ಮೈಸೂರು(ಆ.30): ಮೈಸೂರು ನಗರ ಪಾಲಿಕೆ, ಟಿ. ನರಸೀಪುರ, ಪಿರಿಯಾಪಟ್ಟಣ ಹಾಗೂ ಎಚ್.ಡಿ. ಕೋಟೆ ಪುರಸಭೆ ವ್ಯಾಪ್ತಿಯಲ್ಲಿ ಆ.31ರಂದು ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ(ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳು ಒಳಗೊಂಡಂತೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಹೇಳಿದ್ದಾರೆ.

ಮತದಾನ ನಡೆಯಲಿರುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೋಂದಾಯಿತರಾದ ಅರ್ಹ ಮತದಾರರಾಗಿರುವ ಎಲ್ಲ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳ ಮಾಲೀಕರು ವೇತನ ಸಹಿತ ರಜೆ ನೀಡುವಂತೆ ಕಾರ್ಮಿಕ ಇಲಾಖೆಯಿಂದ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಂತೆ, ಜಾತ್ರೆ ಮುಂದೂಡಿಕೆ ಹಾಗೂ ಮದ್ಯಪಾನ ನಿಷೇಧ: 
ಜಿಲ್ಲೆಯ ನಗರ ಪಾಲಿಕೆ, ಟಿ. ನರಸೀಪುರ, ಪಿರಿಯಾ ಪಟ್ಟಣ ಮತ್ತು ಎಚ್.ಡಿ. ಕೋಟೆ ಪುರಸಭೆ ವ್ಯಾಪ್ತಿಯಲ್ಲಿ ಆ.31ರಂದು ಸಂತೆ-ಜಾತ್ರೆಯನ್ನು ಮುಂದೂಡಿ ಆದೇಶಿಸಿದ್ದಾರೆ. ಮತದಾನವಿರುವುದರಿಂದ ಆ.30ರ ಬೆಳಗ್ಗೆ 7ರಿಂದ 31ರ ಮಧ್ಯರಾತ್ರಿಯವರೆಗೆ ಹಾಗೂ ಮತ ಎಣಿಕೆ ಪ್ರಯುಕ್ತ ಸೆ.2ರ ಮಧ್ಯರಾತ್ರಿಯಿಂದ ಸೆ.2ರ ಮಧ್ಯರಾತ್ರಿಯವರೆಗೆ ಚುನಾವಣಾ ನಡೆಯುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಗಡಿಯಿಂದ ಮೂರು ಕಿಮೀ ಪರಿಧಿಯಲ್ಲಿ ಮದ್ಯಪಾನ ನಿಷೇಧಿಸಿದೆ.