ಕಾಂಗ್ರೆಸ್- ಜೆಡಿಎಸ್ ಮತ್ತೆ ಹೊಂದಾಣಿಕೆ : ಜೆಡಿಎಸ್‌ಗೆ ಬಿಜೆಪಿ ಪರ ಒಲವು
- ಮೈಸೂರು ನಗರ ಪಾಲಿಕೆ ಮೇಯರ್ ಚುನಾವಣೆ
- ಜೆಡಿಎಸ್ ಮತ್ತು ಕಾಂಗ್ರೆಸ್ ಮತ್ತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಮಾಡುವುದು ಖಚಿತ
ಮೈಸೂರು (ಆ.25): ಮೈಸೂರು ನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮತ್ತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸುವುದು ಬಹುತೇಕ ಖಚಿತವಾಗಿದೆ.
ಆದರೆ ಮೇಯರ್ ಸ್ಥಾನ ಯಾವ ಪಕ್ಷಕ್ಕೆ ಒಲಿಯುತ್ತದೆ ಎಂಬುದು ಜೆಡಿಎಸ್ ವರಿಷ್ಠರು ಕೈಗೊಳ್ಳುವ ತೀರ್ಮಾನದ ಮೇಲೆ ನಿಂತಿದೆ. ಜೆಡಿಎಸ್‌ನ ನಗರ ಪಾಲಿಕೆ ಸದಸ್ಯರಿಗೆ ಬಿಜೆಪಿ ಪರ ಒಲವಿದ್ದರೂ, ಈವರೆಗೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಈಗ ಮತ್ತೆ ಬದಲಾಯಿಸುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದಂತಿದೆ. ಈ ಹಿನ್ನೆಲೆಯಲ್ಲಿ 6 ತಿಂಗಳ ಅವಧಿಯ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು, ಉಳಿದ ಅವಧಿಗೆ ಮೇಯರ್ ಸ್ಥಾನವನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ಇರಾದೆಯಲ್ಲಿ ಜೆಡಿಎಸ್ ಇದೆ.
ಅತಂತ್ರ ಸ್ಥಿತಿಯ ನಗರ ಪಾಲಿಕೆಯಲ್ಲಿ ಹೆಚ್ಚು ಸದಸ್ಯರನ್ನು ಬಿಜೆಪಿ ಹೊಂದಿದ್ದರೂ, ಅಧಿಕಾರ ಹಿಡಿಯಲು ಬೇಕಿರುವಷ್ಟುಬಹುಮತವಿಲ್ಲ. 65 ಸದಸ್ಯ ಬಲದ ನಗರಪಾಲಿಕೆಯಲ್ಲಿ ಒಂದು ಸ್ಥಾನದ ಸದಸ್ಯತ್ವ ಅನೂರ್ಜಿತಗೊಂಡಿರುವುದರಿಂದ 64 ಮಂದಿ ಸದಸ್ಯರಿದ್ದಾರೆ. ಒಬ್ಬರು ಸಂಸದ, ನಾಲ್ವರು ಶಾಸಕರು ಮತ್ತು ನಾಲ್ವರು ವಿಧಾನ ಪರಿಷತ್ ಸದಸ್ಯರು ತಮ್ಮ ಹಕ್ಕು ಚಲಾಯಿಸಬಹುದು.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ : ಪಕ್ಷಗಳ ರಣತಂತ್ರ
ಇನ್ನಿಲ್ಲದ ಕಸರತ್ತು: ಕಳೆದ ಬಾರಿ ಜೆಡಿಎಸ್‌ನಿಂದ ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ಅಸಿಂಧುವಾದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಇನ್ನು ತೆರವಾದ ಮೇಯರ್ ಸ್ಥಾನಕ್ಕೆ ಆ. 25 ರಂದು ಉಪ ಚುನಾವಣೆ ನಡೆಯಲಿದ್ದು, ಜೆಡಿಎಸ್ ಸದಸ್ಯರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಇನ್ನಿಲ್ಲದ ಕಸರತ್ತು ಆರಂಭಿಸಿವೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ ಅವರು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಅಂತೆಯೇ ಸಹಕಾರ ಸಚಿವ ಎಸ್.ಟಿ. ಸೋಮಸೇಖರ್, ಬಿಜೆಪಿಗೆ ಬೆಂಬಲ ನೀಡುವಂತೆ ಕೋರಿ ಸಾ.ರಾ. ಮಹೇಶ್ ಅವರನ್ನು ಭೇಟಿಯಾಗಿ ಸಹಕಾರ ಕೋರಿದ್ದಾರೆ.
ಈಗಾಗಲೇ ಜೆಡಿಎಸ್ ಮಾತಿಗೆ ತಪ್ಪುತ್ತದೆ ಎಂಬ ಅಪವಾದ ಹೊಂದಿದೆ. ಈ ಹಿನ್ನೆಲೆಯಲ್ಲಿ ಒಪ್ಪಂದದಂತೆ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳೋಣ. ಅವರ ಜೊತೆಗೆ ಐದು ವರ್ಷ ಅವಧಿಯನ್ನು ಪೂರ್ಣಗೊಳಿಸೋಣ. ಈಗ ನಾವು ಬಿಜೆಪಿ ಜೊತೆಗೆ ಹೋಗುವುದು ಬೇಡ. ಪದೇ ಪದೇ ಮಾತಿಗೆ ತಪ್ಪಿದಂತೆ ಆಗುತ್ತದೆ. ಯಾರ ಜೊತೆ ಹೋದರು ಮೊದಲು ಅವರಿಗೆ ಮೇಯರ್ ಸ್ಥಾನ ಬಿಟ್ಟುಕೊಡಬೇಕು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡೋಣ ಎಂಬ ತೀರ್ಮಾನಕ್ಕೆ ಬಂದಂತಿದೆ. ಆದರೆ ಪಕ್ಷದ ಮೂಲಗಳ ಪ್ರಕಾರ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಇಷ್ಟವಿಲ್ಲ ಎನ್ನಲಾಗಿದೆ.
ಈ ಸಂಬಂಧ ಚರ್ಚಿಸಲು ಬೆಂಗಳೂರಿಗೆ ತೆರಳಿದ್ದ ಶಾಸಕ ಸಾ.ರಾ. ಮಹೇಶ್, ಮಂಗಳವಾರ ಸಂಜೆ ಮೈಸೂರಿಗೆ ಆಗಮಿಸಿ, ನಗರ ಪಾಲಿಕೆ ಒಬ್ಬರೇ ಸದಸ್ಯರನ್ನು ಕರೆದು ಅವರ ಅಭಿಪ್ರಾಯ ಸಂಗ್ರಹಿಸಿದರು. ಬಳಿಕ ಯಾರೊಡನೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ. ಒಂದೇ ವೇಳೆ ಮೇಯರ್ ಸ್ಥಾನ ಜೆಡಿಎಸ್‌ಗೆ ಬೇಕು ಎನ್ನುವುದಾದರೆ ಅಶ್ವಿನಿ ಅನಂತು ಪ್ರಬಲ ಆಕಾಂಕ್ಷಿ ಆಗಿದ್ದಾರೆ.
ಕುತೂಹಲಕರ ಸಂಗತಿ : ಈಗಾಗಲೇ ಎರಡೂವರೆ ವರ್ಷವನ್ನು ಕಾಂಗ್ರೆಸ್ ಜೊತೆ ಪೂರೈಸಿರುವ ಜೆಡಿಎಸ್ ಮುಂದಿನ ದಾರಿ ಯಾರ ಪರವಾಗಿರಲಿದೆ ಎಂಬುದು ಕುತೂಹಲಕರ ಸಂಗತಿ. ಏಕೆಂದರೆ ಮೊದಲ ವರ್ಷ ಕಾಂಗ್ರೆಸ್‌ಗೆ ಮೇಯರ್ ಬಿಟ್ಟು, ಎರಡನೇ ವರ್ಷ ತನ್ನಲ್ಲಿಯೇ ಮೇಯರ್ ಸ್ಥಾನ ಉಳಿಸಿಕೊಂಡಿದ್ದ ಜೆಡಿಎಸ್, ಮೂರನೇ ವರ್ಷಕ್ಕೆ ಬಿಜೆಪಿ ಜೊತೆ ಹೋಗಲು ಉತ್ಸುಕವಾಗಿತ್ತು. ಈ ವೇಳೆಗೆ ಸ್ಥಳೀಯರ ಲಾಭಿ ಮತ್ತು ರಾಜಕೀಯ ಮೇಲಾಟದಿಂದ ಮೇಯರ್ ಸ್ಥಾನವನ್ನು ತನ್ನಲ್ಲಿಯೇ ಇರಿಸಿಕೊಂಡು, ಉಪ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟಿತು. ಅಲ್ಲದೆ ಸ್ಥಾಯಿ ಸಮಿತಿಯಲ್ಲಿಯೂ ಜೆಡಿಎಸ್ ಪ್ರಾಬಲ್ಯ ಮೆರೆಯಿತು. ಈಗ ಜೆಡಿಎಸ್‌ಗೆ ಮೇಯರ್ ಸ್ಥಾನದಲ್ಲಿಯೇ ಮುಂದುವರೆಯಬೇಕಿದ್ದರೆ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಇಲ್ಲವೆ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ಬಿಟ್ಟು, ತಾನು ಮುಂದಿನ ವರ್ಷ ಮೇಯರ್ ಸ್ಥಾನ ಪಡೆಯುವುದಾಗಿ ಒಪ್ಪಂದ ಮಾಡಿಕೊಳ್ಳಬೇಕು.