Asianet Suvarna News Asianet Suvarna News

ಮಂಡ್ಯ: ಸೆ.30ರಿಂದ ಮೈಷುಗರ್‌ ಸಂಪೂರ್ಣ ಕಾರ್ಯಾಚರಣೆ: ಸಚಿವ ಗೋಪಾಲಯ್ಯ

ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೇರೆ ಕಡೆಗೆ ಸಾಗಾಣಿಕೆಯಾಗುತ್ತಿದ್ದಲ್ಲಿ ವಶ ಪಡಿಸಿಕೊಳ್ಳಲು ಕ್ರಮವಹಿಸಿ ಎಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ 

Mysuru Sugar Factory Fully Operational from September 30th Says Minister K Gopalaiah grg
Author
First Published Sep 18, 2022, 2:32 PM IST

ಮಂಡ್ಯ(ಸೆ.18):  ಜಿಲ್ಲೆಯ ರೈತರ ಜೀವನಾಡಿ ಮೈಷುಗರ್‌ ಕಾರ್ಖಾನೆ ಸೆಪ್ಟೆಂಬರ್‌ 30ರಿಂದ ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು. ನಗರದ ಮೈಷುಗರ್‌ ಸಕ್ಕರೆ ಕಾರ್ಖಾನೆ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಕಾರ್ಖಾನೆಯ ಕೆಲಸ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಕಾರ್ಖಾನೆ 2ನೇ ಬಾಯ್ಲರ್‌ನ ಕಾರ್ಯ ಸೆಪ್ಟೆಂಬರ್‌ 19ರಿಂದ ಪ್ರಾರಂಭವಾಗಬೇಕು ಎಂದು ಸೂಚಿಸಿದರು. ಮೈಷುಗರ್‌ ಕಾರ್ಯ ವ್ಯಾಪ್ತಿಗೆ ಬರುವ ಕಬ್ಬನ್ನು ಬೇರೆ ಕಾರ್ಖಾನೆಯವರು ಕಟಾವು ಮಾಡದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೇರೆ ಕಡೆಗೆ ಸಾಗಾಣಿಕೆಯಾಗುತ್ತಿದ್ದಲ್ಲಿ ವಶ ಪಡಿಸಿಕೊಳ್ಳಲು ಕ್ರಮವಹಿಸಿ ಎಂದರು.

ಹಣ ಪಾವತಿಸಿ ರೈತರಲ್ಲಿ ವಿಶ್ವಾಸ ಮೂಡಿಸಿ:

ರೈತರಿಂದ ಕಬ್ಬು ಖರೀದಿಸಿ ನಿಗದಿತ ಅವಧಿಯೊಳಗೆ ಹಣ ಪಾವತಿ ಮಾಡುವುದರಿಂದ ರೈತರಲ್ಲಿ ಕಾರ್ಖಾನೆ ಬಗ್ಗೆ ವಿಶ್ವಾಸ ಹೆಚ್ಚಳವಾಗಿ ಮೈಷುಗರ್‌ ವ್ಯಾಪ್ತಿಯ ಕಬ್ಬನ್ನು ಮೈಷುಗರ್‌ ಸಕ್ಕರೆ ಕಾರ್ಖಾನೆಗೆ ನೀಡುತ್ತಾರೆ ಎಂದ ಅವರು, ಸೆ.30ರ ನಂತರ ಮುಖ್ಯಮಂತ್ರಿಗಳನ್ನು ಮೈಷುಗರ್‌ ಕಾರ್ಖಾನೆಗೆ ಆಹ್ವಾನಿಸಿ ಎಲ್ಲ ಘಟಕಗಳ ಕಾರ್ಯನಿರ್ವಾಹಣೆ ಪರಿಚಯಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಖುದ್ದು ಸೆ.30ರೊಳಗಾಗಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.

Mandya: ಲಕ್ಷ್ಮಿನಾರಾಯಣಸ್ವಾಮಿ ದೇಗುಲಕ್ಕೆ ಇನ್ಫೋಸಿಸ್‌ ಅಧ್ಯಕ್ಷೆ ಸುಧಾಮೂರ್ತಿ ಭೇಟಿ

ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಸಕ್ಕರೆ ಕಾರ್ಖಾನೆ ಪುನರರಾಂಭಗೊಂಡಿದೆ. ಈ ವೇಳೆ ಸಣ್ಣ ಪುಟ್ಟತೊಂದರೆಗಳು ಉಂಟಾಗಬಹುದು. ಅವುಗಳನ್ನು ಸರಿಪಡಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳಬೇಕು ಎಂದರು.

ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಣೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ಸಚಿವರಿಗೆ ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ ರಾಯಪುರ, ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಶಾಂತಾ ಎಲ್‌.ಹುಲ್ಮನಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಉಪವಿಭಾಗಾಧಿಕಾರಿ ಆರ್‌.ಐಶ್ವರ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
 

Follow Us:
Download App:
  • android
  • ios