ಕೊಪ್ಪಳ(ಆ.14):  ಘಾತುಕ ಶಕ್ತಿ ಭಯೋತ್ಪಾದಕರ ಪರವೋ ಅಥವಾ ದಲಿತ ಶಾಸಕನ ಪರವೋ ಎನ್ನುವುದನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯಅವರೇ ಹೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ಆಗ್ರಹಿಸಿದ್ದಾರೆ.

ನಗರದಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಂದ ಹೆಚ್ಚೇನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅವರು ಇದೇ ರೀತಿ ಅಭಿಪ್ರಾಯ ಹೊಂದಿದ್ದಾರೆ ಎನ್ನುವುದು ಗೊತ್ತಿರುವ ಸಂಗತಿ. ಅವರ ಟ್ವೀಟ್‌ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಯಾದ ವೇಳೆಯಲ್ಲಿಯೂ ಅವರು ಸರಿಯಾಗಿ ಆಡಳಿತ ಮಾಡಲಿಲ್ಲ. ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿಲ್ಲ. ಅಷ್ಟೇ ಅಲ್ಲ, 21 ಹಿಂದೂಗಳ ಹತ್ಯೆ ಮಾಡಿದರೂ ಕ್ರಮಕೈಗೊಳ್ಳಲಿಲ್ಲ. ಇನ್ನು ಎಸ್‌ಡಿಪಿಐ ಮತ್ತು ಸಿಮಿ ಸಂಘಟನೆಯ ವಿರುದ್ಧ ಕ್ರಮಕೈಗೊಳ್ಳುವ ಬದಲು ಬಿ ರಿಪೋರ್ಟ್‌ ಹಾಕಿದರು ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರು ಆಡಳಿತದ ಅವಧಿಯಲ್ಲಿನ ದೋಷದ ಫಲವೇ ಇಂದಿನ ಪಾದರಾಯಪುರ ಮತ್ತು ಡಿಜೆ ಹಳ್ಳಿ ಘಟನೆಗಳು. ಅಂದು ಅವರ ವಿರುದ್ಧ ಕ್ರಮಕೈಗೊಳ್ಳುವ ಬದಲು ಬಿ ರಿಪೋರ್ಟ್‌ ಹಾಕಿದ್ದರಿಂದ ಅವರಿಗೆ ಧೈರ್ಯ ಬಂದಿತು. ಇದರಿಂದಲೇ ಮತ್ತೆ ಇಂಥ ಕೃತ್ಯವೆಸಗಿದ್ದಾರೆ. ಮತಕ್ಕಾಗಿ ಸಿದ್ದರಾಮಯ್ಯ ಅವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇಂಥ ಸಂಘಟನೆಗಳ ನಿಷೇಧಕ್ಕೆ ನಾನು ಈಗ ಒತ್ತಾಯ ಮಾಡುತ್ತೇನೆ. ಸರ್ಕಾರ ಈಗಾಗಲೇ ದೃಢವಾದ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಅಭಿನಂದನೀಯ. ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. ಈ ಕೃತ್ಯದ ಹಿಂದಿರುವವರನ್ನು ಪತ್ತೆ ಮಾಡಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ: ನಳಿನ್‌ ಟಾಂಗ್

ಇನ್ನು ನವೀನ್‌ ಯಾವ ಪಕ್ಷದವನು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆತ ಕಾಂಗ್ರೆಸ್‌ ಪಕ್ಷದವನು ಎನ್ನುವುದಕ್ಕೆ ಸಾಕಷ್ಟುಸಾಕ್ಷಿಗಳು ಇವೆ. ಆತ ರಾಹುಲ್‌ ಗಾಂಧಿ ಅವರನ್ನು ಹಾಡಿಹೊಗಳಿದ್ದಾನೆ. ಡಿ.ಕೆ. ಶಿವಕುಮಾರ ಬಗ್ಗೆ ಹೇಳಿಕೊಂಡಿದ್ದಾನೆ. ಇದೆಲ್ಲವೂ ಇರುವುದು ಗೊತ್ತಿದ್ದು, ಆತ ಕಾಂಗ್ರೆಸ್‌ ಪಕ್ಷದವನೇ ಎನ್ನುವುದು ಪಕ್ಕಾ. ಇನ್ನು ನಂಬಿಕೆಗೆ ಯಾರೂ ಧಕ್ಕೆ ಮಾಡಬಾರದು. ಅವರ ನಂಬಿಕೆ ಅವರಿಗೆ ಇದ್ದೇ ಇರುತ್ತದೆ. ಅದಕ್ಕೆ ಧಕ್ಕೆ ತರುವುದನ್ನು ಒಪ್ಪುವುದಿಲ್ಲ. ಆದರೆ, ಯಾರಾದರೂ ತಪ್ಪು ಮಾಡಿದ್ದರೆ ಅವರ ವಿರುದ್ಧ ದೂರು ನೀಡಬಹುದಿತ್ತು. ಕಾನೂನು ರೀತಿಯಲ್ಲಿಯೇ ಕ್ರಮಕೈಗೊಳ್ಳಬಹುದಿತ್ತು. ಆದರೆ, ಈ ರೀತಿ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.

ಗಲಭೆ ಪೂರ್ವಯೋಜಿತ

ಗಲಭೆ ಪೂರ್ವಯೋಜಿತ ಎನ್ನುವುದರಲ್ಲಿ ಎರಡು ಮಾತಿಲ್ಲ. ಪೆಟ್ರೋಲ್‌ ಬಾಂಬ್‌ ಸೇರಿದಂತೆ ಅಲ್ಲಿಯ ಬೆಳವಣಿಗೆಯನ್ನು ನೋಡಿದರೆ ಗೊತ್ತಾಗುತ್ತದೆ. ವ್ಯವಸ್ಥಿತವಾಗಿಯೇ ಇದನ್ನು ಮಾಡಲಾಗಿದೆ. ಏಕಾಏಕಿ ಅಷ್ಟೊಂದು ಜನರು ಸೇರಲು ಹೇಗೆ ಸಾಧ್ಯ? ಕಲ್ಲುಗಳು ಹೇಗೆ ಬಂದವು? ಮಂಗಳೂರಿನಲ್ಲಿಯೂ ಸಿಎಎ ವಿರುದ್ಧದ ಹೋರಾಟದಲ್ಲಿಯೂ ಇದೇ ರೀತಿ ಗಲಾಟೆ ಮಾಡಲಾಗಿತ್ತು. ಇದರಲ್ಲಿ ಈಗಾಗಲೇ ಸರ್ಕಾರ ಗಟ್ಟಿನಿರ್ಧಾರ ತೆಗೆದುಕೊಳ್ಳುತ್ತಿದ್ದು, ಕಠಿಣ ಕ್ರವಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದ​ರು ಕಟೀಲ್‌.