ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗಾಗಿ ಕೆಎಸ್‌ಟಿಡಿಸಿ ಏಳು ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಇದರೊಂದಿಗೆ ದೀಪಾಲಂಕಾರ ವೀಕ್ಷಿಸಲು 'ಅಂಬಾರಿ' ಡಬಲ್ ಡೆಕ್ಕರ್ ಬಸ್ ಸೇವೆಯನ್ನೂ ಒದಗಿಸಲಾಗುತ್ತಿದೆ. ಪ್ರವಾಸಿಗರು ಆನ್‌ಲೈನ್ ಅಥವಾ ಸಹಾಯವಾಣಿ ಮೂಲಕ ಈ ಸೌಲಭ್ಯಗಳನ್ನು ಕಾಯ್ದಿರಿಸಬಹುದು.

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಆಗಮಿಸುವ ಪ್ರವಾಸಿಗರಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ (ಕೆಎಸ್‌ಟಿಡಿಸಿ) ಏಳು ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಮೈಸೂರಿನ ಪ್ರಮುಖ ತಾಣಗಳು ಮತ್ತು ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಲು ಕೆಎಸ್‌ಟಿಡಿಸಿಯ ಜನಪ್ರಿಯ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಸೇವೆ ಇರಲಿದೆ. ಈ ಬಸ್ಸು ಹಗಲು ವೇಳೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪ್ರತಿ ಗಂಟೆಗೊಮ್ಮೆ ಸಂಚರಿಸಲಿದೆ. ಹಗಲಿನ ಸವಾರಿಗೆ ಪ್ರತಿ ವ್ಯಕ್ತಿಗೆ ₹250 ದರ ನಿಗದಿಪಡಿಸಲಾಗಿದೆ. ಮೈಸೂರಿನ ದಸರಾಕ್ಕೆ 146 ಕಿ.ಮೀ. ವಿದ್ಯುತ್‌ ದೀಪಾಲಂಕಾರ ಇರಲಿದ್ದು, ಇದನ್ನು ವೀಕ್ಷಿಸಲು ಸಂಜೆ 6.30, ರಾತ್ರಿ 8 ಹಾಗೂ 9.30ಕ್ಕೆ ವಿಶೇಷ ಸವಾರಿಗಳು ಇರಲಿವೆ. ರಾತ್ರಿ ಸವಾರಿಯಲ್ಲಿ ಕೆಳಗಿನ ಡೆಕ್‌ಗೆ ₹250 ಹಾಗೂ ಮೇಲಿನ ಡೆಕ್‌ಗೆ ₹500 ದರ ನಿಗದಿಪಡಿಸಲಾಗಿದೆ ಎಂದರು.

7 ವಿಶೇಷ ಪ್ಯಾಕೇಜ್‌:

ಇದರ ಜೊತೆ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳನ್ನು ಪರಿಚಯಿಸುವ ಏಳು ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ. ಊಟಿಯ ಎರಡು ದಿನಗಳ ಪ್ರವಾಸ, ಮೈಸೂರು ಸ್ಥಳೀಯ ಪ್ರವಾಸ, ಬೇಲೂರು–ಹಳೇಬೀಡು–ಶ್ರವಣಬೆಳಗೊಳ, ಕೊಡಗಿನ ಪ್ರಮುಖ ತಾಣಗಳು, ಶಿವನಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ನಂಜನಗೂಡು ಸೇರಿ ವಿವಿಧ ಧಾರ್ಮಿಕ, ಐತಿಹಾಸಿಕ ಮತ್ತು ನೈಸರ್ಗಿಕ ಪ್ರವಾಸಿ ತಾಣಗಳನ್ನು ಒಳಗೊಂಡ ಒಂದು ಹಾಗೂ ಎರಡು ದಿನಗಳ ಪ್ಯಾಕೇಜ್‌ಗಳು ಲಭ್ಯವಿವೆ ಎಂದು ಸಚಿವರು ವಿವರಿಸಿದರು.

ಪ್ರವಾಸ ಪ್ಯಾಕೇಜ್‌ಗಳು, ‘ಅಂಬಾರಿ’ ಬಸ್ ಸೇವೆ ಹಾಗೂ ಬುಕ್ಕಿಂಗ್ ಸಂಬಂಧಿತ ಮಾಹಿತಿಗಾಗಿ ಪ್ರವಾಸಿಗರು ಕೆಎಸ್‌ಟಿಡಿಸಿ ಸಹಾಯವಾಣಿ ಸಂಖ್ಯೆ 080-4334 4334/ 0821-2423652 ಅಥವಾ 8970656400 ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ www.kstdc.co ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ info@kstdc.coಗೆ ಇ-ಮೇಲ್ ಮಾಡಬಹುದು.