ಐಟಿ ಉದ್ಯೋಗಿಗಳಿಗೆ ಸಿಹಿಸುದ್ದಿ: ಚಲ್ಲಘಟ್ಟ-ವೈಟ್‌ಫೀಲ್ಡ್ ನಡುವೆ ಮೆಟ್ರೋ ಇಂದಿನಿಂದ!
ದಿಢೀರ್ ಬೆಳವಣಿಗೆಯಲ್ಲಿ ಯಾವುದೇ ರೀತಿಯ ಅಧಿಕೃತ ಉದ್ಘಾಟನೆ ಕಾರ್ಯಕ್ರಮ ಮಾಡದೇ, ನೇರಳೆ ಮಾರ್ಗದ ವಿಸ್ತರಿತ ಭಾಗ ಕೆಂಗೇರಿಯಿಂದ-ಚಲ್ಲಘಟ್ಟ ಹಾಗೂ ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗ ಸೋಮವಾರದಿಂದ (ಅ.9) ಪೂರ್ಣ ಪ್ರಮಾಣದಲ್ಲಿ ಜನಸಂಚಾರಕ್ಕೆ ಮುಕ್ತವಾಗುತ್ತಿದೆ.

ಬೆಂಗಳೂರು (ಅ.09): ದಿಢೀರ್ ಬೆಳವಣಿಗೆಯಲ್ಲಿ ಯಾವುದೇ ರೀತಿಯ ಅಧಿಕೃತ ಉದ್ಘಾಟನೆ ಕಾರ್ಯಕ್ರಮ ಮಾಡದೇ, ನೇರಳೆ ಮಾರ್ಗದ ವಿಸ್ತರಿತ ಭಾಗ ಕೆಂಗೇರಿಯಿಂದ-ಚಲ್ಲಘಟ್ಟ ಹಾಗೂ ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗ ಸೋಮವಾರದಿಂದ (ಅ.9) ಪೂರ್ಣ ಪ್ರಮಾಣದಲ್ಲಿ ಜನಸಂಚಾರಕ್ಕೆ ಮುಕ್ತವಾಗುತ್ತಿದೆ. ದೇಶದಲ್ಲಿ ಎರಡನೇ ಅತೀ ಉದ್ದದ ಮೆಟ್ರೋ ಮಾರ್ಗ ಎನ್ನಿಸಿಕೊಂಡಿರುವ ‘ನಮ್ಮ ಮೆಟ್ರೋ’ ಇದೀಗ ವಿಸ್ತರಣೆ ಮಾರ್ಗ ಸೇರ್ಪಡೆಯಿಂದ ಒಟ್ಟಾರೆ 73.81 ಕಿಲೋ ಮೀಟರ್‌ಗೆ ಹಿಗ್ಗಿದೆ.
ಯಾವುದೇ ಔಪಚಾರಿಕ ಉದ್ಘಾಟನೆ ಇಲ್ಲದೆ 2.10 ಕಿ.ಮೀ. ಉದ್ದದ ಬೈಯಪ್ಪನಹಳ್ಳಿ-ಕೆಆರ್ ಪುರ ಮತ್ತು 2.5 ಕಿ.ಮೀ. ಉದ್ದದ ಕೆಂಗೇರಿ-ಚಲ್ಲಘಟ್ಟ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗುತ್ತಿದೆ. ಇದರಿಂದ ಸಂಪೂರ್ಣ ನೇರಳೆ ಮಾರ್ಗ ವೈಟ್‌ಫೀಲ್ಡ್ (ಪೂರ್ವ) -ಚಲ್ಲಘಟ್ಟ (ಪಶ್ಚಿಮ) ಭಾಗ 43.49 ಕಿ.ಮೀ.ಗೆ ಹಿಗ್ಗುತ್ತಿದ್ದು, ವಿಶೇಷವಾಗಿ ಐಟಿ ಉದ್ಯೋಗಿಗಳು ಹಾಗೂ ಜನತೆ ಹೆಚ್ಚಿನ ಅನುಕೂಲವಾಗಲಿದೆ. ಸದ್ಯ ಪ್ರತಿದಿನ ನೇರಳೆ, ಹಸಿರು ಮಾರ್ಗದಲ್ಲಿ ಸರಿಸುಮಾರು 6.50 ಲಕ್ಷ ಜನ ಪ್ರಯಾಣಿಸುತ್ತಿದ್ದು, ಇವೆರಡು ಮಾರ್ಗ ಸೇರ್ಪಡೆಯಿಂದ 7.50 ಲಕ್ಷ ಜನ ಸಂಚರಿಸುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಜತೆಗೆ ಹೊರವರ್ತುಲ ರಸ್ತೆಯಲ್ಲಿ ವಾಹನ ದಟ್ಟಣೆಯೂ ನಿಯಂತ್ರಣಗೊಳ್ಳುವ ನಿರೀಕ್ಷೆಯಿದೆ.
ಆನೇಕಲ್ ಪಟಾಕಿ ದುರಂತ, ಮಾಲೀಕನ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ: ಸಿದ್ದರಾಮಯ್ಯ
ಪೀಕ್ ಅವರ್‌ನಲ್ಲಿ 3 ನಿಮಿಷಕ್ಕೊಂದು ರೈಲು: ವೈಟ್‌ಫೀಲ್ಡ್‌ನಿಂದ ನೇರವಾಗಿ ಚಲ್ಲಘಟ್ಟದವರೆಗೆ ಯಾವುದೇ ತಡೆಯಿಲ್ಲದೆ ಪ್ರಯಾಣಿಕರು ಸಂಚರಿಸಬಹುದಾಗಿದೆ. ಸಂಚಾರ ದಟ್ಟಣೆ ಇಲ್ಲದ ವೇಳೆಯೂ ವೈಟ್‌ಫೀಲ್ಡ್‌ನಿಂದ ಪಟ್ಟಂದೂರು ಅಗ್ರಹಾರ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ಪಟ್ಟಂದೂರು ಅಗ್ರಹಾರದಿಂದ ಮೈಸೂರು ರಸ್ತೆ ನಿಲ್ದಾಣಕ್ಕೆ ಪ್ರತಿ 5 ನಿಮಿಷಕ್ಕೆ ಒಂದು ಮೆಟ್ರೋ ರೈಲು ಸಂಚರಿಸಲಿದೆ. ದಟ್ಟಣೆಯ ಸಮಯದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಎಂ.ಜಿ.ರಸ್ತೆ ಮಾರ್ಗದಲ್ಲಿ ಪ್ರತಿ 3 ನಿಮಿಷಕ್ಕೆ ಒಂದು ರೈಲು ಸಂಚಾರ ಆಗಲಿದೆ. ಮೈಸೂರು ರಸ್ತೆಯಿಂದ ಚಲ್ಲಘಟ್ಟ ಮಾರ್ಗದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ವಿಸ್ತೃತ ಮಾರ್ಗ ವಿಳಂಬಕ್ಕೆ ವ್ಯಕ್ತವಾಗಿದ್ದ ಜನಾಕ್ರೋಶ: ಕೆ.ಆರ್.ಪುರದಿಂದ ವೈಟ್‌ಫೀಲ್ಡ್ ವರೆಗೆ ಕಳೆದ ಮಾರ್ಚ್‌ನಿಂದ ಮೆಟ್ರೋ ಸಂಚಾರವಿತ್ತಾದರೂ ಈ ವಿಭಾಗ ಸಂಪರ್ಕಿಸಲು ಬೈಯ್ಯಪ್ಪನಹಳ್ಳಿಯಿಂದ ಕೆ.ಆರ್.ಪುರದವರೆಗೆ ಮಾರ್ಗ ಇರಲಿಲ್ಲ. ಇದರಿಂದ 2.10 ಕಿ.ಮೀ. ಅಂತರ ಕ್ರಮಿಸಲು ಫೀಡರ್ ಬಸ್, ಖಾಸಗಿ ವಾಹನ ಅವಲಂಬಿಸಬೇಕಾಗಿತ್ತು. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಸೆ.25ರಂದು ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರಂ ಮತ್ತು ಸೆ.30ರಂದು ಕೆಂಗೇರಿ-ಚಲ್ಲಘಟ್ಟ ಮಾರ್ಗಕ್ಕೆ ಅನುಮತಿ ನೀಡಿದ್ದರೂ ಈ ಮಾರ್ಗಗಳನ್ನು ಆರಂಭಿಸದ ಬಗ್ಗೆ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ವೆಬ್ ಗರ್ಡರ್‌ನಿಂದ ಕಾಮಗಾರಿ ವಿಳಂಬ: ಕೆ.ಆರ್.ಪುರ-ವೈಟ್‌ಫೀಲ್ಡ್ ಉದ್ಘಾಟನೆಯಾದ ಆರು ತಿಂಗಳ ಬಳಿಕ ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗ ಇಂದು ಜನಸಂಚಾರಕ್ಕೆ ಲಭ್ಯವಾಗುತ್ತಿದೆ. ಬೆನ್ನಿಗಾನಹಳ್ಳಿ ಬಳಿ ರೈಲ್ವೆ ಮೇಲ್ಸೇತುವೆಯಾಗಿ ಓಪನ್ ವೆಬ್ ಗರ್ಡರ್ ಅಳವಡಿಕೆ ಕಾಮಗಾರಿ ನಿಧಾನವಾಗಿದ್ದರಿಂದ ಒಟ್ಟಾರೆ ಕಾಮಗಾರಿ ವಿಳಂಬವಾಗಿತ್ತು.
