ಸಿಎಂ ಬದಲಾವಣೆ: ನಳಿನ್ ಕುಮಾರ್ ಕಟೀಲ್ ಹೇಳಿದ್ದಿಷ್ಟು
* ಬಿಎಸ್‌ವೈ ರಾಜೀನಾಮೆ ಮಾತು ಕಾರ್ಯಕರ್ತರಿಗೆ ಪ್ರೇರಣೆಯಾಗುವಂತದ್ದು
* ಪಕ್ಷದಲ್ಲಿನ ಸೂಚನೆಯಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ
* ಬಿಜೆಪಿಯಲ್ಲಿ ಅಶಿಸ್ತಿನ ಪ್ರದರ್ಶನಕ್ಕೆ ಅವಕಾಶವೇ ಇಲ್ಲ
ಬಾಗಲಕೋಟೆ(ಜೂ.09): ರಾಷ್ಟ್ರೀಯ ನಾಯಕರ ಸಭೆಯಲ್ಲಾಗಲಿ, ಶಾಸಕಾಂಗ ಸಭೆ ಸೇರಿದಂತೆ ಕೋರ್ ಕಮೀಟಿ ಸಭೆಯಲ್ಲಾಗಲಿ ರಾಜ್ಯದ ಮುಖ್ಯಮಂತ್ರಿಗಳ ಬದಲಾವಣೆ ಚರ್ಚೆ ಆಗಿಲ್ಲ. ಮುಖ್ಯಮಂತ್ರಿ ಬಿಎಸ್‌ವೈ ಅವರು ಪಕ್ಷದ ನಿಷ್ಠೆ ಹಾಗೂ ಆದರ್ಶ ಕಾರ್ಯಕರ್ತರಾಗಿ ಸಹಜವಾಗಿ ಮಾತನಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಶಸ್ವಿಯಾಗಿರುವ ಪಕ್ಷವಾಗಿದೆ. ಆ ಕಾರಣಕ್ಕಾಗಿ ಯಡಿಯೂರಪ್ಪ ಅವರು ರಾಷ್ಟ್ರೀಯ ನಾಯಕರು ಹಾಗೂ ಹೈಕಮಾಂಡ್ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದು ಎಲ್ಲ ಕಾರ್ಯಕರ್ತರಿಗೆ ಪ್ರೇರಣೆಯಾಗುವ ಮಾತು ಎಂದು ಸಮರ್ಥಿಸಿಕೊಂಡರು.
ಬಿಎಸ್‌ವೈ ಮನಸಿಗೆ ನೋವಾಗಿ ರಾಜೀನಾಮೆ ಬಗ್ಗೆ ಮಾತನಾಡಿರಬಹುದು: ಸವದಿ
ಬಿಜೆಪಿಯಲ್ಲಿ ಸಹಿ ಸಂಗ್ರಹದಂತಹ ಪದ್ಧತಿ ಇಲ್ಲ. ಬಿಎಸ್‌ವೈ ಪರವಾಗಲಿ, ವಿರೋಧವಾಗಲಿ ಸಹಿ ಸಂಗ್ರಹ ವಿಚಾರ ಇಲ್ಲವಾಗಿದೆ. ಪಕ್ಷ ಅಧಿಕಾರದಲ್ಲಿದ್ದಾಗ ಸಹಜವಾಗಿ ನೋವು, ಭಾವನೆಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಹೀಗಾಗಿ ಇಂತಹ ಚರ್ಚೆಗಳು ಸ್ವಾಭಾವಿಕ. ಮುಂಬರುವ ಚುನಾವಣೆಯ ವಿಷಯಗಳನ್ನಿಟ್ಟುಕೊಂಡು ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಅಶಿಸ್ತಿನ ಪ್ರದರ್ಶನಕ್ಕೆ ಅವಕಾಶವೇ ಇಲ್ಲ. ನಮ್ಮದು ಸಾಂವಿಧಾನಿಕವಾಗಿರುವ ಪಕ್ಷ. ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಕ್ಷವಾಗಿದೆ. ಜೊತೆಗೆ ಪಕ್ಷದಲ್ಲಿ ಶಿಸ್ತು ಸಮಿತಿಯು ಸಹ ಇದೆ. ಪಕ್ಷದಲ್ಲಿದ್ದು ಯಾರೆಲ್ಲ ಅಸಮಂಜಸವಾಗಿ ಮಾತನಾಡಿದ್ದಾರೆ ಅವರಿಗೆ ಶಿಸ್ತು ಸಮಿತಿ ನೋಟಿಸ್ ನೀಡುತ್ತದೆ. ಎರಡು ಬಾರಿ ನೋಟಿಸ್ ನೀಡಿದ ಬಳಿಕವೂ ಪಕ್ಷದ ಶಿಸ್ತನ್ನು ಮೀರಿ ನಡೆದರೆ ಅಂತವರ ವಿರುದ್ಧ ಕ್ರಮ ಅನಿವಾರ್ಯ ಎಂದು ಹೇಳಿದರು. ಪಕ್ಷದಲ್ಲಿನ ಸೂಚನೆಯಂತೆ ನಡೆದುಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಹೈಕಮಾಂಡ್ ನೀಡುವ ಸೂಚನೆ ಪಾಲಿಸಬೇಕಾಗುತ್ತದೆ. ಅದಕ್ಕೆ ಯಾರೂ ಹೊರತಲ್ಲ ಎಂದರು.