Asianet Suvarna News Asianet Suvarna News

ಮೇ 2ರ ನಂತರ ಕಾಂಗ್ರೆಸ್‌ ನಾಯಕರ ವಲಸೆ ಆರಂಭ: ಕಟೀಲ್‌

ದಲಿತರ ಹೆಸರಲ್ಲಿ ಕೇವಲ ಮತ ಬ್ಯಾಂಕ್‌, ಡಾ. ಅಂಬೇಡ್ಕರ್‌ ಶಾಪ| ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯ ಸಿಎಂ ಕುರ್ಚಿಗಾಗಿ ಚಕಮಕಿ ಶುರು| ಜೆಡಿಎಸ್‌ ಕಳೆದು ಹೋಗಿದೆ, ಕಾಂಗ್ರೆಸ್‌ ಮುಳಗುತ್ತಿದೆ| ಕೈಗೆ ಬುದ್ಧಿ ಕಲಿಸಿ ಬಿಜೆಪಿಗೆ ಮತ ನೀಡಿ: ನಳಿನ್‌ ಕುಮಾರ ಕಟೀಲ್‌| 

Nalin Kumar Kateel Talks Over Congress grg
Author
Bengaluru, First Published Apr 4, 2021, 3:13 PM IST

ಬೀದರ್‌(ಏ.04): ರಾಜ್ಯದ ಕಾಂಗ್ರೆಸ್‌ ಮನೆಯಲ್ಲಿ ಬೆಂಕಿ ಬಿದ್ದಾಗಿದೆ, ಇದು ಕರ್ನಾಟಕದಲ್ಲಿ ಅಭೂತಪೂರ್ವ ಬದಲಾವಣೆಗೆ ಕಾರಣವಾಗಲಿದ್ದು ಉಪಚುನಾವಣೆ ಮುಗಿದಾಕ್ಷಣ ಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರು ಬಿಜೆಪಿಗೆ ಬರುವವರಿದ್ದಾರೆ. ಮೇ 2ರ ವರೆಗೆ ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌ ಹೇಳಿದ್ದಾರೆ.

ಇಲ್ಲಿನ ಶಾಂತಿನಿಕೇತನ ಕಾಲೇಜು ಮೈದಾನದಲ್ಲಿ ಶನಿವಾರ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಭಾರತೀಯ ಜನತಾ ಪಾರ್ಟಿಗೆ ಬೆಂಗಾವಲಾಗಿ ಇರುತ್ತೇವೆ ಎಂದು ಹತ್ತಾರು ಜನ ಈಗಾಗಲೇ ನನಗೆ ಕರೆ ಮಾಡಿ ಭರವಸೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯ ಸಿಎಂ ಕುರ್ಚಿಗಾಗಿ ಚಕಮಕಿ ಶುರುವಾಗಿದೆ. ಜೆಡಿಎಸ್‌ ಕಳೆದು ಹೋಗಿದೆ, ಕಾಂಗ್ರೆಸ್‌ ಮುಳಗುತ್ತಿದೆ. ಕೈಗೆ ಬುದ್ಧಿ ಕಲಿಸಿ ಬಿಜೆಪಿಗೆ ಮತ ನೀಡಿ ಎಂದು ಮತದಾರರ ಮನೆ ಮನೆಗೆ ತೆರಳಿ ಮನವೊಲಿಸಿ ಎಂದು ಕರೆ ನೀಡಿದ್ದಾರೆ.

