ಒಳ ಉಡುಪು ಹರಿದಿದೆ ಬಟ್ಟೆ ಅಂಗಡಿ ತೆರೆಸಿ ಸಿಎಂಗೆ ಮೈಸೂರು ವ್ಯಕ್ತಿಯಿಂಅದ ವಿಚಿತ್ರ ಮನವಿ ಲಾಕ್‌ಡೌನ್‌ ಹಿನ್ನೆಲೆ ರಾಜ್ಯದಲ್ಲಿ ಬಂದ್‌ ಆಗಿರುವ ಸೇವೆಗಳು

ಮೈಸೂರು (ಜೂ.02): ಸದ್ಯ ರಾಜ್ಯದಲ್ಲಿ ಕೋವಿಡ್  ಹೆಚ್ಚಾದ ಹಿನ್ನೆಲೆ ಲಾಕ್‌ಡೌನ್‌ ಇದ್ದು ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗಿದೆ. ಇದೇ ವೇಳೆ ಮೈಸೂರಿನ ವ್ಯಕ್ತಿಯೋರ್ವ ವಿಚಿತ್ರ ಕೋರಿಕೆಯನ್ನು ಮುಂದಿಟ್ಟುಕೊಂಡು ಸಿಎಂಗೆ ಪತ್ರ ಬರೆದಿದ್ದಾರೆ. 

ಮೈಸೂರಿನ ಚಾಮರಾಜಪುರಂ ನಿವಾಸಿ ನರಸಿಂಹ ಮೂರ್ತಿ ಎಂಬಾತ ತನ್ನ ಚೆಡ್ಡಿ ಹರಿದಿದ್ದು ಬಟ್ಟೆ ಅಂಗಡಿಯನ್ನು ತೆರೆಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. 

ಕರ್ನಾಟಕದಲ್ಲಿ ಕೊರೋನಾ ಪಾಸಿವಿಟಿವಿ ಪ್ರಮಾಣ ಇಳಿಕೆ, ಕೊಂಚ ನಿರಾಳ ಭಾವ

ನ್ಯಾಯಾಂಗ ಇಲಾಖೆ ನಿವೃತ್ತ ಅಧಿಕಾರಿಯಾದ ಕೊ.ಸು.ನರಸಿಂಹ ಮೂರ್ತಿ ನನ್ನ ಬಳಿ ಎರಡೇ ಜೊತೆ ಒಳ ಉಡುಪುಗಳಿವೆ ಅವುಗಳು ಹರಿದಿವೆ. ಆದ್ದರಿಂದ ವಾರಕ್ಕೊಮ್ಮೆಯಾದರೂ ಬಟ್ಟೆ ಅಂಗಡಿ ತೆರೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಪತ್ರದ ವಿವರ :

ಮಾನ್ಯ ಮುಖ್ಯಮಂತ್ರಿಗಳೇ, ನನ್ನ ಬೇಡಿಕೆ ನಿಮಗೆ ವಿಚಿತ್ರವೆನಿಸೀತು. ಆದರೆ ಪರಿಸ್ಥಿತಿಯನ್ನೊಮ್ಮೆ ಅವಲೋಕಿಸಿ. ಲಾಕ್ಡೌನ್ ಮುಂದುವರೆಸುವ ಎಲ್ಲ ಲಕ್ಷಣಗಳೂ ನಿಚ್ಚಳವಾಗುತ್ತಿದೆ. ಜನರ ಅಗತ್ಯಗಳ ಬಗ್ಗೆ ಸರಕಾರ / ಜಿಲ್ಲಾಡಳಿತ ಕಣ್ಣಿಟ್ಟು ಗಮನಹರಿಸಬೇಕು.

ಕಳೆದೆರಡು ತಿಂಗಳುಗಳಿಂದ ಎಲ್ಲಾ ಅಂಗಡಿಗಳು ತೆರೆಯುತ್ತಿದ್ದರೂ ಅದೇಕೋ ಬಟ್ಟೆ ಅಂಗಡಿಗಳನ್ನು ತೆರೆಯಲು ಸರಕಾರ ಅನುಮತಿ ನೀಡುತ್ತಿಲ್ಲ. ಜನರ ಕಷ್ಟವೇನು ಇದರಿಂದ ಎಂದು ನೋಡಿದ್ದೀರಾ ?

ಕೇವಲ ಎರಡು ಜೊತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂತಹವರ ಒಳ ಚಡ್ಡಿ ಹಾಗೂ ಬನಿಯನ್‌ಗಳು ಹರಿಯುತ್ತಿವೆ. ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೇ ಆಗಿರಬಹುದು. ಯಾರ ಬಳಿ ಹೇಳುವುದು ನಮ್ಮ ಸಮಸ್ಯೆ?

ಜನರ ಅಂತರಾಳದ ಕಷ್ಟ ನಿಮಗೆ ಗೊತ್ತಾದರೆ ಸಾಕು. ತಿಂಗಳಲ್ಲಿ ವಾರಕ್ಕೊಮ್ಮೆಯಾದರೂ ಬಟ್ಟೆ ಅಂಗಡಿ ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ ! ಹೊಟ್ಟೆ ಬಗ್ಗೆ ಗಮನ ಹರಿಸುವ ಸರಕಾರ ಬಟ್ಟೆ ಬಗ್ಗೆಯೂ ಚಿಂತಿಸಬೇಕು.

ಕೊ‌.ಸು.ನರಸಿಂಹ ಮೂರ್ತಿ
ಚಾಮರಾಜಪುರಂ
ಮೈಸೂರು

ಹೀಗೆ ಪತ್ರ ಬರೆದು ಬಟ್ಟೆ ಅಂಗಡಿ ತೆರೆಸುವಂತೆ ಕೇಳಿಕೊಂಡಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona