ಮೈಸೂರು, [ಮೇ.20]: ಮಕ್ಕಳಾಗದ ಕಾರಣ ಶನಿ ದೇವರ ಪೂಜೆ ಮಾಡಿಸಲು ಹೋದ ಗೃಹಿಣಿಗೆ ಪೂಜೆಯ ನೆಪದಲ್ಲಿ ಮಂಚಕ್ಕೆ ಕರೆದ ದೇವಸ್ಥಾನದ ಗುಡ್ಡಪ್ಪನಿಗೆ ಗ್ರಾಮಸ್ಥರೆಲ್ಲ ಸೇರಿ ಥಳಿಸಿರುವ ಘಟನೆ ಮೈಸೂರು ತಾಲೂಕು ಮಂಡನಹಳ್ಳಿಯಲ್ಲಿ ನಡೆದಿದೆ.

ಬಸವರಾಜ್ ನಾಯಕ(26) ಗೃಹಿಣಿಯನ್ನು ಮಂಚಕ್ಕೆ ಕರೆದ ಗುಡ್ಡಪ್ಪ. ಈತ ನಂಜನಗೂಡಿನ ಲಲಿತಾದ್ರಿಪುರ ಗ್ರಾಮದ ಶನಿಮಹಾತ್ಮ ದೇವಸ್ಥಾನದಲ್ಲಿ ಗುಡ್ಡಪ್ಪನಾಗಿದ್ದಾನೆ.

5 ವರ್ಷಗಳ ಹಿಂದೆ ಮದುವೆಯಾಗಿದ್ದ ಮಂಡನಹಳ್ಳಿ ಗ್ರಾಮದ ಗೃಹಿಣಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಶನಿ ಮಹಾತ್ಮನ ಪೂಜೆಗೆಂದು ಲಲಿತಾದ್ರಿಪುರ ಗ್ರಾಮದ ಶನಿಮಹಾತ್ಮ ದೇವಸ್ಥಾನಕ್ಕೆ ಹೋಗುತ್ತಿದ್ದರು. ಇದನ್ನೇ ನೆಪ ಮಾಡಿಕೊಂಡ ಗುಡ್ಡಪ್ಪ ಗೃಹಿಣಿ ಜೊತೆ ಅಸಭ್ಯವಾಗಿ ನಡೆದುಕೊಳ್ಳುವುದಕ್ಕೆ ಶುರು ಮಾಡಿದ್ದಾನೆ.

ಅಷ್ಟೇ ಅಲ್ಲದೇ ನನ್ನ ಜತೆ ಧರ್ಮಸ್ಥಳಕ್ಕೆ ಬಂದು ಉಳಿದುಕೊಂಡರೆ ಮಕ್ಕಳಾಗುತ್ತವೆ ಎಂದು ಹೇಳಿದ್ದಾನೆ. ಗುಡ್ಡಪ್ಪನ ವರ್ತನೆ ಬಗ್ಗೆ ಗೃಹಿಣಿ ತನ್ನ ಪತಿಗೆ ತಿಳಿಸಿದ್ದಾರೆ. ನಂತರ ಪೂಜೆ ಮಾಡಿಸುವ ನೆಪದಲ್ಲಿ ಗುಡ್ಡಪ್ಪನನ್ನು ಗ್ರಾಮಕ್ಕೆ ಕರೆಸಿ ಗ್ರಾಮಸ್ಥರು ಕೂಡಿಹಾಕಿ ಥಳಿಸಿದ್ದಾರೆ. ಬಳಿಕ ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಜಯಪುರ ಪೊಲೀಸರು ಬಂದು ಗುಡ್ಡಪ್ಪನನ್ನು ವಶಕ್ಕೆ ಪಡೆದಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.