ದಲಿತ ಮುಖ್ಯಮಂತ್ರಿಯಾಗಲು ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ ಹಿಂದಿನಿಂದ ಚಾಕು ಹಾಕಿದ ಕಾಂಗ್ರೆಸ್‌, ಪರಮೇಶ್ವರರನ್ನು ಉಪಮುಖ್ಯಮಂತ್ರಿ ಮಾಡಲಿಲ್ಲ. ಅದಕ್ಕೂ ಮುನ್ನ ಪರಮೇಶ್ವರರನ್ನು ಸೋಲಿಸಿತು ಈ ಕಾಂಗ್ರೆಸ್‌ ಎಂದು ಕಟೀಲ್‌ ಆರೋಪಿಸಿದರು. ಅಷ್ಟಕ್ಕೂ ಸ್ವಾತಂತ್ರ್ಯ ನಂತರದ ದಿನಗಳಲ್ಲಿ ದಲಿತರ ಹೆಸರಲ್ಲಿ ರಾಜಕಾರಣ ಮಾಡಿ ಮತ ಪಡೆದು ಅಧಿಕಾರ ಗಿಟ್ಟಿಸಿಕೊಂಡಿರುವ ಕಾಂಗ್ರೆಸ್‌ಗೆ ಡಾ. ಅಂಬೇಡ್ಕರ್‌ ಅವರ ಶಾಪ ತಟ್ಟಿದೆ, ಇದರಿಂದಾಗಿ ಕೇವಲ 40 ಲೋಕಸಭಾ ಸ್ಥಾನಗಳಿಗೆ ಕಾಂಗ್ರೆಸ್‌ ಕುಸಿದಿದೆ. ಡಾ. ಅಂಬೇಡ್ಕರ್‌ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್‌ ಅವರ ಕ್ಷೇತ್ರವನ್ನು ಮರೆಯಿತು. ಅವರ ಅಂತ್ಯಸಂಸ್ಕಾರಕ್ಕೂ ಜಾಗ ಕೊಡದೇ ಅಪಮಾನ ಮಾಡಿದ್ದು ಈ ಕಾಂಗ್ರೆಸ್‌ ಎಂದರು.

'ಪ್ರಜಾಪ್ರಭುತ್ವ ಉಳಿಯಲು ಬಿಜೆಪಿ ತೊಲಗಬೇಕು'

ಬೆಂಗಳೂರಿನಲ್ಲಿ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿಸಿತು, ಅವರಿಗೆ ಇನ್ನೂ ನ್ಯಾಯಕೊಟ್ಟಿಲ್ಲ. ಡಿಕೆ ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರ ಮನೆಯಲ್ಲಿ ಅಖಂಡ ಕಣ್ಣೀರು ಹಾಕಿದ್ರೂ ಕ್ಯಾರೆ ಎನ್ನಲಿಲ್ಲ. ಆದರೆ ನಾವು ಆರೋಪಿಯನ್ನು ಬಂಧಿಸುವ ಮೂಲಕ ನ್ಯಾಯ ಕೊಟ್ಟೆವು ಎಂದರು.

ಇವತ್ತಿನವರೆಗೆ ಅಖಂಡ ಶ್ರೀನಿವಾಸಮೂರ್ತಿ ಪರ ಅಧಿವೇಶನದಲ್ಲಿ ಮಾತೆತ್ತಿಲ್ಲ, ಬೆಂಕಿ ಹಾಕಿದ ಸಂಪತ್‌ ಕುಮಾರನನ್ನು ಪಕ್ಷದಿಂದ ಉಚ್ಚಾಟಿಸಿಲ್ಲ. ಇದೇನಾ ಕಾಂಗ್ರೆಸ್‌ನವರ ದಲಿತ ಸಿದ್ಧಾಂತಗಳು. ಡಾ. ಅಂಬೇಡ್ಕರ್‌ಗೆ ಅಪಮಾನ ಮಾಡಿದ ಕಾಂಗ್ರೆಸ್‌ಗೆ ಬುದ್ಧಿ ಕಲಿಸಿ. ಬಿಜೆಪಿಯ ಶರಣು ಸಲಗರ ಅವರನ್ನು ಆರಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ. ರವಿ ಗಾಯಕವಾಡ್‌ ದಲಿತ ಶಕ್ತಿಯಾಗಿ ಬಿಜೆಪಿಗೆ ಬಂದಿದ್ದಾರೆ. ಅವರೊಟ್ಟಿಗೆ ದಲಿತ ಸಮುದಾಯ ಬಿಜೆಪಿಗೆ ಬೆಂಬಲಿಸಲಿದೆ ಎಂಬ ವಿಶ್ವಾಸವಿದೆ ಎಂದು ಕಟೀಲ್‌ ತಿಳಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಬಿಜೆಪಿ ಸೇರಿದ ಕಾಂಗ್ರೆಸ್‌ ನಾಯಕ ರವಿ ಗಾಯಕವಾಡ, ಬಿಜೆಪಿ ಅಭ್ಯರ್ಥಿ ಶರಣು ಸಲಗರ ಮತ್ತಿತರರು ಇದ್ದರು.
 

Follow Us:
Download App:
  • android
  • ios