ಮೆಟ್ರೋ ದರ ಏರಿಕೆಗೆ ಸಾರ್ವಜನಿಕರ ತೀವ್ರ ವಿರೋಧದ ಬಳಿಕ, ದರ ಇಳಿಕೆ ಮಾಡಲಾಗಿದೆ. ಆದರೆ, ಇದು ನೆಪಮಾತ್ರದ ಇಳಿಕೆ ಎಂದು ಜನರ ಆಕ್ರೋಶ ಮುಂದುವರೆದಿದೆ. ಹಲವರು ಮೆಟ್ರೋ ಬದಲಿಗೆ ಬಿಎಂಟಿಸಿ ಬಸ್ ಮತ್ತು ದ್ವಿಚಕ್ರ ವಾಹನ ಬಳಸುತ್ತಿದ್ದಾರೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ.
ಬೆಂಗಳೂರಿನ ಮೆಟ್ರೋ ದರವನ್ನು ದಾಖಲೆಯ 100ರಷ್ಟು ಏರಿಕೆ ಮಾಡಿದ್ದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದರು. ಸಾರ್ವಜನಿಕರ ಆಕ್ರೋಶ ಆಲಿಸಿದ್ದ ಸಿಎಂ ಸಿದ್ಧರಾಮಯ್ಯ ದರ ಇಳಿಕೆ ಮಾಡುವಂತೆ ಸೂಚನೆ ನೀಡಿದ್ದರು. ಅದರಂತೆ ಗುರುವಾರ ಸುದ್ದಿಗೋಷ್ಠಿ ನಡೆಸಿದ್ದ ಮೆಟ್ರೋ ಎಂಡಿ ದರ ಇಳಿಕೆ ಮಾಡಿದ್ದಾಗಿ ತಿಳಿಸಿದ್ದರು. ಆದರೆ, ಇದು ನೆಪಮಾತ್ರದ ದರ ಇಳಿಕೆ. ಇನ್ನೂ ಹಲವೆಡೆ ಹಿಂದಿನ ದರವನ್ನೇ ಉಳಿಸಿಕೊಳ್ಳಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಬೈಕಾಟ್ ಮೆಟ್ರೋ ಎಂಬ ಅಭಿಯಾನವೂ ಟ್ವಿಟ್ಟರ್ ನಲ್ಲಿ ನಡೆಯಿತು. ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಬಹುತೇಕ ಮಂದಿ ಈಗ ತಮ್ಮ ಮನೆಯಲ್ಲಿಟ್ಟಿದ್ದ ದ್ವಿಚಕ್ರ ವಾಹನಗಳನ್ನು ರೋಡಿಗೆ ಇಳಿಸಿದ್ದು, ಬೆಂಗಳೂರಿನಲ್ಲಿ ಮತ್ತೆ ಟ್ರಾಫಿಕ್ ಸಮಸ್ಯೆಯನ್ನು ಹೆಚ್ಚಿಸಿದೆ. ಇದರ ಜೊತೆಗೆ ಕೆಲವರು ಮೆಟ್ರೋ ಬಿಟ್ಟು ಬಿಎಂಟಿಸಿ ಮೊರೆ ಹೋಗಿದ್ದಾರೆ. ಹೀಗೆ ವ್ಯಕ್ತಿಯೊಬ್ಬರು ಮೆಟ್ರೋ ಬಿಟ್ಟು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿರುವುದೇಕೆ ಎಂದು ಬರೆದುಕೊಂಡಿದ್ದು ನಾನು ಮೆಟ್ರೋದಿಂದ ಬಿಎಂಟಿಸಿಗೆ ಬದಲಾದೆ ಎನ್ನುವ ಹೆಡ್ ಲೈನ್ ಬರೆದು ಮಾಸಿಕ ಬಸ್ ಪಾಸ್ ಫೋಟೋ ಹಾಕಿ ಪ್ರತಿಭಟಿಸಿದ್ದಾರೆ.
