ಕಾಂಗ್ರೆಸ್ ಮುಖಂಡ ಮದನ್ ರಾಜ್ ಮದುವೆ ಆಮಿಷವೊಡ್ಡಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ನಂತರ ಬೇರೊಬ್ಬರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸಿದ್ದಾರೆ. ಯುವತಿ ಪ್ರಶ್ನಿಸಿದಾಗ ವಿಷ ಕುಡಿಸಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಟಿ. ನರಸೀಪುರ (ಮೇ.1): ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿ ರಾಜಕೀಯ ಪ್ರಭಾವಿ ವ್ಯಕ್ತಿಯೊಬ್ಬರು ಯುವತಿಗೆ ಮದುವೆಯ ಆಮಿಷವೊಡ್ಡಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ವಂಚಿಸಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಮದನ್ ರಾಜ್ ವಿರುದ್ಧ ಯುವತಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Add Asianetnews Kannada as a Preferred SourcegooglePreferred

ದೂರಿನ ಅನ್ವಯ, ಆರೋಪಿ ಮದನ್ ರಾಜ್ ಸಂತ್ರಸ್ತ ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿದ್ದರು. ಮದುವೆಯಾಗುವುದಾಗಿ ಭರವಸೆ ನೀಡಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ, ಈಗ ಆ ಯುವತಿಯನ್ನು ಕೈಬಿಟ್ಟು ಮತ್ತೊಬ್ಬ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರಿಂದ ಮನನೊಂದ ಯುವತಿ ಮದನ್ ರಾಜ್ ಅವರನ್ನು ಪ್ರಶ್ನಿಸಿದಾಗ, ಇಬ್ಬರೂ ಜೊತೆಯಾಗಿ ವಿಷ ಕುಡಿದು ಪ್ರಾಣ ಬಿಡೋಣ ಎಂದು ನಂಬಿಸಿ ಯುವತಿಗೆ ಮಾತ್ರ ವಿಷ ಕುಡಿಸಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ತಾನು ನಂಬಿದ ವ್ಯಕ್ತಿಯಿಂದಲೇ ಪ್ರಾಣಾಪಾಯ ಮತ್ತು ದ್ರೋಹಕ್ಕೊಳಗಾದ ಯುವತಿ ಚಿಕಿತ್ಸೆಯ ಬಳಿಕ ಟಿ. ನರಸೀಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಮದನ್ ರಾಜ್ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.