ಕೇಂದ್ರ ಚುನಾವಣಾ ಆಯೋಗವು ಮೇ 10 ರಂದು ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸುವುದರೊಂದಿಗೆ ಜಿಲ್ಲೆಯಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ತ್ರಿಕೊನ ಹೋರಾಟಕ್ಕೆ ಕಣ ಸಜ್ಜಾಗಿದೆ. ಕೆಲವೊಂದು ಕ್ಷೇತ್ರಗಳಲ್ಲಿ ಎಸ್‌ಡಿಪಿಐ, ಬಿಎಸ್ಪಿ, ಆಮ್‌ ಆದ್ಮಿ ಪಾರ್ಟಿಯೂ ಸ್ಪರ್ಧಿಸುತ್ತಿರುವುದರಿಂದ ಚತುಷ್ಕೋನ ಹೋರಾಟ ಕೂಡ ನಡೆಯಬಹುದು

ಮೈಸೂರು :ಕೇಂದ್ರ ಚುನಾವಣಾ ಆಯೋಗವು ಮೇ 10 ರಂದು ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟಿಸುವುದರೊಂದಿಗೆ ಜಿಲ್ಲೆಯಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ನಡುವೆ ತ್ರಿಕೊನ ಹೋರಾಟಕ್ಕೆ ಕಣ ಸಜ್ಜಾಗಿದೆ. ಕೆಲವೊಂದು ಕ್ಷೇತ್ರಗಳಲ್ಲಿ ಎಸ್‌ಡಿಪಿಐ, ಬಿಎಸ್ಪಿ, ಆಮ್‌ ಆದ್ಮಿ ಪಾರ್ಟಿಯೂ ಸ್ಪರ್ಧಿಸುತ್ತಿರುವುದರಿಂದ ಚತುಷ್ಕೋನ ಹೋರಾಟ ಕೂಡ ನಡೆಯಬಹುದು.

ಜಿಲ್ಲೆಯಲ್ಲಿ 11 ಕ್ಷೇತ್ರಗಳಿದ್ದು, ಕಳೆದ ಬಾರಿ ಜೆಡಿಎಸ್‌-5, ಕಾಂಗ್ರೆಸ್‌- 3, ಬಿಜೆಪಿ-3 ಸ್ಥಾನ ಗಳಿಸಿದ್ದವು. ಹುಣಸೂರಿನಿಂದ ಜೆಡಿಎಸ್‌ ಟಿಕೆಟ್‌ ಆಯ್ಕೆಯಾಗಿದ್ದ ಎಚ್‌. ವಿಶ್ವನಾಥ್‌ ಆಪರೇಷನ್‌ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿ, ಉಪ ಚುನಾವಣೆ ಎದುರಿಸಿದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್‌.ಪಿ. ಮಂಜುನಾಥ್‌ ಗೆದ್ದರು. ಹೀಗಾಗಿ ಪ್ರಸ್ತುತ ಜಿಲ್ಲೆಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ತಲಾ 4, ಬಿಜೆಪಿ- 3 ಸ್ಥಾನಗಳನ್ನು ಹೊಂದಿವೆ.

ಚಾಮುಂಡೇಶ್ವರಿಯಲ್ಲಿ ಜಿ.ಟಿ. ದೇವೇಗೌಡ, ಕೆ.ಆರ್‌. ನಗರದಲ್ಲಿ ಸಾ.ರಾ. ಮಹೇಶ್‌, ಪಿರಿಯಾಪಟ್ಟಣದಲ್ಲಿ ಕೆ. ಮಹದೇವ್‌ ಹಾಗೂ ಟಿ. ನರಸೀಪುರದಲ್ಲಿ ಎಂ. ಅಶ್ವಿನ್‌ಕುಮಾರ್‌- ಜೆಡಿಎಸ್‌, ನರಸಿಂಹರಾಜದಲ್ಲಿ ತನ್ವೀರ್‌ ಸೇಠ್‌, ಹುಣಸೂರಿನಲ್ಲಿ ಎಚ್‌.ಪಿ. ಮಂಜುನಾಥ್‌, ವರುಣದಲ್ಲಿ ಡಾ.ಎಸ್‌. ಯತೀಂದ್ರ ಸಿದ್ದರಾಮಯ್ಯ, ಎಚ್‌.ಡಿ. ಕೋಟೆಯಲ್ಲಿ ಅನಿಲ್‌ ಚಿಕ್ಕಮಾದು- ಕಾಂಗ್ರೆಸ್‌, ಕೃಷ್ಣರಾಜದಲ್ಲಿ ಎಸ್‌.ಎ. ರಾಮದಾಸ್‌, ಚಾಮರಾಜದಲ್ಲಿ ಎಲ್‌. ನಾಗೇಂದ್ರ, ನಂಜನಗೂಡಿನಲ್ಲಿ ಬಿ. ಹರ್ಷವರ್ಧನ್‌- ಬಿಜೆಪಿಯ ಶಾಸಕರಾಗಿದ್ದಾರೆ.

