Mysuru : ಗುಂಬಜ್‌ ವಿವಾದ - ಮುಂದುವರೆದ BJP ನಾಯಕರ ಜಟಾಪಟಿ

  ನಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದೇನೆ. ಟಿಪ್ಪು ಎಕ್ಸ್ ಪ್ರೆಸ್‌ ರೈಲಿನ ಹೆಸರು ಬದಲಿಸುತ್ತೇನೆ ಎಂದು ಹೇಳಿದ್ದೆ. ಬದಲಾಯಿಸಿದ್ದೇನೆ. ಮಹಿಷ ದಸರಾ ನಿಲ್ಲಿಸಿದ್ದೇನೆ. ಬಸ್‌ ತಂಗುದಾಣದ ಗುಂಬಜ್‌ ತೆರವು ವಿಚಾರದಲ್ಲೂ ನನ್ನ ಮಾತಿಗೆ ಬದ್ಧ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

Mysuru Gumbaj Controversy   Continued BJP Leaders Talkwar snr

  ಮೈಸೂರು (ನ.18):  ನಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದೇನೆ. ಟಿಪ್ಪು ಎಕ್ಸ್ ಪ್ರೆಸ್‌ ರೈಲಿನ ಹೆಸರು ಬದಲಿಸುತ್ತೇನೆ ಎಂದು ಹೇಳಿದ್ದೆ. ಬದಲಾಯಿಸಿದ್ದೇನೆ. ಮಹಿಷ ದಸರಾ ನಿಲ್ಲಿಸಿದ್ದೇನೆ. ಬಸ್‌ ತಂಗುದಾಣದ ಗುಂಬಜ್‌ ತೆರವು ವಿಚಾರದಲ್ಲೂ ನನ್ನ ಮಾತಿಗೆ ಬದ್ಧ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway)  ಬಸ್‌ ನಿಲ್ದಾಣ (Bus Stand)  ನಿರ್ಮಾಣ ಸಂಬಂಧ ಕಾನೂನು ಮತ್ತು ಆಡಳಿತಕ್ಕಿಂತ ಯಾರೂ ದೊಡ್ಡವರಲ್ಲ. ಮೂಲವಿನ್ಯಾಸದಂತೆ ನಿಲ್ದಾಣ ನಿರ್ಮಾಣವಾಗಬೇಕು ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಬಸ್‌ ನಿಲ್ದಾಣ ಹೇಗಿರಬೇಕು ಎಂಬ ನಕ್ಷೆಯನ್ನು ಕೆಆರ್‌ಐಡಿಎಲ್‌ ನೀಡಿದೆ. ಅದರಂತೆ ಬಸ್‌ ನಿಲ್ದಾಣ ಇರಬೇಕು. ಅವರು ಕೊಟ್ಟನಕ್ಷೆಯಲ್ಲಿ ಗುಂಬಜ್‌ ಇರಲಿಲ್ಲ . ಬಸ್‌ ನಿಲ್ದಾಣದ ಮೇಲಿನ ಅನಧಿಕೃತ ಗುಂಬಜ್‌ ತೆರವುಗೊಳಿಸಲೇಬೇಕು. ಮೈಸೂರಿನ ಅಭಿವೃದ್ಧಿ ಕಾರ್ಯಗಳು ಮಹಾರಾಜರ ಹೆಸರು ಹೇಳಬೇಕೆ ಹೊರತು ಅವರ ಶತ್ರುಗಳ ಹೆಸರನ್ನಲ್ಲ ಎಂದು ಅವರು ಹೇಳಿದರು.

ಗುಂಬಜ್‌ ಬಗ್ಗೆ ಪರಿಶೀಲನೆಗೆ ಹೊಸ ತಜ್ಞರ ಸಮಿತಿ ಅವಶ್ಯಕತೆ ಇಲ್ಲ. ಕೆಆರ್‌ಐಡಿಎಲ್‌ನ ತಜ್ಞರೇ ಮೂಲ ನಕ್ಷೆಗೆ ಅನುಮತಿ ಕೊಟ್ಟಿದ್ದಾರೆ. ರಾತ್ರಿ ವೇಳೆ ಕೆಲಸ ಮಾಡುವವರು ಕಳ್ಳರು. ರಾತ್ರಿ ಯಾಕೆ ಬಸ್‌ ನಿಲ್ದಾಣದ ಕೆಲಸ ಮಾಡಬೇಕು. ಬಸ್‌ ನಿಲ್ದಾಣಕ್ಕೆ ಹೆಸರು ಇಡಲು ಕಾನೂನಿದೆ. ರಾತ್ರೋರಾತ್ರಿ ಹೇಗೆ ಹೆಸರಿಟ್ಟರು. ಈ ವಿಚಾರದಲ್ಲಿ ಎಲ್ಲಾ ಕಾನೂನು ಉಲ್ಲಂಘನೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಧ್ಯ ಪ್ರವೇಶಿಸಿದೆ. ಅವರೇ ಅನಧಿಕೃತ ಕಟ್ಟಡ ಎಂದು ಹೇಳಿದ್ದಾರೆ. ಅವರು ತೆರವುಗೊಳಿಸಬಹುದು ಎಂದರು.

ಮೂಲ ವಿನ್ಯಾಸದಲ್ಲಿ ಗುಂಬಜ್‌ ಇಲ್ಲ. ಹೊಸ ವಿನ್ಯಾಸದಲ್ಲಿ ಗುಂಬಜ್‌ ಇದೆ. ಆ ನಕ್ಷೆಗೆ ಶಾಸಕರ ಆಪ್ತ ಕಾರ್ಯದರ್ಶಿ ಸಹಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೊಟ್ಟಗಡುವು ಮುಗಿದ ಮೇಲೆ ಏನಾಗುತ್ತೋ ನೋಡೋಣ.

