Asianet Suvarna News Asianet Suvarna News

Mysuru: ಐತಿಹಾಸಿಕ ಮೆರಗು ನೀಡುವಂತೆ ಕುಸ್ತಿ ಪಂದ್ಯಾವಳಿ ಆಯೋಜನೆ

ಪ್ರತಿ ವರ್ಷದಂತೆ ಈ ವರ್ಷವೂ ಮೈಸೂರು ದಸರಾಕ್ಕೆ ಮೆರಗು ನೀಡುವ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ದಸರಾ ಕುಸ್ತಿ ಉಪ ಸಮಿತಿಯ ಉಪ ವಿಶೇಷಾಧಿಕಾರಿಯಾದ ಹೆಚ್ಚುವರಿ ಎಸ್ಪಿ ಡಾ.ಬಿ.ಎನ್. ನಂದಿನಿ ತಿಳಿಸಿದರು.

Mysuru  Organized wrestling tournament to give historic cheer snr
Author
First Published Oct 15, 2023, 8:55 AM IST

 ಮೈಸೂರು :  ಪ್ರತಿ ವರ್ಷದಂತೆ ಈ ವರ್ಷವೂ ಮೈಸೂರು ದಸರಾಕ್ಕೆ ಮೆರಗು ನೀಡುವ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ದಸರಾ ಕುಸ್ತಿ ಉಪ ಸಮಿತಿಯ ಉಪ ವಿಶೇಷಾಧಿಕಾರಿಯಾದ ಹೆಚ್ಚುವರಿ ಎಸ್ಪಿ ಡಾ.ಬಿ.ಎನ್. ನಂದಿನಿ ತಿಳಿಸಿದರು.

ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮೈಸೂರು ದಸರಾದಲ್ಲಿ ವಿವಿಧ ರಾಜ್ಯಗಳ ಕುಸ್ತಿಪಟುಗಳು ಭಾಗವಹಿಸುತ್ತಿದ್ದು, ಮೈಸೂರು ದಸರಾದ ಮೆರಗು ಸಾರುವ ಕುಸ್ತಿ ಪಂದ್ಯವನ್ನು ನಡೆಸಲಾಗುವುದು ಎಂದರು.

ಅ.15ರ ಸಂಜೆ 4ಕ್ಕೆ ವಸ್ತುಪ್ರದರ್ಶನ ಪ್ರಾಧಿಕಾರದ ದೇವರಾಜ್ ಅರಸು ವಿವಿಧೋದ್ದೇಶ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸೇರಿದಂತೆ ವಿವಿಧ ಇಲಾಖೆ ಸಚಿವರು, ಶಾಸಕರು ಭಾಗವಹಿಸುವರು ಎಂದು ಅವರು ಹೇಳಿದರು.

ಆರಂಭಿಕ ಕುಸ್ತಿ ಪಂದ್ಯಾವಳಿಯು ದಾವಣಗೆರೆಯ ಕಾರ್ತಿಕ್ ಕಾಟೆ- ದೆಹಲಿಯ ವಿಕಿ, ಬೆಳಗಾಂನ ಸುನಿಲ್ ಪಡುತಾರೆ- ರಾಹುಲ್ ರಾಟಿ ನಡುವೆ ನಡೆಯಲಿದೆ. ಬಾಲಕಿಯರ ವಿಭಾಗದಲ್ಲಿ ಬನ್ನೂರಿನ ಜಾಹ್ನವಿ- ಮಂಡ್ಯದ ಸ್ಫೂರ್ತಿ ಹಾಗೂ ರಮ್ಮನಹಳ್ಳಿಯ ಸಿಂಚನ- ಮಂಡ್ಯದ ಅಮೂಲ್ಯ ನಡುವೆ ಕುಸ್ತಿ ನಡೆಯಲಿವೆ. ಒಟ್ಟು 30 ಕುಸ್ತಿ ಪಂದ್ಯಾವಳಿಗಳು ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುಸ್ತಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸುವಂತೆ ಅವರು ಕೋರಿದರು.

ದಸರಾ ಕುಸ್ತಿ ಉಪ ಸಮಿತಿ ಅಧ್ಯಕ್ಷ ಶಂಕರ ಮೆಲ್ಲಹಳ್ಳಿ, ಉಪಾಧ್ಯಕ್ಷರಾದ ಕೃಷ್ಣ, ರಮೇಶ, ಪ್ರಸನ್ನ ಮೊದಲಾದವರು ಇದ್ದರು.

ಪ್ರಾಯೋಜಕತ್ವದಲ್ಲಿ ಆಚರಿಸಲು ಸಿದ್ಧತೆ

  ಮೈಸೂರು :  ರಾಜ್ಯದಲ್ಲಿ ಈ ಬಾರಿ ಬರ ಇರುವುದರಿಂದ ಅದ್ಧೂರಿ ದಸರಾ ಆಚರಣೆ ಬದಲಿಗೆ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದ್ದು, ಮೈಸೂರಿನ ಪ್ರವಾಸೋದ್ಯಮ, ಆರ್ಥಿಕತೆಗೆ ತೊಂದರೆ, ಹಿನ್ನಡೆಯಾಗದಂತೆ ಪ್ರಾಯೋಜಕತ್ವದಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ಮೈಸೂರು ಅರಮನೆ ಮಂಡಳಿ ಸಭಾಂಗಣದಲ್ಲಿ  ಮಾತನಾಡಿದ ಅವರು, ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಅದ್ಧೂರಿ ದಸರಾ ಆಚರಣೆ ಮಾಡುತ್ತಿಲ್ಲ. ಜೊತೆಗೆ ಸರಳವೂ ಅಲ್ಲ. ಸಾಂಪ್ರದಾಯಿಕವಾಗಿ, ಪ್ರಾಯೋಜಕತ್ವದಲ್ಲಿ ಆಚರಿಸಲಾಗುತ್ತಿದೆ ಎಂದರು.

ಹಲವು ಪ್ರಾಯೋಜಕರು ಮುಂದೆ ಬಂದಿದ್ದಾರೆ. ಎಷ್ಟು ಮಂದಿ ಪ್ರಾಯೋಜಕತ್ವ ಪಡೆಯುತ್ತಾರೆ ಎಂಬ ಮಾಹಿತಿ ಕೆಲ ದಿನಗಳಲ್ಲೇ ತಿಳಿಯುತ್ತದೆ. ಅವರು ಹೆಚ್ಚು ಸ್ಕ್ರೀನ್ ಸ್ಪೇಸ್ ಕೇಳುವುದರಿಂದ ನಮ್ಮ ಇತಿಮಿತಿಯಲ್ಲಿ, ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದಲೂ 15 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಎಂಡಿಎಯಿಂದ 10 ಕೋಟಿ, ಅರಮನೆ ಮಂಡಳಿಯಿಂದ 5 ಕೋಟಿ ರೂ. ಹಣ ಬಳಸಿಕೊಳ್ಳಲು ಪತ್ರ ಬರೆಯಲಾಗಿದೆ ಎಂದು ಅವರು ವಿವರಿಸಿದರು.

ದಸರಾಗೆ ಜನರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸರಳ ದಸರಾ ಎಂದು ಚರ್ಚೆ ನಡೆದರೆ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಾರೆ. ಸರಳ ಎಂಬ ಪದ ಬಳಕೆ ಮಾಡುವುದರಿಂದ ಪ್ರವಾಸಿಗರು, ವ್ಯಾಪಾರಿಗಳಿಗೂ ತೊಂದರೆಯಾಗುತ್ತದೆ. ಹೀಗಾಗಿ ಸರಳ ದಸರಾ ಚರ್ಚೆ ಅನಗತ್ಯ ಎಂದರು.

ಪ್ರವಾಸಿಗರಿಗೆ ತೆರಿಗೆ ವಿನಾಯಿತಿ ನೀಡಲು ಉನ್ನತ ಮಟ್ಟದ ಸಭೆಯಲ್ಲಿ ಪ್ರಸ್ತಾವನೆ ಮಾಡಲಾಗಿತ್ತು. ಮತ್ತೊಮ್ಮೆ ಪ್ರವಾಸೋದ್ಯಮ ಇಲಾಖೆಯ ಗಮನಕ್ಕೆ ತಂದು ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.

ಜಿಪಂ ಸಿಇಒ ಕೆ.ಎಂ. ಗಾಯತ್ರಿ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಎಸ್ಪಿ ಸೀಮಾ ಲಾಟ್ಕರ್, ಎಂಡಿಎ ಆಯುಕ್ತ ಜಿ.ಟಿ. ದಿನೇಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಮೊದಲಾದವರು ಇದ್ದರು.

ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಕೌಂಟ್‌ಡೌನ್; ಇಂದು ಮರದ ಅಂಬಾರಿ ಹೊತ್ತು ಗಾಂಭೀರ್ಯ ನಡಿಗೆ!

Follow Us:
Download App:
  • android
  • ios