-- ಬಾಕ್ಸ್‌1-

-- ಕಾಂಗ್ರೆಸ್‌ --

ಹಾಲಿ 11 ಮಂದಿ ಶಾಸಕರ ಪೈಕಿ ವರುಣದ ಡಾ.ಎಸ್‌. ಯತೀಂದ್ರ ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲ. ಅವರ ಬದಲು ವರುಣದಿಂದ ಅವರ ತಂದೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದಾರೆ. ಮಾಜಿ ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ ಅವರಿಗೆ ಟಿ. ನರಸೀಪುರ, ಕೆ. ವೆಂಕಟೇಶ್‌ಗೆ ಪಿರಿಯಾಪಟ್ಟಣದಿಂದಲೇ ಟಿಕೆಟ್‌ ನೀಡಲಾಗಿದೆ. ಹಾಲಿ ಶಾಸಕರಾದ ತನ್ವೀರ್‌ ಸೇಠ್‌- ನರಸಿಂಹರಾಜ, ಎಚ್‌.ಪಿ. ಮಂಜುನಾಥ್‌- ಹುಣಸೂರು, ಅನಿಲ್‌ ಚಿಕ್ಕಮಾದು- ಎಚ್‌.ಡಿ.ಕೋಟೆ ಮತ್ತೆ ಕಾಂಗ್ರೆಸ್‌ ಟಿಕೆಟ್‌ ಮೇಲೆ ಸ್ಪರ್ಧಿಸುವರು. ಇದಲ್ಲದೇ ಕೆ.ಆರ್‌. ನಗರದಿಂದ ಡಿ. ರವಿಶಂಕರ್‌, ನಂಜನಗೂಡಿನಿಂದ ದರ್ಶನ್‌ ಧ್ರುವನಾರಾಯಣ ಸ್ಪರ್ಧಿಸುವರು.

ನಗರದ ಚಾಮರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ವಾಸು ಹಾಗೂ ಮುಖಂಡ ಕೆ. ಹರೀಶ್‌ಗೌಡರ ನಡುವೆ ಟಿಕೆಟ್‌ಗೆ ಪೈಪೋಟಿ ಇದೆ. ಇಬ್ಬರ ಪೈಕಿ ಒಬ್ಬರಿಗೆ ಟಿಕೆಟ್‌ ನೀಡಲಾಗುವುದು. ಇಲ್ಲಿ ಸಿದ್ದರಾಮಯ್ಯ ಅವರು ಹರೀಶ್‌ಗೌಡ ಪರ ಇದ್ದರೆ ಉಳಿದೆಲ್ಲಾ ಮುಖಂಡರು ವಾಸು ಪರ ಇದ್ದಾರೆ.

ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ಜೊತೆಗೆ ಪಾಲಿಕೆ ಮಾಜಿ ಸದಸ್ಯ ಎಂ. ಪ್ರದೀಪ್‌ಕುಮಾರ್‌, ಎಂಡಿಎ ಮಾಜಿ ಅಧ್ಯಕ್ಷ ಕೆ.ಆರ್‌. ಮೋಹನಕುಮಾರ್‌ ಪುತ್ರ ಎನ್‌.ಎಂ. ನವೀನ್‌ಕುಮಾರ್‌, ಮುಖಂಡ ಗುರುಪಾದಸ್ವಾಮಿ ಮತ್ತಿತರರು ಟಿಕೆಟ್‌ ಕೇಳಿದ್ದಾರೆ. ಬಿಜೆಪಿ ಟಿಕೆಟ್‌ ಯಾರಿಗೆ ಎಂಬುದರ ಮೇಲೆ ಕಾಂಗ್ರೆಸ್‌ ತನ್ನ ಉಮೇದುವಾರರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಬಂದಿರುವ ಮೈಮುಲ್‌ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

--ಜೆಡಿಎಸ್‌ --

ಜೆಡಿಎಸ್‌ ಈಗಾಗಲೇ ತನ್ನ ಮೊದಲ ಪಟ್ಟಿಪ್ರಕಟಿಸಿದೆ. ಅದರಂತೆ ಹಾಲಿ ಶಾಸಕರಾದ ಚಾಮುಂಡೇಶ್ವರಿಯಿಂದ ಜಿ.ಟಿ. ದೇವೇಗೌಡ, ಕೆ.ಆರ್‌. ನಗರದಿಂದ ಸಾ.ರಾ. ಮಹೇಶ್‌, ಪಿರಿಯಾಪಟ್ಟಣದಿಂದ ಕೆ. ಮಹದೇವ್‌, ಟಿ. ನರಸೀಪುರದಿಂದ ಎಂ. ಅಶ್ವಿನ್‌ಕುಮಾರ್‌ ಸ್ಪರ್ಧಿಸುವರು. ಹುಣಸೂರಿನಿಂದ ಜಿ.ಟಿ. ದೇವೇಗೌಡರ ಪುತ್ರ, ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷ, ಎಂಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ಕಣಕ್ಕಿಳಿಯುವರು. ಕಳೆದ ಬಾರಿಯಂತೆ ಈ ಬಾರಿಯೂ ವರುಣದಿಂದ ಎಂ.ಎಸ್‌. ಅಭಿಷೇಕ್‌, ಕೃಷ್ಣರಾಜದಿಂದ ಕೆ.ವಿ. ಮಲ್ಲೇಶ್‌ ಸ್ಪರ್ಧಿಸುವರು.

ಚಾಮರಾಜ, ನರಸಿಂಹರಾಜ, ಎಚ್‌.ಡಿ. ಕೋಟೆ, ನಂಜನಗೂಡು ಕ್ಷೇತ್ರಗಳ ಪಟ್ಟಿಅಂತಿಮವಾಗಿಲ್ಲ. ಈ ಪೈಕಿ ಎಚ್‌.ಡಿ. ಕೋಟೆಯಿಂದ ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್‌ ಅವರಿಗೆ ಟಿಕೆಟ್‌ ಅಂತಿಮವಾಗಿದೆ ಎಂದು ಹೇಳಲಾಗಿದೆ. ನಂಜನಗೂಡಿನಿಂದ ಆರ್‌. ಮಾದೇಶ್‌ ಹಾಗೂ ಬೆಳವಾಡಿ ಶಿವಕುಮಾರ್‌, ನರಸಿಂಹರಾಜದಲ್ಲಿ ಅಬ್ದುಲ್ಲಾ, ಚಾಮರಾಜದಲ್ಲಿ ಕೆ.ವಿ. ಶ್ರೀಧರ್‌, ಎಸ್‌ಬಿಎಂ ಮಂಜು, ಎಚ್‌.ಕೆ. ರಮೇಶ್‌, ಎಂ,ಜಿ. ರವಿಕುಮಾರ್‌ ಮೊದಲಾದರ ಹೆಸರುಗಳಿವೆ.

-- ಬಿಜೆಪಿ--

ಬಿಜೆಪಿಯಲ್ಲಿ ಮೂವರು ಹಾಲಿ ಶಾಸಕರಿದ್ದಾರೆ. ಅವರೆಂದರೆ ಕೃಷ್ಣರಾಜ- ಎಸ್‌.ಎ. ರಾಮದಾಸ್‌, ಚಾಮರಾಜ- ಎಲ್‌. ನಾಗೇಂದ್ರ. ನಂಜನಗೂಡು- ಬಿ. ಹರ್ಷವರ್ಧನ್‌. ಉಳಿದ ಎಂಟು ಕ್ಷೇತ್ರಗಳಿಗೆ ಹಲವರು ಆಕಾಂಕ್ಷಿಗಳಾಗಿದ್ದಾರೆ. ಯಾರಿಗೂ ಟಿಕೆಟ್‌ ಅಂತಿಮವಾಗಿಲ್ಲ.

ಇತರರು

ನರಸಿಂಹರಾಜ ಕ್ಷೇತ್ರದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಕಣಕ್ಕಿಳಿಯುವರು. ಬಿಎಸ್ಪಿಯ ಬಿ.ಆರ್‌. ಪುಟ್ಟಸ್ವಾಮಿ ಟಿ. ನರಸೀಪುರದಿಂದ, ಆಮ್‌ ಆದ್ಮಿ ಪಾರ್ಟಿಯ ಸಿದ್ದರಾಜು- ಟಿ. ನರಸೀಪುರ ಹಾಗೂ ಮಾದಯ್ಯ- ನಂಜನಗೂಡಿನಿಂದ ಕಣಕ್ಕಳಿಯುವರು. ಇದಲ್ಲದೇ ಇತರರು ಕೂಡ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ.