ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರು ದಸರಾ ಮಹೋತ್ಸವಕ್ಕೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರನ್ನು ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಈ ಬಾರಿಯ ದಸರಾ ಅಂಗವಾಗಿ ವಿಶೇಷ ಕಂಬಳ ಆಯೋಜಿಸಲಾಗಿದ್ದು, ಗೆಲ್ಲುವ ಕೋಣಕ್ಕೆ 16 ಗ್ರಾಂ ಚಿನ್ನದ ಬಹುಮಾನ ನೀಡಲಾಗುತ್ತದೆ.
Mysuru Dasara 2026: ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಶುಕ್ರವಾರ ದಸಾರ ಮಹೋತ್ಸವಕ್ಕೆ ಅಧಿಕೃತವಾಗಿ ಆಹ್ವಾನ ನೀಡಿದರು. \B
ಮೈಸೂರು (ಅ.3): ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಹಾಗೂ ಕುಟುಂಬದವರು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಅವರು ಶುಕ್ರವಾರ ಸಂಪ್ರದಾಯದಂತೆ ಅಧಿಕೃತವಾಗಿ ಆಹ್ವಾನಿಸಿದರು.
ಮೈಸೂರು ದಸರಾಕ್ಕೆ ರಾಜವಂಶಸ್ಥರಿಗೆ ಆಹ್ವಾನ
ಬಳಕ ಮಾತನಾಡಿದ ಅವರು, ಪ್ರತಿ ಬಾರಿಯಂತೆ ಈ ಬಾರಿಯೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ರಾಜವಂಶಸ್ಥರನ್ನು ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಆಹ್ವಾನಿಸಲಾಗಿದೆ. ರಾಜಮನೆತನದವರು ದಸರಾ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಅಲ್ಲದೆ, ಅಂಬಾರಿ ಕಟ್ಟುವ ಸಮಯದಲ್ಲಿ ಕಳೆದ ಬಾರಿ ಹೆಚ್ಚಿನ ಜನಸಂದಣಿಯಿಂದ ವಿಳಂಬವಾಗಿದ್ದನ್ನು ನೆನಪಿಸಿ, ಈ ಬಾರಿ ಅಂಬಾರಿ ಕಟ್ಟುವ ಜಾಗದಲ್ಲಿ ಕಡಿಮೆ ಜನರಿಗೆ ಅವಕಾಶ ನೀಡಿ ಸುಸೂತ್ರವಾಗಿ ಕೆಲಸ ನಡೆಯುವಂತೆ ಸೂಕ್ತ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ದಸರಾ ಕಂಬಳದಲ್ಲಿ ಗೆಲ್ಲುವ ಕೋಣಕ್ಕೆ 16 ಗ್ರಾಂ ಬಂಗಾರ
ದಸರಾ ಅಂಗವಾಗಿ ಈ ಬಾರಿ ವಿಶೇಷವಾಗಿ ಕಂಬಳ ಕ್ರೀಡೆಯನ್ನು ಆಯೋಜಿಸಿದ್ದು, ಸ್ಪರ್ಧೆಗಳು ಅ.18, 19ಕ್ಕೆ ನಡೆಯಲಿವೆ. ಇದರ ಉಸ್ತುವಾರಿ ವಹಿಸಿರುವ ಪುತ್ತೂರು ಶಾಸಕ ಅಶೋಕ್ ರೈ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, ಕೂಟದಲ್ಲಿ ಸುಮಾರು 150 ರಿಂದ 160 ಜೋಡಿ ಕೋಣಗಳು ಭಾಗವಹಿಸಲಿವೆ. ಗೆಲ್ಲುವ ಕೋಣಕ್ಕೆ ಬಹುಮಾನವಾಗಿ 16 ಗ್ರಾಂ ಚಿನ್ನ ನೀಡಲಾಗುತ್ತದೆ. ಒಂದು ಕೋಣಕ್ಕೆ 65 ಸಾವಿರ ರು. ಕೊಡುತ್ತೇವೆ. ಕಂಬಳಕ್ಕೆ ಅಂದಾಜು 4 ರಿಂದ 5 ಕೋಟಿ ರು. ಖರ್ಚಾಗಬಹುದು. ಖರ್ಚು ವೆಚ್ಚ ಎಲ್ಲವನ್ನು ಜಿಲ್ಲಾಡಳಿತವೇ ಭರಿಸುತ್ತದೆ ಎಂದು ತಿಳಿಸಿದರು.


