Asianet Suvarna News Asianet Suvarna News

Mandya: ಲಕ್ಷ್ಮಿನಾರಾಯಣಸ್ವಾಮಿ ದೇಗುಲಕ್ಕೆ ಇನ್ಫೋಸಿಸ್‌ ಅಧ್ಯಕ್ಷೆ ಸುಧಾಮೂರ್ತಿ ಭೇಟಿ

ಪಟ್ಟಣದ ಹೊಸಹೊಳಲು ಗ್ರಾಮದ ಇತಿಹಾಸ ಪ್ರಸಿದ್ಧ ಹೊಯ್ಸಳ ನಿರ್ಮಿತ ಶ್ರೀಲಕ್ಷ್ಮಿನಾರಾಯಣಸ್ವಾಮಿ ದೇವಾಲಯಕ್ಕೆ ಯುನೆಸ್ಕೋ ತಂಡದ ಸದಸ್ಯರ ಜೊತೆಯಲ್ಲಿ ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಭೇಟಿ ವೀಕ್ಷಿಸಿದರು.

infosys sudha murthy visit to lakshmi narayanaswamy temple at kr pete gvd
Author
First Published Sep 17, 2022, 11:10 PM IST

ಕೆ.ಆರ್‌.ಪೇಟೆ (ಸೆ.17): ಪಟ್ಟಣದ ಹೊಸಹೊಳಲು ಗ್ರಾಮದ ಇತಿಹಾಸ ಪ್ರಸಿದ್ಧ ಹೊಯ್ಸಳ ನಿರ್ಮಿತ ಶ್ರೀಲಕ್ಷ್ಮಿನಾರಾಯಣಸ್ವಾಮಿ ದೇವಾಲಯಕ್ಕೆ ಯುನೆಸ್ಕೋ ತಂಡದ ಸದಸ್ಯರ ಜೊತೆಯಲ್ಲಿ ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಭೇಟಿ ವೀಕ್ಷಿಸಿದರು. ಮಲೇಷಿಯಾ ದೇಶದಿಂದ ಆಗಮಿಸಿದ್ದ ಯುನೆಸ್ಕೊ ತಂಡದ 15 ಸದಸ್ಯರ ತಂಡವನ್ನು ತಹಸೀಲ್ದಾರ್‌ ಎಂ.ವಿ.ರೂಪ ತಾಲೂಕಿನ ಪರವಾಗಿ ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ದೇವಾಲಯದಲ್ಲಿನ ಹೊಯ್ಸಳ ಶಿಲ್ಪಕಲಾ ಸೌಂದರ್ಯವನ್ನು ಯುನೆಸ್ಕೋ ತಂಡದ ಸದಸ್ಯರು ಕಣ್ತುಂಬಿಕೊಂಡರು. 

ಯುನೆಸ್ಕೋ ಪಟ್ಟಿಗೆ ಸೇರಲು ಎಲ್ಲಾ ರೀತಿಯಲ್ಲಿಯೂ ದೇಗುಲವು ಅರ್ಹತೆಯನ್ನು ಹೊಂದಿದೆ. ಪ್ರವಾಸೋದ್ಯಮ ಇಲಾಖೆಯ ಜೊತೆಗೆ ಒಡಂಬಡಿಕೆಯನ್ನು ಸಾಧಿಸಿ ಈ ಶಿಲ್ಪ ವೈಭವವನ್ನು ಹೊರಜಗತ್ತಿಗೆ ತೋರಿಸುವ ಕೆಲಸವನ್ನು ಮಾಡಿಸಬೇಕು. ಜೊತೆಗೆ ದೇಗುಲದ ಸಂರಕ್ಷಣೆಗೆ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯು ಹೆಚ್ಚು ಒತ್ತನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು. ಇನ್ಫೋಸಿಸ್‌ ಅಧ್ಯಕ್ಷೆ ಸುಧಾಮೂರ್ತಿ, ದೇವಾಲಯದ ವಿಶೇಷವಾದ ಹೆಬ್ಬೆರಳು ಗಾತ್ರದ ಆಂಜನೇಯ ಎಳನೀರು ಕುಡಿಯುತ್ತಿರುವ ಭಂಗಿಯನ್ನು ಕಣ್ತುಂಬಿಕೊಂಡರು. ಬೇಲೂರು ದೇವಾಲಯವನ್ನು ಹೊರಗೆ ನೋಡಬೇಕು. 