ಉದ್ಘಾಟನಾ ಕಾರ್ಯಕ್ರಮವಿಲ್ಲ: ವಿಸ್ತರಿತ ಮಾರ್ಗದ ಉದ್ಘಾಟನೆ ವಿಳಂಬದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಈ ಎರಡು ಮಾರ್ಗಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕರ್ನಾಟಕ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿತ್ತು. ಈ ಎರಡು ಮಾರ್ಗಗಳನ್ನು ಅ.9ರಿಂದ ಪ್ರಯಾಣಿಕರ ಸೇವೆಗಾಗಿ ಮುಕ್ತಗೊಳಿಸಲು ತಿಳಿಸಿತ್ತು.
ವಿಳಂಬಕ್ಕೆ ಪ್ರತಿಷ್ಠೆ ಕಾರಣ?: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಮಾರ್ಗ ಉದ್ಘಾಟಿಸಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಿದ್ದಿಗೆ ಬಿದ್ದಿದ್ದರಿಂದ ರೈಲು ಆರಂಭ ವಿಳಂಬವಾಯಿತು. ಸಂಸದ ಪಿ.ಸಿ.ಮೋಹನ್ ಹಾಗೂ ತೇಜಸ್ವಿ ಸೂರ್ಯ ಬುಧವಾರ ಮಧ್ಯಾಹ್ನ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ‘ಉದ್ಘಾಟನೆಗೆ ಕಾಯುವುದು ಬೇಡ, ನೇರವಾಗಿ ಚಾಲನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ’ ಎಂದು ಪೋಸ್ಟ್ ಮಾಡಿದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಅ.5ರಂದೇ ನಾನು ಈ ಮಾರ್ಗವನ್ನು ತೆರೆಯಲು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೆ. ಎರಡು ವಾರದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಆಗುವುದಾಗಿ ತಿಳಿಸಿದ್ದರು. ಆದರೆ, ಈ ನಡುವೆ ಜನರಿಗೆ ಉಂಟಾಗುವ ತೊಂದರೆ ತಪ್ಪಿಸಲು ತಕ್ಷಣ ಸಂಚಾರ ಆರಂಭಿಸಲಾಗುತ್ತಿದೆ’ ಎಂದು ಪೋಸ್ಟ್ ಮಾಡಿದ್ದಾರೆ.
ಸಂಚಾರ ಸಮಯ: ಕೊನೆಯ ರೈಲು ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ರಾತ್ರಿ 10.45ಕ್ಕೆ ಹಾಗೂ ಉಳಿದ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11.05ಕ್ಕೆ ಹೊರಡುತ್ತದೆ. ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ರೈಲು ಸೇವೆ ಎಂದಿನಂತೆ ಬೆಳಗ್ಗೆ 5ಕ್ಕೆ ಆರಂಭವಾಗುತ್ತದೆ.
ಯುದ್ಧಪೀಡಿತ ಇಸ್ರೇಲ್‌ನಲ್ಲಿ 12 ಸಾವಿರಕ್ಕೂ ಅಧಿಕ ಕರಾವಳಿ ಕನ್ನಡಿಗರು!
ಅಂಕಿ ಅಂಶ
ನೇರಳೆ ಮಾರ್ಗದ ಉದ್ದ: 43.49 ಕಿ.ಮೀ.
ನೇರಳೆ ಒಟ್ಟು ನಿಲ್ದಾಣ: 37
ನೇರಳೆ ಮಾರ್ಗದ ಟಿಕೆಟ್ ದರ: ₹60
ಪ್ರಯಾಣದ ಅವಧಿ: 76-80 ನಿಮಿಷ
ಸದ್ಯದ ಪ್ರಯಾಣಿಕರು: 6.50 ಲಕ್ಷ
ಪ್ರಯಾಣಿಕರ ಸೇರ್ಪಡೆ ನಿರೀಕ್ಷೆ: ನಿತ್ಯ 1 ಲಕ್ಷ
ಹಸಿರು ಮಾರ್ಗ: 30.32 ಕಿಮೀ
ನಿಲ್ದಾಣ: 29
ಮೆಟ್ರೋ ವ್ಯಾಪ್ತಿ: 73.81 ಕಿ.ಮೀ.
ಒಟ್ಟು ನಿಲ್ದಾಣಗಳು: 66