ಬಸವಕಲ್ಯಾಣ(ಏ.02): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಎಡವಿದೆ, ಸರ್ಕಾರ ಇದೆಯೋ ಇಲ್ಲವೋ ಎನ್ನುವ ಪರಿಸ್ಥಿತಿಯಿದ್ದು ಕೂಡಲೇ ರಾಷ್ಟ್ರಪತಿ ಆಡಳಿತ ಹೇರಿ ಸರ್ಕಾರ ವಿಸರ್ಜನೆ ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಕೆ.ಎಸ್‌.ಈಶ್ವರಪ್ಪ ಅವರು ತಮ್ಮ ಇಲಾಖೆಯ ಕೆಲಸಗಳಲ್ಲಿ ಸಿಎಂ ಯಡಿಯೂರಪ್ಪ ಹಸ್ತಕ್ಷೇಪ ಮಾಡಿ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ಅವರದೇ ಸಚಿವರೊಬ್ಬರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಹೀಗಿದ್ದಾಗ ಸರ್ಕಾರ ಬಿದ್ದು ಹೋಗಿದೆ ಎಂದರೆ ತಪ್ಪಲ್ಲ ಎಂದರು.

ಪ್ರಜಾಪ್ರಭುತ್ವ ಉಳಿಯಲಿ:

ಪ್ರಜಾಪ್ರಭುತ್ವ ಉಳಿಯಲು ಬಿಜೆಪಿ ತೊಲಗಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಸರ್ಕಾರದಲ್ಲಿ ಇರುವವರಿಂದಲೇ ಮಹಿಳೆಯರಿಗೆ ಅನ್ಯಾಯವಾಗಿದೆ. ರಕ್ಷಣೆ ಇಲ್ಲದಂತಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಸವಕಲ್ಯಾಣ ಬೈಎಲೆಕ್ಷನ್‌: ಬಂಡಾಯದ ಭೂತ; ಮೂರು ಪಕ್ಷಗಳಲ್ಲಿ ಮತವಿಭಜನೆ ಆತಂಕ..!

ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಮೇಲೆ ನಮಗೆ ನಂಬಿಕೆ ಇಲ್ಲ. ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ ನ್ಯಾಯಾಧೀಶರ ಸಮ್ಮುಖದಲ್ಲಿ ತನಿಖೆ ನಡೆಸಿ, ನ್ಯಾಯ ಒದಗಿಸಿಕೊಡಬೇಕು ಎಂದು ಈಶ್ವರ ಖಂಡ್ರೆ ಆಗ್ರಹಿಸಿದರು.

ಮಾಲಾ ಗೆಲ್ಲಿಸಿ:

ಬೆಳಗಾವಿ ಲೋಕಸಭಾ ಹಾಗೂ ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲುವಾಗಲಿದೆ. ನಾರಾಯಣರಾವ್‌ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕ್ಷೇತ್ರಕ್ಕಾಗಿ ಹಗಲಿರುಳು ಸೇವೆ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅವರ ಪತ್ನಿ ಮಾಲಾ ಅವರನ್ನು ಗೆಲ್ಲಿಸಲು ಮತದಾರರು ಮುಂದಾಗಬೇಕು ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರ ಸಿಬಿಐ ಅಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿಶ್ವದಲ್ಲಿಯೇ ದೇಶದ ಹೆಸರು ಹಾಳು ಮಾಡುತ್ತಿದೆ. ಬೆಲೆ ಏರಿಕೆ ಮತ್ತು ಅರ್ಥಿಕತೆಯ ಕುಸಿತದ ಬಗ್ಗೆ ಚಿಂತಿಸುತ್ತಿಲ್ಲ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹಡಪದ ಸಮಾಜಕ್ಕೆ ಅಗೌರವದಿಂದ ಮಾತನಾಡಿದ್ದಾರೆ. ಹೀಗಾಗಿ ಕೂಡಲೇ ಅವರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟೆ, ನಗರಸಭೆ ಅಧ್ಯಕ್ಷೆ ನಾಹಿದಾ ಸುಲ್ತಾನಾ, ಎಐಸಿಸಿ ಸದಸ್ಯ ಆನಂದ ದೇವಪ್ಪ, ಶಾಂತಪ್ಪ ಜಿ. ಪಾಟೀಲ್‌, ಅರ್ಜುನ ಕನಕ, ಶಿವರಾಜ ನರಶೆಟ್ಟೆ, ಗೌತಮ ನಾರಾಯಣರಾವ್‌, ಅನುರಾಧಾ ತಪಲಿ, ಬಸವರಾಜ ತಪಲಿ ಹಾಗೂ ದತ್ತು ಮೂಲಗೆ ಉಪಸ್ಥಿತರಿದ್ದರು.