ಸದ್ಯಕ್ಕೆ ಮೆಟ್ರೋ ಪ್ರಯಾಣ ದರ ಹೆಚ್ಚಿಸುವುದಿಲ್ಲ: ಪರ್ವೇಜ್ ಸ್ಪಷ್ಟನೆ
ವಿದ್ಯುತ್ ದರ ಪರಿಷ್ಕರಣೆ, ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದ್ದರೂ ಸದ್ಯ ನಮ್ಮ ಮೆಟ್ರೋ ಪ್ರಯಾಣ ಶುಲ್ಕ ಹೆಚ್ಚಳ ಸಾಧ್ಯತೆ ಇಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.
ಬೆಂಗಳೂರು (ಜೂ.08): ವಿದ್ಯುತ್ ದರ ಪರಿಷ್ಕರಣೆ, ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದ್ದರೂ ಸದ್ಯ ನಮ್ಮ ಮೆಟ್ರೋ ಪ್ರಯಾಣ ಶುಲ್ಕ ಹೆಚ್ಚಳ ಸಾಧ್ಯತೆ ಇಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. ‘ಕನ್ನಡಪ್ರಭ’ ಜೊತೆ ಮಾತನಾಡಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಮೆಟ್ರೋ ಶುಲ್ಕ ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ನಮ್ಮ ಕೈಯಲ್ಲಿಲ್ಲ. ಅದರ ಬಗ್ಗೆ ಸಮಿತಿ ರಚಿಸಿ ವರದಿ ಪಡೆದು ಪ್ರಸ್ತಾವನೆ ಸಲ್ಲಿಸಬಹುದಷ್ಟೇ. ಕೇಂದ್ರ ಸಾರಿಗೆಯೂ ಇದರ ಸಾಧಕ ಬಾಧಕಗಳನ್ನು ಯೋಚಿಸುತ್ತದೆ. ನಿವೃತ್ತ ಹೈಕೋರ್ಚ್ ನ್ಯಾಯಾಧೀಶರ ನೇತೃತ್ವದಲ್ಲಿ ಅಲ್ಲಿಯೂ ಸಮಿತಿ ರಚನೆಯಾಗಲಿದೆ.
ಅವರ ವರದಿಯನ್ನು ಆಧರಿಸಿ ದರ ಪರಿಷ್ಕರಣ ಆಗಲಿದೆ. ನಾವು ಕೂಡ ದರ ಹೆಚ್ಚಿಸುವ ಬಗ್ಗೆ ಯಾವುದೇ ಪ್ರಸ್ತಾವನೆ ಸಲ್ಲಿಸುತ್ತಿಲ್ಲ ಎಂದು ಹೇಳಿದರು. ಒಂದು ಟರ್ಮಿನಲ್‌ನಿಂದ ಇನ್ನೊಂದು ಟರ್ಮಿನಲ್‌ಗೆ ಗರಿಷ್ಠ ನಾವು 60 ನಿಗದಿ ಪಡಿಸಿದ್ದೇವೆ. ಈ ಹಿಂದಿಗಿಂತ ವ್ಯಾಪ್ತಿಯೂ ವಿಸ್ತಾರವಾಗಿದೆ. ಟರ್ಮಿನಲ್‌ಗಳ ನಡುವಿನ ಈ ಗರಿಷ್ಠ ದರವನ್ನು ಕೇಂದ್ರ ಸರ್ಕಾರದ ಎದುರು ನಿಗದಿ ಮಾಡುವ ಕಾರ್ಯ ಬಾಕಿ ಇದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗಳ ಮನೆ ಮೇಲೆ ಪೊಲೀಸರ ದಾಳಿ: ಮಾರಕಾಸ್ತ್ರ ಪತ್ತೆ
ಜೂ.11ರ ಬಳಿಕ ಬಿಎಂಟಿಸಿ ಸೇರಿದಂತೆ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ತನ್ನ ಒಂದಿಷ್ಟುಮಹಿಳಾ ಪ್ರಯಾಣಿಕರನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಇದು ಮೆಟ್ರೋದ ಆದಾಯದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ. ಸದ್ಯಕ್ಕೆ ದರ ಪರಿಷ್ಕರಣೆ ಇಲ್ಲ ಎಂದಿರುವ ಬಿಎಂಆರ್‌ಸಿಎಲ್, ಮುಂದಿನ ದಿನಗಳಲ್ಲಿ ಕೈಗೊಳ್ಳುವ ನಿರ್ಧಾರದ ಬಗ್ಗೆ ಕಾದು ನೋಡಬೇಕಿದೆ. ಕಳೆದ 12 ವರ್ಷಗಳಿಂದ ಮೆಟ್ರೋ ಸೇವೆ ನೀಡುತ್ತಿದ್ದು, ಮೊದಲ ಹಂತದಲ್ಲಿ ನೇರಳೆ, ಹಸಿರು ಮಾರ್ಗ ಸೇರಿ 42 ಕಿ.ಮೀ. ಇದ್ದರೆ, ಇದೀಗ ಈ ಮಾರ್ಗ 68 ಕಿ.ಮೀ.ಗೆ ಏರಿಕೆಯಾಗಿದೆ. ಆದರೆ, ಹಿಂದಿನ ದರವೇ ಈಗಲೂ ಮುಂದುವರಿದಿದೆ.
