ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿಯಡಿ ಮೈಸೂರು ನಗರ ಪಾಲಿಕೆಯು ಕರ್ನಾಟಕದ 'ಭರವಸೆಯ ಸ್ವಚ್ಛ ನಗರ' ಎಂಬ ಪ್ರತಿಷ್ಠಿತ ಗೌರವಕ್ಕೆ ಪಾತ್ರವಾಗಿದೆ. ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆ, ತ್ಯಾಜ್ಯ ವಿಂಗಡಣೆ, ನೈರ್ಮಲ್ಯ ಸೌಲಭ್ಯಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಿಂದ ಈ ಸಾಧನೆ ಸಾಧ್ಯವಾಗಿದೆ.
ಮೈಸೂರು: ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿಯಡಿ ಮೈಸೂರು ನಗರ ಪಾಲಿಕೆಯು ಕರ್ನಾಟಕದ ‘ಭರವಸೆಯ ಸ್ವಚ್ಛ ನಗರ’ ಎಂಬ ಪ್ರತಿಷ್ಠಿತ ಗೌರವಕ್ಕೆ ಪಾತ್ರವಾಗಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಪಾಲ್ಗೊಂಡು ಪ್ರಶಸ್ತಿ ವಿತರಿಸಿದರು. ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ನಿರಂತರ ಪ್ರಯತ್ನಕ್ಕೆ ಸಿಕ್ಕ ಗೌರವ
ಸ್ವಚ್ಛ ಭಾರತ ಮಿಷನ್–ನಗರ ಯೋಜನೆಯಡಿ ಮೈಸೂರು ನಗರದಲ್ಲಿ ಸ್ವಚ್ಛತೆ, ವೈಜ್ಞಾನಿಕ ಘನತ್ಯಾಜ್ಯ ನಿರ್ವಹಣೆ, ತ್ಯಾಜ್ಯ ವಿಂಗಡಣೆ, ತ್ಯಾಜ್ಯ ಸಂಸ್ಕರಣೆ, ಪಾರಂಪರಿಕ ತ್ಯಾಜ್ಯ ವಿಲೇವಾರಿ, ನೈರ್ಮಲ್ಯ ಸೌಲಭ್ಯಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸಹಭಾಗಿತ್ವದ ಮೂಲಕ ಕೈಗೊಂಡಿರುವ ನಿರಂತರ ಪ್ರಯತ್ನಕ್ಕೆ ಈ ಗೌರವ ದೊರೆತಿದೆ.
‘ಭರವಸೆಯ ಸ್ವಚ್ಛ ನಗರ’
ಸ್ವಚ್ಛ ಸರ್ವೇಕ್ಷಣದ ರಾಷ್ಟ್ರಮಟ್ಟದ ನಗರಗಳ ಅಧಿಕೃತ ಶ್ರೇಯಾಂಕಗಳು ಪ್ರಕಟವಾಗಿದ್ದು, ಮೈಸೂರು ಬಿಟ್ಟು ಬೇರೆ ನಗರಗಳು ಉನ್ನತ ಶ್ರೇಣಿಯಲ್ಲಿ ಸ್ಥಾನ ಪಡೆದಿಲ್ಲ. ಪ್ರಸ್ತುತ ಮೈಸೂರು ನಗರಪಾಲಿಕೆಗೆ ಮಾತ್ರ ಕರ್ನಾಟಕ ರಾಜ್ಯದ ‘ಭರವಸೆಯ ಸ್ವಚ್ಛ ನಗರ’ ಎಂಬ ವಿಶೇಷ ಗೌರವ ಲಭಿಸಿದೆ.
ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ, ನಗರ ಪಾಲಿಕೆ ಆಡಳಿತಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಸ್ವಚ್ಛ ಭಾರತ ಮಿಷನ್ನ ನಿರ್ದೇಶಕಿ ಡಾ. ಸೆಲ್ವಮಣಿ, ನಗರ ಪಾಲಿಕೆ ಇಇ ಕೆ.ಎಸ್. ಮೃತ್ಯುಂಜಯ ಪಾಲ್ಗೊಂಡಿದ್ದರು.
ಮೈಸೂರು ನಗರ ಪಾಲಿಕೆಯು ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಕ್ರಮ ಕೈಗೊಂಡಿದ್ದು, ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ, ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ, ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ, ಪಾರಂಪರಿಕ ತ್ಯಾಜ್ಯದ ಜೈವಿಕ ಗಣಿಗಾರಿಕೆ ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಅನುಷ್ಠಾನಗೊಳಿಸುತ್ತಿದೆ.
ಈ ಸಾಧನೆಯು ನಗರ ಪಾಲಿಕೆ ಅಧಿಕಾರಿಗಳು, ಪರಿಸರ ಎಂಜಿನಿಯರ್ಗಳು, ಆರೋಗ್ಯ ನಿರೀಕ್ಷಕರು, ಸ್ವಚ್ಛತಾ ಮೇಲ್ವಿಚಾರಕರು, ಪೌರಕಾರ್ಮಿಕರು ಹಾಗೂ ಮೈಸೂರು ನಗರದ ನಾಗರಿಕರ ಸಂಘಟಿತ ಪರಿಶ್ರಮದ ಫಲವಾಗಿದೆ.
ವಿಶೇಷವಾಗಿ ನಗರದ ಸ್ವಚ್ಛತೆಗಾಗಿ ಪ್ರತಿನಿತ್ಯ ಶ್ರಮಿಸುತ್ತಿರುವ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಯ ನಿರಂತರ ಸೇವೆ ಮತ್ತು ಸಮರ್ಪಣಾ ಮನೋಭಾವಕ್ಕೆ ಈ ಗೌರವ ಅರ್ಪಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಸ್ವಚ್ಛತೆ ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ಇನ್ನಷ್ಟು ಸುಧಾರಣೆ ಕೈಗೊಂಡು, ಮೈಸೂರು ನಗರವನ್ನು ರಾಷ್ಟ್ರಮಟ್ಟದಲ್ಲಿ ಅತ್ಯಂತ ಸ್ವಚ್ಛ ಹಾಗೂ ಸುಸ್ಥಿರ ನಗರಗಳ ಸಾಲಿನಲ್ಲಿ ಮುಂಚೂಣಿಗೆ ತರುವಲ್ಲಿ ಮೈಸೂರು ನಗರ ಪಾಲಿಕೆ ಬದ್ಧವಾಗಿದೆ ಎಂದು ಆಯುಕ್ತೆ ಎಂ.ಕೆ. ಸವಿತಾ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ, ನಗರ ಪಾಲಿಕೆ ಆಡಳಿತಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅವರಿಗೆ ಪ್ರಶಸ್ತಿ ಪ್ರದಾನಿಸಿದರು.