Mandya: ಚುನಾವಣಾ ಯಾತ್ರೆಯಾದ ಧರ್ಮಸ್ಥಳ ಯಾತ್ರೆ: ಜೆಡಿಎಸ್‌ನಲ್ಲೇ ಧಾರ್ಮಿಕ ಯಾತ್ರೆಗೆ ಪೈಪೋಟಿ

ಹಳೆಬೀಡು ದೇವಾಲಯವನ್ನು ಒಳಗೆ ನೋಡಬೇಕು. ಆದರೆ ಹೊಸಹೊಳಲು ಗ್ರಾಮದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದ ಶಿಲ್ಪಕಲೆಯ ವೈಭವವು ಒಳಗೆ ಮತ್ತು ಹೊರಗೆ ಅದ್ಬುತವಾಗಿದೆ ಎಂದರು. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ದೇವಾಲಯಗಳನ್ನು ಜೋಪಾನ ಮಾಡಿ ಸಂರಕ್ಷಿಸಿ ಮುಂದಿನ ತಲೆಮಾರಿಗೆ ಜೋಪಾನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಗ್ರಾಮದ ಜನರು ಜೀವಂತ ಸ್ಮಾರಕವಾದ ದೇವಾಲಯವನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಹಬ್ಬ ಹರಿದಿನಗಳು ಹಾಗೂ ವಿಶೇಷ ಸಮಾರಂಭಗಳಲ್ಲಿ ದೇವಾಲಯದಲ್ಲಿ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ತಪ್ಪದೆ ಭಾಗವಹಿಸಬೇಕು ಎಂದು ತಿಳಿಸಿದರು.

ಹೊಸಹೊಳಲು ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯದ ಸುತ್ತಲೂ ಒಂದು ಸುತ್ತು ಸಂಚರಿಸಿ ಅಪರೂಪದ ಶಿಲ್ಪಗಳು ಹಾಗೂ ರಾಮಾಯಣ, ಮಹಾಭಾರತ ಕುರಿತು ಶಿಲೆಯಲ್ಲಿ ಕೆತ್ತಿರುವ ದೃಶ್ಯಗಳನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದುಕೊಂಡರು. ದೇವಾಲಯದ ಒಳಭಾಗದ ತ್ರಿಕೂಟಾಚಲದಲ್ಲಿ ಪ್ರಧಾನ ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ನಂಬಿ ನಾರಾಯಣಸ್ವಾಮಿ, ಎಡಭಾಗದ ಗುಡಿಯಲ್ಲಿರುವ ಶ್ರೀ ಕೊಳಲುಗೋಪಾಲಸ್ವಾಮಿ ಹಾಗೂ ಬಲಭಾಗದ ಗರ್ಭಗುಡಿಯಲ್ಲಿ ಪ್ರಹ್ಲಾದನ ಸಮೇತವಾಗಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ದರ್ಶನ ಪಡೆದರು.

ತಹಸೀಲ್ದಾರ್‌ ಎಂ.ವಿ.ರೂಪಾ ತಂಡದೊಂದಿಗೆ ಮಾತನಾಡಿ, ದೇವಾಲಯದ ಆವರಣದಲ್ಲಿ ವಿಶ್ವ ಯೋಗದಿನವನ್ನು ಆಚರಿಸಿದೆ. ದೇವಲಾಯದ ಅಗತ್ಯತೆಗಳನ್ನು ಪೂರೈಸಲು ಕ್ರಮವಹಿಸಲಾಗುವುದು. ಪ್ರವಾಸೋದ್ಯಮ ಇಲಾಖೆಗೆ ತಕ್ಷಣವೆ ಪತ್ರವನ್ನು ಬರೆದು ಪ್ರವಾಸಿಗರನ್ನು ಕರೆತರುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

Mandya: ಕೇಂದ್ರೀಯ ಶಾಲೆಗೆ ಕಾಯಂ ಶಿಕ್ಷಕರ ನೇಮಕ: ಸಂಸದೆ ಸುಮಲತಾ

ಈ ವೇಳೆ ರಾಜ್ಯ ಪುರಾತತ್ವ ಪ್ರಾಚ್ಯ ವಸ್ತು ಇಲಾಖೆ ನಿರ್ದೇಶಕ ಡಾ.ದೇವರಾಜು, ಮುಜರಾಯಿ ಇಲಾಖೆಯ ಕಾರ್ಯದರ್ಶಿ ಸತ್ಯವತಿ, ತಹಸೀಲ್ದಾರ್‌ ಎಂ.ವಿ.ರೂಪ, ಉಪತಹಸೀಲ್ದಾರ್‌ ಲಕ್ಷ್ಮೀಕಾಂತ್‌, ರಾಜಸ್ವ ನಿರೀಕ್ಷಕಿ ಚಂದ್ರಕಲಾ, ಮಂಡ್ಯ ಜಿಲ್ಲೆ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್‌, ಪುರಸಭಾ ಮುಖ್ಯಾಧಿಕಾರಿ ಕುಮಾರ್‌, ಇನ್ಸ್‌ಪೆಕ್ಟರ್‌ ಎಂ.ಕೆ.ದೀಪಕ್‌, ಹೊಸಹೊಳಲು ಗ್ರಾಮದ ಮುಖಂಡರಾದ ಡಾ.ಶ್ರೀನಿವಾಸಶೆಟ್ಡಿ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios