ಡಿಜೆ ಹಳ್ಳಿ, ಕೆಜೆ ಹಳ್ಳಿ ಹಿಂಸಾ​ಚಾರ ದುಷ್ಕ​ರ್ಮಿಗಳ ಪೂರ್ವಯೋಜಿತ ಕೃತ್ಯ| ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ಹಿಂದೂಪರ ಸಂಘಟನೆಗಳ 21 ಕಾರ್ಯಕರ್ತರ ಹತ್ಯೆಯಾದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ| ವೋಟ್‌ಬ್ಯಾಂಕ್‌ ರಾಜಕಾರಣಕ್ಕಾಗಿ ನಿರ್ದಿಷ್ಟ ಸಮುದಾಯದ ಓಲೈಕೆಗೆ ಮುಂದಾದರು: ಕಟೀಲ್‌| 

ಬಳ್ಳಾರಿ(ಆ.14): ಬೆಂಗಳೂರಿನಲ್ಲಿ ಗಲಭೆ, ಹಿಂಸಾಚಾರದಂತಹ ಪ್ರಕರಣಗಳು ಜರುಗಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಆರೋಪಿಸಿದ್ದಾರೆ.

ಸಿರುಗುಪ್ಪ ಪಟ್ಟಣದಲ್ಲಿ ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜೈಲಿನಲ್ಲಿದ್ದ ಸಿಮಿ ಹಾಗೂ ಕೆಎಫ್‌ಡಿ ಸಂಘಟನೆಯ ಕಾರ್ಯಕರ್ತರನ್ನು ‘ಬಿ’ ರಿಪೋರ್ಟ್‌ ಹಾಕಿ ಬಿಡುಗಡೆಗೊಳಿಸಿದರು. ಇದರಿಂದ ದುಷ್ಕರ್ಮಿಗಳಿಗೆ ಧೈರ್ಯ ಬಂತು. ದಾಳಿ-ಗಲಭೆ, ಹಿಂಸಾಚಾರದ ವಿದ್ರೋಹಕ್ಕೆ ಕುಮ್ಮಕ್ಕು ಸಿಕ್ಕಂತಾಯಿತು ಎಂದು ದೂರಿದರು. ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ ಹಿಂದೂಪರ ಸಂಘಟನೆಗಳ 21 ಕಾರ್ಯಕರ್ತರ ಹತ್ಯೆಯಾದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವೋಟ್‌ಬ್ಯಾಂಕ್‌ ರಾಜಕಾರಣಕ್ಕಾಗಿ ನಿರ್ದಿಷ್ಟಸಮುದಾಯದ ಓಲೈಕೆಗೆ ಮುಂದಾದರು. ಒಂದು ವೇಳೆ ಅಂದೇ ಸಿದ್ದರಾಮಯ್ಯ ಅವರು ವಿದ್ರೋಹಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಇಂದು ಗಲಭೆ, ಹಿಂಸಾಚಾರದಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ತಿಳಿಸಿದರು.

ಪೂರ್ವಯೋಜಿತ ಕೃತ್ಯ...

ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ನಡೆದಿರುವ ಹಿಂಸಾಚಾರ ದುಷ್ಕರ್ಮಿಗಳ ಪೂರ್ವಯೋಜಿತ ಕೃತ್ಯ. 4 ಸಾವಿರ ಜನ ಏಕಾಏಕಿ ಸೇರಿದ್ದರು ಎಂದು ಕಾಂಗ್ರೆಸ್‌ ಶಾಸಕರೇ ಹೇಳಿದ್ದಾರೆ. ಹಾಗಾದರೆ ಏಕಾಏಕಿ ಇಷ್ಟೊಂದು ಜನ ಸೇರಲು ಹೇಗೆ ಸಾಧ್ಯ? ಡಿ.ಕೆ. ಶಿವಕುಮಾರ್‌ ಅವರು ಹೇಳುವಂತೆ, ‘ನಿರ್ದಿಷ್ಟ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲು ಪೊಲೀಸರು ವಿಳಂಬ ಮಾಡಿದ್ದಾರೆ’ ಎಂದಿಟ್ಟುಕೊಳ್ಳೋಣ. ಅದಕ್ಕೂ ಬೇರೆ ರೀತಿಯ ಹೋರಾಟಗಳಿವೆ. ನ್ಯಾಯಾಲಯವಿದೆ. ಅದು ಬಿಟ್ಟು ಪೊಲೀಸರು, ಪೊಲೀಸ್‌ ಠಾಣೆಗಳು, ಸಾರ್ವಜನಿಕರ ಆಸ್ತಿಗಳು ಹಾಗೂ ಮಾಧ್ಯಮಗಳ ಮೇಲೆ ಹಲ್ಲೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಭಯೋತ್ಪಾದಕರನ್ನು ಬೆಂಬಲಿಸುತ್ತಾರಾ?: ಕಟೀಲ್‌

ಶಾಂತಿಸಭೆಯ ಮಾತೇ ಇಲ್ಲ...

ಬೆಂಗಳೂರಿನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಮುದಾಯದ ಜತೆ ಶಾಂತಿಸಭೆ ಮಾಡುವ ಅಗತ್ಯವಿಲ್ಲ. ಅಶಾಂತಿ ಸೃಷ್ಟಿಸುವವರ ಜತೆ ಶಾಂತಿಸಭೆ ಮಾಡಿದರೆ ಅರ್ಥವಿಲ್ಲದಂತಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ದುಷ್ಕರ್ಮಿಗಳ ಆಸ್ತಿಮುಟ್ಟುಗೋಲು ಹಾಕುವ ನಿರ್ಧಾರ ಕೈಗೊಂಡಿದ್ದಾರೆ. ಇದನ್ನು ಪಕ್ಷವು ಸ್ವಾಗತಿಸುತ್ತದೆ. ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಯಾವುದೇ ರೀತಿಯ ಸರ್ಕಾರದ ಸೌಲಭ್ಯಗಳನ್ನು ನೀಡಬಾರದು. ಅವರಿಗಿರುವ ಎಲ್ಲ ಸೌಕರ್ಯಗಳನ್ನು ಹಿಂದಕ್ಕೆ ಪಡೆಯಬೇಕು ಎಂಬ ನಿರ್ಧಾರ ಮಾಡಿದ್ದೇವೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್‌ ಹಾಗೂ ಕೊಪ್ಪಳ ಸಂಸದ ಕರಡಿ ಸಂಗಣ್ಣ ಇದ್ದರು.

ಸಿದ್ದರಾಮಯ್ಯ-ಡಿಕೆಶಿ ಯಾರ ಪರ?

ಬೆಂಗಳೂರಿನಲ್ಲಿ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಒಬ್ಬ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರು ಬೇರೆ ರೀತಿಯಾಗಿಯೇ ಮಾತನಾಡಲು ಶುರು ಮಾಡಿದ್ದಾರೆ. ಹಾಗಾದರೆ, ನೀವಿಬ್ಬರು ದಲಿತರ ಪರವಾಗಿದ್ದೀರೋ? ದುಷ್ಕರ್ಮಿಗಳ ಪರವಾಗಿದ್ದೀರೋ? ಎಂದು ಖಚಿತಪಡಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಸವಾಲು ಹಾಕಿದರು. ನಾವು ಕಾಂಗ್ರೆಸ್‌ ಶಾಸಕರ ಜತೆ ಇರುತ್ತೇವೆ. ದುಷ್ಕರ್ಮಿಗಳಿಗೆ ಕಾನೂನು ಕ್ರಮದಲ್ಲಿ ಏನು ಮಾಡಬೇಕೋ ಅದನ್ನು ನಾವು ಮಾಡೇ ಮಾಡುತ್ತೇವೆ ಎಂದರು.