ರಾಮದಾಸ್‌ ನಮ್ಮ ಹಿರಿಯ ನೇತಾರರು. ರಾಮದಾಸ್‌ ಹಿಂದೆ ಕಾಂಗ್ರೆಸ್‌ನವರು ಆಗಿದ್ದರೂ ಕೂಡ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸದ ಬಳಿಕ ಬಿಜೆಪಿ ಆಗಿದ್ದಾರೆ. ಗುಂಬಜ್‌ ಒಡೆದರೆ ಟಿಪ್ಪು ಅನುಯಾಯಿಗಳಿಗೆ ಕಿರುಕುಳ ಆಗುತ್ತದೆ. ಶಿವಾಜಿ ಅನುಯಾಯಿಗಳಿಗೆ ಕಿರುಕುಳ ಅನ್ನಿಸುವುದಿಲ್ಲ. ರಾಮದಾಸ್‌ ಅವರು ಯಾವ ಅರ್ಥದಲ್ಲಿ ತಮಗೆ ಕಿರುಕುಳ ಆಗಿದೆ ಎಂದು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.

ಪ್ರಧಾನಿ ಮೋದಿ ಅವರಿಂದಲೇ ಬೆನ್ನಿಗೆ ಗುದ್ದು ಕೊಡಿಸಿಕೊಂಡ ರಾಮದಾಸ್‌ ಅವರಿಗೆ ಕಿರುಕುಳ ಕೊಡವ ಶಕ್ತಿ ನನಗೆ ಎಲ್ಲಿದೆ ಹೇಳಿ? ಮೈಸೂರಿನ ರಾಜಕಾರಣಿಗಳ ಬಳಿ ನನ್ನನ್ನೇ ಸುಟ್ಟು ಹಾಕುವಷ್ಟುಹಣವಿದೆ. ಅವರಿಗೆ ಕಿರುಕುಳ ಕೊಡುವಷ್ಟುಶಕ್ತಿವಂಥ ನಾನಲ್ಲ. ಏನು ಕಿರುಕುಳ? ಎಂಥ ಕಿರುಕುಳ ಎಂಬುದನ್ನು ರಾಮದಾಸ್‌ ಅವರ ಬಳಿಯೆ ಕೇಳಿ. ನಾನು ರಿಯಲ್‌ ಎಸ್ಟೇಟ್‌ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಮೈಸೂರಿನ ರಾಜಕಾರಣಿಗಳ ಜೊತೆ ಸೇರಿಕೊಂಡು ವ್ಯವಹಾರ ಮಾಡುವ ಅವಶ್ಯಕತೆಯೂ ನನಗಿಲ್ಲ. ನಾನು ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತಿದ್ದೇನೆ ಎಂದು ಟಾಂಗ್‌ ನೀಡಿದರು.

ತಪ್ಪು ಮಾಡಿದರೆ ಶಿಕ್ಷೆ ಕೊಡಲಿ

ಮೈಸೂರು :  ಬಸ್‌ ತಂಗುದಾಣ ವಿಷಯದಲ್ಲಿ ನಾನು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ, ನನ್ನನ್ನು ದಯಮಾಡಿ ಬಿಟ್ಟುಬಿಡಿ ಎಂದು ಶಾಸಕ ಎಸ್‌.ಎ. ರಾಮದಾಸ್‌ ಕೈಮುಗಿದು ಕೇಳಿದ ಘಟನೆ ಗುರುವಾರ ನಡೆದಿದೆ.

ಗುಂಬಜ್‌ ಮಾದರಿ ಇದೆ ಎಂದು ಬಸ್‌ ತಂಗುದಾಣ ತೆರವು ಮತ್ತು ಉಳಿವು ವಿವಾದ ದಿನೇದಿನೇ ವಿವಿಧ ಸ್ವರೂಪ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿ, ನಾನು ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ. ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆ. ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯಲ್ಲಿ 11 ಜನ ಶಾಸಕರು ಇದ್ದರು. ಕಿರುಕುಳ ನೀಡಿ 10 ಜನ ಬೇರೆ ಪಕ್ಷಕ್ಕೆ ಹೊರಟು ಹೋದರು. ಉಳಿದಿರುವವನು ನಾನೊಬ್ಬನೇ. ದಯಮಾಡಿ ನನ್ನನ್ನು ಬಿಟ್ಟು ಬಿಡಿ ಏನು ಪ್ರಶ್ನೆ ಕೇಳಬೇಡಿ. ನಾನು ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ಮಾಡುತ್ತೇನೆ. ಪಾರ್ಕ್ ಮತ್ತು ಸ್ಮಶಾನ ಅಭಿವೃದ್ಧಿ ನನ್ನ ಕನಸು. ಸಾಯುವ ಮುನ್ನ ಸಾಧನೆ ಮಾಡಬೇಕು ಅನ್ನೋದೆ ನನ್ನ ಗುರಿ. ಈ ಬಗ್ಗೆ ಸಿಎಂ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಸಮಿತಿ ರಚಿಸಲು ಮನವಿ ಮಾಡಿದ್ದೇನೆ. ಸಮಿತಿ ಯಾವುದೇ ವರದಿ ಕೊಟ್ಟರೂ ಅದಕ್ಕೆ ನಾನು ಬದ್ದನಾಗಿದ್ದೇನೆ ಎಂದು ಗದ್ಗದಿತರಾಗಿ ಪ್ರತಿಕ್ರಿಯಿಸಿದರು.

Latest Videos
Follow Us:
Download App:
  • android
  • ios