ಮೈಸೂರು ನಗರಪಾಲಿಕೆಯ ಮೇಯರ್‌ ಚುನಾವಣೆಯು ಆ.25 ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ. ರುಕ್ಮಿಣಿ ಮಾದೇಗೌಡರ ಸದಸ್ಯತ್ವ ರದ್ದಾಗಿದ್ದರಿಂದ ಮತ್ತೆ ಚುನಾವಣೆ

 ಮೈಸೂರು (ಆ.18):  ಮೈಸೂರು ನಗರಪಾಲಿಕೆಯ ಮೇಯರ್‌ ಚುನಾವಣೆಯು ಆ.25 ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ.

ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಮೇಯರ್‌ ಹಾಗೂ ಕಾಂಗ್ರೆಸ್‌ನ ಅನ್ವರ್‌ಬೇಗ್‌ ಉಪ ಮೇಯರ್‌ ಆಗಿ ಆಯ್ಕೆಯಾಗಿದ್ದರು. ಚುನಾವಣೆ ವೇಳೆ ಆಸ್ತಿ ವಿವರ ಮುಚ್ಚಿಟ್ಟಿದ್ದರು ಎಂದು ಪ್ರತಿಸ್ಪರ್ಧಿ ರಜನಿ ಅಣ್ಣಯ್ಯ ಅವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ರುಕ್ಮಿಣಿ ಮಾದೇಗೌಡರ ಸದಸ್ಯತ್ವ ರದ್ದಾಗಿತ್ತು. ಇದರ ವಿರುದ್ಧ ಅವರು ಹೈಕೋರ್ಟಿನ ಮೆಟ್ಟಿಲೇರಿದ್ದರು. ಅಲ್ಲಿ ಕೂಡ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದ್ದರಿಂದ ಮೂರು ತಿಂಗಳ ನಂತರ ರುಕ್ಮಿಣಿ ಮಾದೇಗೌಡರು ಮೇಯರ್‌ ಸ್ಥಾನ ಕಳೆದುಕೊಂಡಿದ್ದರು. ಅಂದಿನಿಂದಲೂ ಉಪ ಮೇಯರ್‌ ಅನ್ವರ್‌ ಬೇಗ್‌ ಅವರು ಪ್ರಭಾರ ಮೇಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ : ಉಪ ಚುನಾವಣೆ ದಿನಾಂದ ನಿಗದಿ

ಈ ನಡುವೆ ಈ ಹಿಂದೆಯೇ ಮೇಯರ್‌ ಸ್ಥಾನಕ್ಕೆ ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಕೋವಿಡ್‌ ಲಾಕ್‌ಡೌನ್‌ ಇರುವುದರಿಂದ ಅದು ಮುಗಿದ ನಂತರ ಚುನಾವಣೆ ನಡೆಸಿ ಎಂದು ಕಾಂಗ್ರೆಸ್‌ ಸದಸ್ಯ ಪ್ರದೀಪ್‌ಚಂದ್ರಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದರು. ಲಾಕ್‌ಡೌನ್‌ ತೆರವಾಗುವ ವೇಳೆಗೆ ರಾಜ್ಯ ಸರ್ಕಾರ ಡಿಸೆಂಬರ್‌ವರೆಗೆ ಯಾವುದೇ ಚುನಾವಣೆ ನಡೆಸಬಾರದು ಎಂದ ಆದೇಶ ಹೊರಡಿತ್ತು. ಇದರಿಂದ ಈವರೆಗೆ ಮೇಯರ್‌ ಚುನಾವಣೆ ನಡೆದಿರಲಿಲ್ಲ.

ಮೇಯರ್‌ ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಚುನಾವಣೆ ನಡೆಸದಿರುವುದರಿಂದ ನಮಗೆ ಅನ್ಯಾಯವಾಗುತ್ತದೆ ಎಂದು ಮಹಿಳಾ ಸದಸ್ಯರು ಪಕ್ಷಾತೀತವಾಗಿ ಸಚಿವರಾದ ಭೈರತಿ ಬಸವರಾಜು ಹಾಗೂ ಎಸ್‌.ಟಿ. ಸೋಮಶೇಖರ್‌ ಅವರ ಗಮನಕ್ಕೆ ತಂದಿದ್ದರು.

ಉಪ ಚುನಾವಣೆ: ರುಕ್ಮಿಣಿ ಮಾದೇಗೌಡರು ಪ್ರತಿನಿಧಿಸುತ್ತಿದ್ದ 36ನೇ ವಾರ್ಡಿಗೆ ಸೆ.3 ರಂದು ಉಪ ಚುನಾವಣೆ ಕೂಡ ನಡೆಯಲಿದೆ. ಜೆಡಿಎಸ್‌ನಿಂದ ರುಕ್ಮಿಣಿ ಅವರ ಸಂಬಂಧಿ ಲೀಲಾವತಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ರಜನಿ ಅಣ್ಣಯ್ಯ ಮತ್ತಿತರರು ಆಕಾಂಕ್ಷಿಗಳು. ಬಿಜೆಪಿಯಿಂದ ಇನ್ನೂ ಅಂತಿಮವಾಗಿಲ್ಲ.