ಅಶೋಕ ಚಿಕ್ಕಪರಪ್ಪಾ ಎಂಬವರು ಈ ಬಗ್ಗೆ ಬರೆದುಕೊಂಡಿದ್ದು, ನಾನೊಬ್ಬ ಸ್ಪರ್ಧಾತ್ಮಕ ಪುಸ್ತಕಗಳ ಮಾರ್ಗದರ್ಶಕ. ಸ್ಪರ್ಧಾರ್ಥಿಗಳಿಗೆ ಪುಸ್ತಕ ಸಂಗ್ರಹಿಸಿ, ಅಂಚೆ ಮೂಲಕ ಕಳಿಸಿಕೊಡಲು ದಿನವೂ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಡುವುದು ನನ್ನ ಅಭ್ಯಾಸ. 2022ರ ಮುಂಚೆ ಬಿಎಂಟಿಸಿಯಲ್ಲಿಯೇ ಸಂಚರಿಸುತ್ತಿದ್ದ ನಾನು ಆ ಬಳಿಕ ಮೆಟ್ರೊದಲ್ಲಿಯೇ 100% ಸಂಚರಿಸುತ್ತಿದ್ದೆ. ಹೀಗಾಗಿ ತಿಂಗಳಿಗೆ 2000ರೂ. ತನಕ ಮೆಟ್ರೊ ಕಾರ್ಡ್ ಗೆ ರಿಚಾರ್ಜ್ ಮಾಡ್ತಿದ್ದೆ.
ಈಗ ಹೊಸ ದರದಲ್ಲಿ ಪ್ರಯಾಣ ಮಾಡಿದರೆ ನಾನು ತಿಂಗಳಿಗೆ 4000ರೂ. ತೆರಬೇಕಾಗುತ್ತದೆ. ಹೀಗಾಗಿ ನಾನೀಗ ಪುನಃ ಬಿಎಂಟಿಸಿ ಪ್ರಯಾಣಕ್ಕೆ ನನ್ನನ್ನು ನಾನು ಬದಲಾಯಿಸಿಕೊಂಡಿದ್ದೇನೆ.
ಸೀನಿಯರ್ ಸಿಟಿಜನ್ ಆಗಿರುವ ಕಾರಣದಿಂದ ನನಗೆ ಬಿಎಂಟಿಸಿ ತಿಂಗಳ ಪಾಸ್ (ಶೇ. 10ರ ರಿಯಾಯಿತಿಯೊಂದಿಗೆ) 1080ರೂ.ಗೆ ಸಿಕ್ಕಿದೆ. ಮೆಟ್ರೊದಲ್ಲಿ ಪ್ರಯಾಣಿಸದೇ ಇರುವುದರಿಂದ ಉಳಿತಾಯ ವಾಗುವ ಹಣದಲ್ಲಿ ನಾನು ನನ್ನದೇ ಆದ ಪುಸ್ತಕ ಭಂಡಾರಕ್ಕೆ ಒಂದಷ್ಟು ಒಳ್ಳೆಯ ಪುಸ್ತಕ ಸಂಗ್ರಹಿಸುವ ಯೋಚನೆ ಇದೆ.
ಎತ್ತರಿಸಿದ ಮಾರ್ಗದಲ್ಲಿ ಸಂಚರಿಸುತ್ತಿದ್ದುದರಿಂದ ನನಗೆ ಆಕಾಶದಲ್ಲಿ ಹಾರುತ್ತಿದ್ದ ಅಹಂ ಅಷ್ಟಿಷ್ಟು ಇತ್ತು. ಈಗ ಪುನಃ ನೆಲದ ಮೇಲೆ ಸಂಚರಿಸುವ ಮೂಲಕ ನಾನು ಆ ಅಹಂನಿಂದ ವಾಸ್ತವಕ್ಕೆ ಬಂದಿದ್ದೇನೆ. ಮೆಟ್ರೊದವರು ಬದಲಾಗದಿದ್ದರೂ ಸರಿ, ನನಗೆ ನಾನು ಬದಲಾಗುವ ಮೂಲಕ ಒಂದಷ್ಟು ಹಣ ಉಳಿತಾಯ ಮಾಡುವೆ.
