚಾರ ಮಾಡು​ತ್ತಿವೆ. ಆದರೆ, ಇದರಿಂದ ನೇರ​ವಾಗಿ ವಿದ್ಯಾ​ರ್ಥಿ​ಗಳ ಮೇಲೆ ಪರಿಣಾಮ ಬೀರಿದೆ. ಕೆಲ ಬಾರಿ ನಾವು ತರ​ಗ​ತಿ​ಗ​ಳಿಂದ ವಂಚಿತರಾ​ಗ​ಬೇ​ಕಿ​ದೆ ಎಂದು ಎಂದು ಹೇಳಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ನೆರೆ ಪ್ರವಾ​ಹದ ನಂತರ ನಮ್ಮೂ​ರಿಗೆ ಎಲ್ಲ ಅಧಿಕಾರಿಗಳು ಬಂದರು, ಹೋದರು. ಆದರೆ ಈ ಸೇತುವೆ ಹಾಗೂ ರಸ್ತೆ ಮಾತ್ರ ದುರಸ್ತಿಯಾಗಿಲ್ಲ. ಇದರಿಂದ ತಡ​ಹಾಳ ಗ್ರಾಮದ ಪ್ರಯಾ​ಣಿ​ಕರು ಮತ್ತು ವಿದ್ಯಾ​ರ್ಥಿ​ಗಳು ಸಂಚಾ​ರ​ಕ್ಕಾಗಿ ಪರದಾಡು​ವಂತಾ​ಗಿದೆ ಎಂದು ತಡಹಾಳ ಗ್ರಾಮದ ಶಿವಯೋಗಿ ಹಿರೇಮಠ ಅವರು ಹೇಳಿದ್ದಾರೆ. 

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಇಲಾಖೆಯ ಸಹಾಯಹ ಕಾರ್ಯನಿರ್ವಾಹಕರಾದ ಆರ್. ಎ. ಮನಗೂಳಿ ಅವರು, ಕುರ್ಲ​ಗೇರಿ ಮತ್ತು ತಡ​ಹಾಳ ಗ್ರಾಮ​ಗ​ಳ ಮಾರ್ಗ ದುರ್ಗ​ಮ​ವಾ​ಗಿದ್ದು ಇಲಾಖೆ ಗಮ​ನಕ್ಕೆ ಬಂದಿದೆ. ಈಗಾಗಲೇ ರಸ್ತೆ ದುರಸ್ತಿ ಮಾಡುವ ಬಗ್ಗೆ ಎಲ್ಲ ಅಧಿಕಾರಿಗಳು ಬಂದು ವೀಕ್ಷಣೆ ಮಾಡಿದ್ದಾರೆ. ಎಲ್ಲ ಸಮೀಕ್ಷೆ ಮಾಡಿ ಸುಮಾರು 70 ಲಕ್ಷ ವೆಚ್ಚದ ಅಂದಾಜು ಪತ್ರಿಕೆ ಕಳುಹಿಸಲಾಗಿದೆ. ಹಣ ಬಂದ ತಕ್ಷಣ ಶೀಘ್ರವೇ ಇದನ್ನು ದುರಸ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.