ಮೈಸೂರು : ಕೋವಿಡ್ 3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧ
- ಕೋವಿಡ್ 3ನೆ ಅಲೆಯನ್ನು ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ
- ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸೂಚನೆ
ಮೈಸೂರು (ಆ.20): ಕೋವಿಡ್ 3ನೆ ಅಲೆಯನ್ನು ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ. ಇದಕ್ಕೆ ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು.
ಮಿಟ್ಸುಬಿಶಿ ಹೆವಿ ಇಂಡಸ್ಟ್ರೀಸ್- ವಿಎಸ್‌ಟಿ ಡೀಸೆಲ್ ಎಂಜಿನ್ ಪ್ರೈ.ಲಿ. ಕಂಪನಿಯವರು ಕೋವಿಡ್ 3ನೇ ಅಲೆ ಎದುರಿಸಲು ಬೇಕಾಗುವ 20 ಪೆಶೆಂಟ್ ಮಾನಿಟರ್, 3 ಡಿಆರ್ ಸಿಸ್ಟಮ್, 10 ಆಕ್ಸಿಜನ್ ಕಾನ್ಸನ್ಟೆ್ರೕಟರ್, 3 ಸರ್ಜಿಕಲ್ ಎಚ್‌ಎಫ್‌ಎನ್‌ಸಿ ಮಿಶನ್, 12 ಸರ್ಜಿಕಲ್ ಇಸಿಜಿ ಚಾನೆಲ್ ಮಿಷನ್ ಹಾಗೂ 3 ಪೊರ್ಟೆಬಲ್ ಎಕ್ಸ್-ರೇ ವೈದ್ಯಕೀಯ ಉಪಕರಣಗಳನ್ನು ಗುರುವಾರ ತಮ್ಮ ಕಚೇರಿಯ ಆವರಣದಲ್ಲಿ ಅವರು ಸ್ವೀಕರಿಸಿ ಮಾತನಾಡಿದರು.
2 ಡೋಸ್ ಲಸಿಕೆ ಪಡೆದ 87 ಸಾವಿರ ಜನರಿಗೆ ಕೊರೋನಾ
ಜಿಲ್ಲೆಯಲ್ಲಿ ಕೋವಿಡ್ ಅಲೆ ಕಡಿಮೆಯಾಗಿದೆ ಎಂದು ಜನರು ಮೈ ಮರೆಯಬಾರದು. ಕೋವಿಡ್ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರವು ಮಾಡಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್, ಸ್ಯಾನಿಟೈಜರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಕೋವಿಡ್‌ನಿಂದ ದೂರ ಇರಬಹುದು ಎಂದರು.
ಕೋವಿಡ್ ನಿಯಮಗಳನ್ನು ಸಾರ್ವಜನಿಕರು ಪಾಲಿಸಿದರೆ ಕೋವಿಡ್‌ನಿಂದ ದೂರ ಇರಬಹುದು. ಯಾರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೋ ಅಂತಹವರಿಗೆ ಕೋವಿಡ್ ಬರುವುದಿಲ್ಲ. ಯಾರು ನಿಯಮಗಳನ್ನು ಪಾಲಿಸುವುದಿಲ್ಲವೋ ಅಂತಹವರಿಗೆ ಕೋವಿಡ್ ಸೋಂಕು ಬೇಗ ತಗಲುವ ಸಾಧ್ಯತೆ ಇರುತ್ತದೆ ಎಂದು ಅವರು ಹೇಳಿದರು.
ಕಾಲೇಜುಗಳಲ್ಲಿ ಈಗಾಗಲೇ ತರಗತಿಗಳು ನಡೆಯುತ್ತಿದ್ದು, ಕಾಲೇಜುಗಳು ಬಿಟ್ಟತಕ್ಷಣ ಹುಡುಗರು ಗುಂಪು ಸೇರಿಕೊಳ್ಳುತ್ತಾರೆಂಬ ಮಾಹಿತಿ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಆಯಾ ಕಾಲೇಜುಗಳ ಪ್ರಾಂಶುಪಾಲರ ಜೊತೆ ಮಾತನಾಡಲಾಗುವುದು. ಹಬ್ಬದ ಪ್ರಯುಕ್ತ ದೇವರಾಜ ಮಾರುಕಟ್ಟೆಯಲ್ಲಿ ಜನರು ದೈಹಿಕ ಅಂತರ ಪಾಲಿಸದೆ ಗುಂಪಾಗಿ ಸೇರುತ್ತಿದ್ದಾರೆ. ಹೀಗಾಗಿ ಇದರ ಬಗ್ಗೆ ನಗರ ಪಾಲಿಕೆಯ ಆಯುಕ್ತರ ಜೊತೆ ಮಾತನಾಡುವುದಾಗಿ ಅವರು ತಿಳಿಸಿದರು