Asianet Suvarna News Asianet Suvarna News

ಅವಿಭಜಿತ ಮೈಸೂರು ಜಿಲ್ಲೆಗೆ ಮತ್ತೆ ನಿರಾಶೆ : ಕಾರಣ ಇದೇ!

  • ಒಂದು ಕಾಲಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಅವಿಭಜಿತ ಮೈಸೂರು ಜಿಲ್ಲೆಗೆ ಸಿಂಹಪಾಲು ಸಿಗುತಿತ್ತು
  • ಬಸವರಾಜ ಎಸ್‌. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ
  • 2019 ರಿಂದ ಎರಡು ವರ್ಷ ಅಧಿಕಾರ ನಡೆಸಿದ ಹಿಂದಿನ ಬಿ.ಎಸ್‌. ಯಡಿಯೂರಪ್ಪ ಸರ್ಕಾರದಲ್ಲಿ ಕೂಡ ಇದೇ ರೀತಿ 
Mysuru did not get minister  post in CM Basavaraja Bommai Cabinet  snr
Author
Bengaluru, First Published Aug 5, 2021, 10:41 AM IST
  • Facebook
  • Twitter
  • Whatsapp

ವರದಿ :  ಅಂಶಿ ಪ್ರಸನ್ನಕುಮಾರ್‌

 ಮೈಸೂರು (ಆ.05):  ಒಂದು ಕಾಲಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಅವಿಭಜಿತ ಮೈಸೂರು ಜಿಲ್ಲೆಗೆ ಸಿಂಹಪಾಲು. ಆದರೆ ಬಸವರಾಜ ಎಸ್‌. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. 2019 ರಿಂದ ಎರಡು ವರ್ಷ ಅಧಿಕಾರ ನಡೆಸಿದ ಹಿಂದಿನ ಬಿ.ಎಸ್‌. ಯಡಿಯೂರಪ್ಪ ಸರ್ಕಾರದಲ್ಲಿ ಕೂಡ ಇದೇ ರೀತಿಯಾಗಿತ್ತು.

ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲೇ ಬಿಜೆಪಿಯ ನಾಲ್ವರು ಶಾಸಕರಿದ್ದಾರೆ. ಅವರೆಂದರೆ ಎಸ್‌.ಎ. ರಾಮದಾಸ್‌ - ಕೃಷ್ಣರಾಜ, ಎಲ್‌. ನಾಗೇಂದ್ರ- ಚಾಮರಾಜ, ಬಿ. ಹರ್ಷವರ್ಧನ್‌- ನಂಜನಗೂಡು ಹಾಗೂ ಸಿ.ಎನ್‌. ನಿರಂಜನಕುಮಾರ್‌- ಗುಂಡ್ಲುಪೇಟೆ.

ಈ ಪೈಕಿ ರಾಮದಾಸ್‌ ನಾಲ್ಕನೇ ಬಾರಿಗೆ ಶಾಸಕರು ಹಾಗೂ 2008 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಎರಡು ಕಾಲ ವರ್ಷದ ನಂತರ ಬಿ.ಎಸ್‌. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ್‌ ಶೆಟ್ಟರ್‌ ಸಂಪುಟದಲ್ಲಿ ಸಚಿವರಾಗಿದ್ದರು. ಉಳಿದ ಮೂವರು ಪ್ರಥಮ ಬಾರಿ ವಿಧಾನಸಭೆಗೆ ಆಯ್ಕೆಯಾದವರು.

ಸಿಎಂ ಬೊಮ್ಮಾಯಿಗೆ ಖಾತೆ ಹಂಚಿಕೆ ಸವಾಲು..!

ನಾಗೇಂದ್ರ ಅವರು ಮೂರು ಬಾರಿ ನಗಪಾಲಿಕೆ ಸದಸ್ಯರಾಗಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಇವರು 2013ರ ಚುನಾವಣೆಯಲ್ಲಿ ಸೋತಿದ್ದರು. ನಿರಂಜನಕುಮಾರ್‌ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದರು. ಅವರ ತಂದೆ ಶಿವಮಲ್ಲಪ್ಪ ಎರಡು ಬಾರಿ, ನಿರಂಜನ ಮೂರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು.ಹರ್ಷವರ್ಧನ್‌ ಮೊದಲು ಬಾರಿ ಶಾಸಕರು, ಚಾಮರಾಜನಗರ ಸಂಸದರಾದ ವಿ. ಶ್ರೀನಿವಾಸಪ್ರಸಾದ್‌ ಅವರ ಅಳಿಯ.

ಯಡಿಯೂರಪ್ಪ ನೇತೃತ್ವದ ಸರ್ಕಾರದಂತೆ ಈಗಿನ ಬೊಮ್ಮಾಯಿ ಸರ್ಕಾರದಲ್ಲಿ ಕೂಡ ಕಾಂಗ್ರೆಸ್‌- ಜೆಡಿಎಸ್‌ನಿಂದ ಬಂದಿರುವ ಅತೃಪ್ತರನ್ನು ತೃಪ್ತಿಪಡಿಸಬೇಕಾದ ಹೊಣೆಗಾರಿಕೆ ಇರುವುದರಿಂದ ಜಿಲ್ಲೆಗೆ ಅವಕಾಶ ನೀಡಿಲ್ಲ.

ಅಲ್ಲದೆ ಬ್ರಾಹ್ಮಣರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸ್ಪೀಕರ್‌ ಸ್ಥಾನ ನೀಡಲಾಗಿದೆ. ಬ್ರಾಹ್ಮಣರ ಕೋಟಾದಲ್ಲಿ ತಿಪಟೂರಿನ ಬಿ.ಸಿ. ನಾಗೇಶ್‌ ಹಾಗೂ ವಲಸೆ ಬಂದಿರುವ ಶಿವರಾಂ ಹೆಬ್ಬಾರ್‌ ಅವರಿಗೆ ಬ್ರಾಹ್ಮಣ ಕೋಟಾದಲ್ಲಿ ಸಂಪುಟದಲ್ಲಿ ಅವಕಾಶ ನೀಡಲಾಗಿದೆ, ಹೀಗಾಗಿ ಬ್ರಾಹ್ಮಣರಾದ ರಾಮದಾಸ್‌ ಅವರಿಗೆ ಅವಕಾಶ ತಪ್ಪಿದೆ ಎಂದು ಹೇಳಲಾಗಿದೆ,

2008 ರಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಇಡೀ ದಕ್ಷಿಣ ಭಾರತದಲ್ಲಿಯೇ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಜಿಲ್ಲೆಯಿಂದ ಗೆದ್ದಿದ್ದ ಎಚ್‌.ಎಸ್‌. ಶಂಕರಲಿಂಗೇಗೌಡ, ಎಸ್‌.ಎ. ರಾಮದಾಸ್‌ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ ಹೊರಗಿನ ಶೋಭಾ ಕರಂದ್ಲಾಜೆ ಸುಮಾರು ಎರಡು ವರ್ಷ, ಎಸ್‌. ಸುರೇಶ್‌ಕುಮಾರ್‌ ಕೆಲವು ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ನಂತರ ರಾಮದಾಸ್‌ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2009 ರ ಉಪ ಚುನಾವಣೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಬಿಜೆಪಿಯ ಜಿ.ಎನ್‌. ನಂಜುಂಡಸ್ವಾಮಿ ಗೆದ್ದರೂ ಸಚಿವ ಸ್ಥಾನ ಸಿಗಲಿಲ್ಲ. ಅಲ್ಲಿಗೂ ಹೊರಗಿನ ಹಾಲಪ್ಪ, ಪಿ.ಎಂ. ನರೇಂದ್ರಸ್ವಾಮಿ, ರೇಣುಕಾಚಾರ್ಯ, ಸಿ.ಎಚ್‌. ವಿಜಯಶಂಕರ್‌, ವಿ. ಸೋಮಣ್ಣ, ಕಾಂಗ್ರೆಸ್‌ ಸರ್ಕಾರ ಇದ್ದಾಗ ಎಚ್‌.ಎಸ್‌. ಮಹದೇವಪ್ರಸಾದ್‌ ನಿಧನದ ನಂತರ ಯು.ಟಿ. ಖಾದರ್‌ ಉಸ್ತುವಾರಿ ಮಂತ್ರಿಗಳಾಗಿದ್ದರು. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಚಾಮರಾಜನಗರದ ಸಿ. ಪುಟ್ಟರಂಗಶೆಟ್ಟಿಉಸ್ತುವಾರಿ ಮಂತ್ರಿಯಾಗಿದ್ದರು. ಇದಾದ ನಂತರ ಯಡಿಯೂರಪ್ಪ ಸರ್ಕಾರದಲ್ಲಿ ಎಸ್‌. ಸುರೇಶ್‌ಕುಮಾರ್‌ ಉಸ್ತುವಾರಿ ಮಂತ್ರಿಯಾಗಿದ್ದರು.

 ಕಳೆದ ವಿಧಾನಸಭಾ ಚುನಾವಣೆ ಕಾಲಕ್ಕೆ ಮೈಸೂರು ಜಿಲ್ಲೆಯ ಹುಣಸೂರಿನಿಂದ ಜೆಡಿಎಸ್‌ ಟಿಕೆಟ್‌ ಮೇಲೆ ಗೆದ್ದು, ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದ ಎಚ್‌. ವಿಶ್ವನಾಥ್‌ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಇಲ್ಲವೇ ಸೋಲದಿದ್ದರೆ ಮಂತ್ರಿಯಾಗುವುದು ಖಚಿತವಾಗಿತ್ತು. ಆದರೆ ಉಪ ಚುನಾವಣೆಯಲ್ಲಿ ಸೋತು, ಅವಕಾಶ ಕಳೆದುಕೊಂಡರು. ನಂತರ ವಿಧಾನ ಪರಿಷತ್‌ ನಾಮ ನಿರ್ದೇಶಿತ ಸದಸ್ಯರಾದರು. ಆದರೆ ಚುನಾವಣೆಯಲ್ಲಿ ಗೆದ್ದುಬಾರದೇ (ವಿಧಾನಸಭೆಯಿಂದ ವಿಧಾನ ಪರಿಷತ್‌ಗಾದರೂ) ಮಂತ್ರಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟು ತೀರ್ಪು ನೀಡಿತು. ಇದರಿಂದ ಅವರಿಗೆ ಅವಕಾಶ ಸಿಕ್ಕಿಲ್ಲ.

Follow Us:
Download App:
  • android
  • ios