ಮಹಿಳೆಯರಿಗೆ ಬಸ್ ಉಚಿತ ಪ್ರಯಾಣ: ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ನಿಯಮಿತಕ್ಕೆ ಬಿಸಿ ತಟ್ಟಲಿದೆಯೆ? ನಷ್ಟದಲ್ಲೇ ಓಡುತ್ತಿರುವ ನಮ್ಮ ಮೆಟ್ರೋಗೆ ಇದು ಸಂಕಷ್ಟತರಲಿದೆಯೇ? ಹೀಗೊಂದು ಪ್ರಶ್ನೆ ಹಾಗೂ ಲೆಕ್ಕಾಚಾರ ಮೆಟ್ರೋ ವಲಯದಲ್ಲಿ ಕೇಳಿಬಂದಿದೆ. ಉಚಿತ ಪ್ರಯಾಣದ ಅನುಕೂಲಕ್ಕಾಗಿ ಮಹಿಳೆಯರು ಮೆಟ್ರೋ ಪ್ರಯಾಣದ ತೊರೆವ ಆತಂಕ ಎದುರಾಗಿದೆ. ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ .10 (ಕ್ಯೂಆರ್ ಕೋಡ್ 9.5) ಇದೆ. ಒಂದು ದಿನದ ಪಾಸ್‌ಗೆ .150+ 50 ಕೊಡಬೇಕಾಗುತ್ತದೆ.
ಜಾತಿ ಗಣತಿ ವರದಿ ಅಂಗೀಕರಿಸಿ ಮೀಸಲಾತಿ ಗೊಂದಲಕ್ಕೆ ತೆರೆ: ಸಿಎಂ ಸಿದ್ದರಾಮಯ್ಯ ಭರವಸೆ
ಆದರೆ, ಹೊಸ ಸರ್ಕಾರದ ಆಶ್ವಾಸನೆಯಂತೆ ಬಸ್‌ನಲ್ಲಿ ಉಚಿತ ಪ್ರಯಾಣ ಜಾರಿಯಾದರೆ ಮಹಿಳೆಯರು ಮೆಟ್ರೋ ಬಿಟ್ಟು ಬಸ್ಸನ್ನು ಏರುವ ಸಾಧ್ಯತೆ ಇಲ್ಲದಿಲ್ಲ. ಬಿಎಂಟಿಸಿ ಮೆಟ್ರೋದ ಮಹಿಳಾ ಪ್ರಯಾಣಿಕರನ್ನು ಒಂದಿಷ್ಟರ ಮಟ್ಟಿಗೆ ಕಸಿಯುವುದು ನಿಶ್ಚಿತ. ಪ್ರತಿನಿತ್ಯ ಮೆಟ್ರೋದಲ್ಲಿ ಸರಾಸರಿ 5.80 ಲಕ್ಷ ಜನ ಸಂಚರಿಸುತ್ತಿದ್ದಾರೆ. ಅದರಲ್ಲಿ ಸರಾಸರಿ 2.5 ಲಕ್ಷ ಮಹಿಳಾ ಪ್ರಯಾಣಿಕರಿದ್ದಾರೆ. ಮಹಿಳೆಯರನ್ನು ಸೆಳೆಯಲೆಂದೇ ಎಲ್ಲಾ ಮೆಟ್ರೋ ರೈಲುಗಳಲ್ಲಿ ಪ್ರತ್ಯೇಕ ಬೋಗಿಯ ವ್ಯವಸ್ಥೆಯೂ ಇದೆ. ಸರ್ಕಾರಿ ನೌಕರರು, ಖಾಸಗಿ, ಟೆಕ್ ಉದ್ಯೋಗಿಗಳು, ವಿದ್ಯಾರ್ಥಿನಿಯರು ಮೆಟ್ರೋ ನೆಚ್ಚಿಕೊಂಡಿದ್ದಾರೆ. ಇದರ ಮಧ್ಯೆ ಫೀಡರ್ ಬಸ್ ವ್ಯವಸ್ಥೆಯೂ ಇದೆ.