Mysuru : ದಸರಾ ಉದ್ಘಾಟನೆಯ ಕಾಲದ ಕೆಲ ಸ್ವಾರಸ್ಯಗಳು
ಇದು ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನೆ ಕಾಲಕ್ಕೆ ಕಂಡು ಬಂದ ಕೆಲ ಸ್ವಾರಸ್ಯದ ದೃಶ್ಯ.
ಮೈಸೂರು : ಮೊದಲು ನಾಡಗೀತೆಯೋ ಜ್ಯೋತಿ ಬೆಳಗುವುದೋ ಎಂಬ ಗೊಂದಲ...
- ಇದು ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನೆ ಕಾಲಕ್ಕೆ ಕಂಡ ಬಂದ ದೃಶ್ಯ. ಸಾಮಾನ್ಯವಾಗಿ ಮೊದಲು ಬೆಳ್ಳಿರಥದಲ್ಲಿ ವಿರಾಜರಾಗಿರುವ ಶ್ರೀ ಚಾಮುಂಡೇಶ್ವರಿ ದೇವಿ ಮೂರ್ತಿಯ ಎದುರು ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ನಂತರ ವೇದಿಕೆ ಕಾರ್ಯಕ್ರಮ ಆರಂಭವಾಗುತ್ತದೆ. ಗಣ್ಯರೆಲ್ಲಾ ವೇದಿಕೆಗೆ ಬರುತ್ತಿದ್ದಂತೆಯೇ ಕಾರ್ಯಕ್ರಮ ನಿರೂಪಕರು ಈಗ ನಾಡಗೀತೆ ಎಂದು ಅನೌನ್ಸ್ ಮಾಡಿದರು. ಆ ವೇಳೆಗೆ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಅವರು ಮೊದಲು ದೀಪ ಬೆಳಗಿಸಬೇಕು ಎಂದು ಹೇಳಿದರು. ಇದಲ್ಲದೇ ದಸರಾ ಮಹೋತ್ಸವದ ಉದ್ಘಾಟಕರಾದ ಹಂಸಲೇಖ ಅವರ ಪತ್ನಿ ಲತಾ ಅವರು ಗಣ್ಯರಿಗೆ ಮೀಸಲಾಗಿದ್ದ ಸಭಿಕರ ಮುಂಬಾಗದ ಸಾಲಿನಲ್ಲಿ ಕುಳಿತ್ತಿದ್ದರು. ದೀಪ ಬೆಳಗಿಸುವ ಕಾಲಕ್ಕೆ ಅವರು ಕೂಡ ವೇದಿಕೆಗೆ ಬರಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯ. ಹೀಗಾಗಿ ಅವರು ಬಂದ ನಂತರ ಜ್ಯೋತಿ ಬೆಳಗಿಸಲಾಯಿತು. ಜ್ಯೋತಿ ಬೆಳಗಿಸಿ, ಪುಷ್ಪಾರ್ಚನೆ ಮಾಡಿ, ಗಣ್ಯರು ಮತ್ತೆ ವೇದಿಕೆಗೆ ಬಂದು ನಾಡಗೀತೆ ಮುಗಿಯುವವರೆಗೆ ಎಲ್ಲಾ ಸಭಿಕರು ನಿಂತೇ ಇದ್ದರು.
ಎಲ್ಲರ ಹೆಸ್ರು ಹೇಳಿದ್ನ...ವೆಂಕಟೇಶ್ ಹೋದ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತಿಗೆ ನಿಂತರೇ ಸುತ್ತಮುತ್ತ ನೋಡಿಕೊಂಡು, ವೇದಿಕೆಯತ್ತ ತಿರುಗಿ ಮಾತನಾಡುತ್ತಾರೆ,. ಕೊನೆಯಲ್ಲಿ ಮಾತಿಗೆ ನಿಂತ ಅವರು ವೇದಿಕೆಯಲ್ಲಿದ್ದ ಎಲ್ಲರ ಹೆಸರನ್ನು ಹೇಳಿದ ನಂತರವೂ ಎಲ್ಲಿ ವೆಂಕಟೇಶ್ ಹೋದ್ರ (ಸಚಿವರು), ಎಲ್ಲರ ಹೆಸ್ರು ಹೇಳಿದ್ನ ಎಂದು ಕೇಳಿದಾಗ ಸಭೆಯಲ್ಲಿ ನಗುವಿನ ಅಲೆ.
