ಕಾರವಾರ, [ಸೆ.12]: ಜನಪದ ಕೋಗಿಲೆ,  ಪದ್ಮಶ್ರೀ ಪುರಸ್ಕೃತೆ, ನಾಡೋಜ ಸುಕ್ರಿ ಬೊಮ್ಮುಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರನ್ನು ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಸುಕ್ರಜ್ಜಿ ಅವರನ್ನು ಐಸಿಯು ವಾರ್ಡ್‍ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಕೋಲಾ ತಾಲೂಕಿನ ತಮ್ಮ ನಿವಾಸದಲ್ಲಿ ಇಂದು [ಗುರುವಾರ]  ಸುಕ್ರಜ್ಜಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

83 ವರ್ಷದ ಸುಕ್ರಜ್ಜಿ ಅವರು ಕಳೆದ ಎರಡು ತಿಂಗಳಿಂದೆ ಇದೇ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.  ಈಗ ಮತ್ತೆ ಅದೇ ಸಮಸ್ಯೆ ಕಾಣಿಸಿಕೊಂಡಿದೆ.

ಸುಕ್ರಜ್ಜಿ ಅವರ ಶ್ವಾಸಕೋಶದಲ್ಲಿ ಸಮಸ್ಯೆ ಇದೆ. ಹೀಗಾಗಿ ಪದೇ-ಪದೇ ಉಸಿರಾಟದಲ್ಲಿ ತೊಂದರೆಯಾಗುತ್ತಿದ್ದು, ಅವರನ್ನು ತುರ್ತು ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ಪದ್ಮಶ್ರೀ ಪುರಸ್ಕ್ರತೆ ಜಾನಪದ ಸಂಗೀತ ಸಾಧಕಿಯಾಗಿರುವ ಬೊಮ್ಮುಗೌಡ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬಡಗೇರಿಯವರಾದ ಇವರು ಸುಕ್ರಜ್ಜಿಯೆಂದೇ ಫೇಮಸ್ ಆಗಿದ್ದಾರೆ.