ಮಂಗಳೂರು(ಸೆ.18): ಬಿಜೆಪಿಯ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭ್ರಷ್ಟಾಚಾರ ಅಥವಾ ಡ್ರಗ್ಸ್‌ ದಂಧೆಯಲ್ಲಿ ತೊಡಗಿರುವುದು ಗೊತ್ತಾದರೆ ಒಂದೇ ಗಂಟೆಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಯುವ ಮೋರ್ಚಾ ಸಂಘಟಿಸಿದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂತಹವರ ಪತ್ತೆಗೆ ಬಿಜೆಪಿ ಶಾಸಕರ ಕಚೇರಿಗಳಲ್ಲಿ ದೂರು ಸ್ಪಂದನಾ ಕೋಶ ತೆರೆಯಲಾಗುವುದು. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಕೂಡ ಭ್ರಷ್ಟಾಚಾರ ಮತ್ತು ಡ್ರಗ್ಸ್‌ ದಂಧೆ ವಿರುದ್ಧ ತೊಡೆ ತಟ್ಟಿಹೋರಾಟಕ್ಕೆ ಧುಮುಕಿದ್ದು, ಇದನ್ನು ನಿರ್ಮೂಲನೆ ಮಾಡಲು ಶ್ರಮಿಸುವುದಾಗಿ ಹೇಳಿದರು.

ಡ್ರಗ್ ಮಾಫಿಯಾ : ಕಾಂಗ್ರೆಸ್ ಮುಖಂಡ ಖಾದರ್‌ ಆರೋಪ

ಪ್ರಧಾನಿ ಮೋದಿ ಅವರ ಆಶಯದಂತೆ ಭ್ರಷ್ಟಾಚಾರ, ಪಿಡುಗು ರಹಿತ ಭಾರತ ಆಗಬೇಕು. ಸರ್ಕಾರಿ ಕಚೇರಿಗಳಲ್ಲೂ ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ ಬರಬಾರದು ಎಂದು ತಿಳಿಸಿದರು.