ಮೊದ್ಲೆ ಹೇಳ್ದೆ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಮಾತನಾಡುವಾಗ ಮೊದಲಿಗೆ ಅಧ್ಯಕ್ಷತೆ ವಹಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರ ಹೆಸರನ್ನು ಪ್ರಸ್ತಾಪಿಸಿದ್ದರು. ಆದರೆ ಯಾರೋ ಅಧಿಕಾರಿ ಬಂದು, ಸಾರ್, ಜಿಟಿಯವರ ಹೆಸರು ಹೇಳಿಲ್ಲ ಎಂದು ಉಸುರಿದಾಗ, ಏಯ್ ಸುಮ್ನಿರಿ, ಪ್ರೊಟೋಕಾಲ್ ಪ್ರಕಾರ ಅಧ್ಯಕ್ಷತೆ ವಹಿಸಿರುವ ಅವರ ಹೆಸರನ್ನೇ ಮೊದ್ಲು ಹೇಳಿದ್ದೀನಿ ಅಂದ್ರು.
ಅವಾಜ್ ಹಾಕಿದ್ರು ವೇದಿಕೆಗೆ ಬಿಡಲಿಲ್ಲ
ಸಿದ್ದರಾಮಯ್ಯ ಅವರು ಬಂದಾಗ ಯಾವುದೇ ಚುನಾಯಿತ ಪ್ರತಿನಿಧಿಯಲ್ಲದ ಕೆಲವರು ಅಕ್ಕಪಕ್ಕ ನಿಂತು ಕಾಣಿಸಿಕೊಳ್ಳಲು ಪೈಪೋಟಿ ನಡೆಸುತ್ತಾರೆ. ಇವತ್ತು ಅದೇ ರೀತಿಯಾಯಿತು. ಒಬ್ಬಾತ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರೂ ವೇದಿಕೆ ಹತ್ತಲು ಬಿಡಲೇ ಇಲ್ಲ.
ಚಪ್ಪಾಳೆ ತಟ್ಟಿ...
ದಸರಾ ಉದ್ಘಾಟಿಸಿದ ಹಂಸಲೇಖ ಅವರು ಪೂಜ್ಯ ಕನ್ನಡಿಗರಿಗೆ, ಪೂಜನೀಯ ಕನ್ನಡಕ್ಕೆ, ದೈವಸಮಾನವಾದ ನುಡಿಯ ಗುಡಿಗೆ, ಕನ್ನಡನಾಡಿಗೆ, ಈ ದೇವಾಲಯಕ್ಕೆ ಈ ಪ್ರೇಮಾಲಯಕ್ಕೆ ಸಾವಿರ ಶರಣು ಎಂದು ಮಾತು ಆರಂಭಿಸಿದರೂ ಸಭಿಕರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಚಪ್ಪಾಳೆ ತಟ್ಟಿ, ಸಭೆಗೆ ಕಳೆ ಎಂದು ಹೇಳಿ ಕರತಾಡನ ಮಾಡಿಸಿದರು. ಅದೇ ನಮ್ಗೆ ಟಾನಿಕ್ ಎಂದರು.
ಗಮನ ಸೆಳೆದ ಕಲಾ ತಂಡಗಳು
ದಸರಾ ಉದ್ಘಾಟನೆ ಆಂಗವಾಗಿ ಮಹಿಷಾಸುರ ಪ್ರತಿಮೆಯಿಂದ ದೇವಸ್ಥಾನದವರೆಗೆ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು.