Asianet Suvarna News Asianet Suvarna News

ಹಿಂದೆಯೂ ಆಗಿತ್ತು ಅದ್ದೂರಿ ದಸರಾಗೆ ಅಡೆತಡೆ : ಈ ಬಾರಿಯೂ ಹಲವು ಆಚರಣೆಗೆ ಬ್ರೇಕ್

ಈ ಹಿಂದೆಯೂ ವಿಶ್ವವಿಖ್ಯಾತ ದಸರಾ ಆಚರಣೆಗೆ ಅಡೆತಡೆಗಳು ಉಂಟಾಗಿತ್ತು. ಅದರಂತೆ ಈ ಬಾರಿಯೂ ಅಡೆತಡೆ ನಡುವೆ ಸುರಕ್ಷಿತ ದಸರಾ ಆಚರಣೆ ಮಾಡಲಾಗುತ್ತದೆ.

Mysuru Dasara Program To inaugurate On October 17 snr
Author
Bengaluru, First Published Oct 17, 2020, 9:24 AM IST
  • Facebook
  • Twitter
  • Whatsapp

ವರದಿ : ಅಂಶಿ ಪ್ರಸನ್ನಕುಮಾರ್‌
 
ಮೈಸೂರು (ಅ.17)
:  ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಕೋವಿಡ್‌- 19ರ ಹಿನ್ನೆಲೆಯಲ್ಲಿ ಸರಳ, ಸಾಂಪ್ರದಾಯಿಕ ಜೊತೆಗೆ ‘ಸುರಕ್ಷಿತ’ ಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ.

ಬರ, ಭೂಕಂಪ, ಪ್ಲೇಗ್‌, ಕಾವೇರಿ ವಿವಾದ, ವೀರಪ್ಪನ್‌ನಿಂದ ಡಾ.ರಾಜ್‌ಕುಮಾರ್‌, ಎಚ್‌. ನಾಗಪ್ಪ ಅಪಹರಣ, ರೈತರ ಆತ್ಮಹತ್ಯೆ ಮತ್ತಿತರ ಕಾರಣಗಳಿಂದ ಹತ್ತು ಹಲವು ಬಾರಿ ದಸರೆಯನ್ನು ಸರಳವಾಗಿ ಆಚರಿಸಲಾಗಿದೆ. ಆದರೆ ಈ ಬಾರಿ ಸರಳ, ಸಾಂಪ್ರದಾಯಿಕ ಜೊತೆಗೆ ‘ಸುರಕ್ಷತೆ’ಗೆ ಆದ್ಯತೆ ನೀಡಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಉನ್ನತ ಮಟ್ಟದ ಸಭೆ ನಡೆಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಕಾರ್ಯಕಾರಿ ಸಮಿತಿ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಇದಲ್ಲದೇ ಸೋಮಶೇಖರ್‌ ಜೊತೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌, ಆರೋಗ್ಯ ಸಚಿವರಾಗಿದ್ದ ಬಿ. ಶ್ರೀರಾಮುಲು ಅವರು ಸತತವಾಗಿ ಅಧಿಕಾರಿಗಳ ಸಭೆ ನಡೆಸಿ, ‘ಸುರಕ್ಷತೆ’ಗೆ ಒತ್ತು ನೀಡಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ- ಹೀಗೆ ಅಧಿಕಾರಿಗಳ ಮಟ್ಟದಲ್ಲೂ ಸತತ ಸಭೆಗಳಾಗಿವೆ. ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಜಿ.ಟಿ. ದೇವೇಗೌಡ, ತನ್ವೀರ್‌ ಸೇಠ್‌, ಎಸ್‌.ಎ. ರಾಮದಾಸ್‌, ಎಲ್‌. ನಾಗೇಂದ್ರ, ಬಿ. ಹರ್ಷವರ್ಧನ್‌, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಆರ್‌. ಧರ್ಮಸೇನ, ಸಂದೇಶ್‌ ನಾಗರಾಜ್‌, ಎಚ್‌. ವಿಶ್ವನಾಥ್‌, ನಗರಪಾಲಿಕೆ ಹಾಗೂ ಜಿಪಂನ ಚುನಾಯಿತ ಪ್ರತಿನಿಧಿಗಳು ‘ಸಾಥ್‌’ ನೀಡಿದ್ದಾರೆ. ಹುಣಸೂರು ಶಾಸಕ ಎಚ್‌.ಪಿ. ಮಂಜುನಾಥ್‌ ಮೊದಲಾದವರು ನೈತಿಕ ಸಹಕಾರ ನೀಡಿದದ್ದಾರೆ.

ಮೈಸೂರು: ಜಂಬೂಸವಾರಿಗೆ 300 ಜನರಿಗಷ್ಟೇ ಅವಕಾಶ! ...

ಉದ್ಘಾಟನಾ ಕಾರ್ಯಕ್ರಮ ನಡೆಯುವ ಚಾಮುಂಡಿಬೆಟ್ಟಹಾಗೂ ಜಂಬೂ ಸವಾರಿ ನಡೆಯುವ ಅರಮನೆ ಅಂಗಳದಲ್ಲಿ ಸಿದ್ಧತೆ ಕಾರ್ಯಗಳು ನಡೆದಿವೆ. ಎರಡೂ ಕಡೆಯೂ ಸುಣ್ಣ- ಬಣ್ಣ ಕೆಲಸ ನಡೆದಿದೆ. ಅರಮನೆ ಅಂಗಳವನ್ನು ಬಣ್ಣ, ಬಣ್ಣದ ಹೂವುಗಳಿಂದ ಸಿಂಗರಿಸಲಾಗಿದೆ.

ಉದ್ಘಾಟನಾ ದಿನ ಬೆಳ್ಳಿರಥದಲ್ಲಿ ಪ್ರತಿಷ್ಠಾಪಿಸುವ ಹಾಗೂ ಜಂಬೂಸವಾರಿಯಂದು ಅಂಬಾರಿಯಲ್ಲಿ ಇಡುವ ಚಾಮುಂಡೇಶ್ವರಿ ಉತ್ಸವ ಮೂರ್ತಿಯ್ನು ಈಗಾಗಲೇ ಚಾಮುಂಡಿಬೆಟ್ಟಕ್ಕೆ ತೆಗೆದುಕೊಂಡು ಹೋಗಲಾಗಿದೆ.ಸುರಕ್ಷತೆಯ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭಕ್ಕೆ 200, ಜಂಬೂ ಸವಾರಿಗೆ 300, ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 20 ಮಂದಿಗೆ ಅವಕಾಶ ನೀಡವಂತೆ ಸೂಚಿಸಲಾಗಿದೆ. ಯಾವುದೇ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಅಲ್ಲದೇ ದೀಪಾಲಂಕಾರ ವೀಕ್ಷಣೆಗೆ ಜನ ಸೇರದಂತೆ ಕ್ರಮ ವಹಿಸಲು ಸೂಚಿಸಲಾಗಿದೆ.

ಸರಳ ದಸರಾನಾ? ಅದ್ಧೂರಿ ದಸರಾನಾ? ಸರ್ಕಾರದ ಈ ನಡೆ ವಿವಾದಕ್ಕೆ ಎಡೆ .

ಆನೆಗಳೊಂದಿಗೆ ಬಂದಿರುವ ಮಾವುತರು, ಕಾವಾಡಿಗಳು, ಅರಮನೆಯ ಸಿಬ್ಬಂದಿಗೆ ಕೋವಿಡ್‌ ಪರೀಕ್ಷೆ ಮಾಡಿಸಲಾಗಿದೆ. ಎಲ್ಲಾ ಕಾರ್ಯಕ್ರಮಗಳಿಗೂ ಕೋವಿಡ್‌ ಪರೀಕ್ಷೆ ಮಾಡಿಸಿ, ನೆಗೆಟಿವ್‌ ವರದಿ ಕಡ್ಡಾಯ ಮಾಡಲಾಗಿದೆ.

ಗಜಪಡೆ ತಾಲೀಮು

‘ದ್ರೋಣ’ನ ನಂತರ ‘ಬಲರಾಮ’ ಆನೆ ಅಂಬಾರಿ ಹೊರುತ್ತಿತ್ತು. ‘ಬಲರಾಮ’ನಿಗೆ 60 ವರ್ಷ ದಾಟಿರುವುದರಿಂದ ಸುಪ್ರೀಂಕೋರ್ಟಿನ ತೀರ್ಪಿನ ಪ್ರಕಾರ, ಬಾರ ಹೊರಿಸುವಂತಿಲ್ಲ. ಹೀಗಾಗಿ ಈ ಬಾರಿ ಆಪರೇಷನ್‌ ಖ್ಯಾತಿಯ ‘ಅಭಿಮನ್ಯು ಅಂಬಾರಿ ಆನೆಗೆ ಕಾರ್ಯನಿರ್ವಹಿಸಲಿದೆ. ಈ ಬಾರಿ 10-12 ಆನೆಗಳ ಬದಲಿಗೆ ಕೇವಲ 5 ಆನೆಗಳು ಮಾತ್ರ ಭಾಗವಹಿಸಲಿವೆ. ‘ಗೋಪಿ’, ‘ವಿಕ್ರಮ’, ‘ವಿಜಯ’ ಮತ್ತು ‘ಕಾವೇರಿ’- ಜಂಬೂ ಸವಾರಿಯಲ್ಲಿ ಭಾಗವಹಿಸವ ಇತರೆ ನಾಲ್ಕು ಆನೆಗಳು. ಪ್ರತಿ ವರ್ಷ ಅರಮನೆಯಿಂದ ಬನ್ನಿಮಂಟಪದವರೆಗೆ ಗಜಪಡೆಯ ತಾಲೀಮು ನಡೆಯುತ್ತಿತ್ತು.ಆದರೆ ಈ ಬಾರಿ ಅರಮನೆ ಆವರಣದಲ್ಲಿಯೇ ತಾಲೀಮು ನಡೆಯುತ್ತಿದೆ. ಅಶ್ವಾರೋಹಿ ಪೊಲೀಸರು ಸಜ್ಜಾಗುತ್ತಿದ್ದಾರೆ. ಕುಶಾಲತೋಪು ಸಿಡಿಸಲು ಫಿರಂಗಿಗಳನ್ನು ಸ್ವಚ್ಛಗೊಳಿಸಿ, ತಾಲೀಮು ನಡೆಸಲಾಗುತ್ತಿದೆ.

1994, 2002ಕ್ಕಿಂತ ಭಿನ್ನ

ಸೂರತ್‌ನಲ್ಲಿ ಕಾಣಿಸಿಕೊಂಡ ಪ್ಲೇಗ್‌ನಿಂದಾಗಿ 1994, ಕಾಡುಗಳ್ಳ, ನರಹಂತಕ ವೀರಪ್ಪನ್‌ನಿಂದ ಮಾಜಿ ಸಚಿವ ಎಚ್‌. ನಾಗಪ್ಪ ಅಪಹರಣ, ಕಾವೇರಿ ಸಮಸ್ಯೆ ಹಿನ್ನೆಲೆಯಲ್ಲಿ 2002 ರಲ್ಲಿ ಜಂಬೂ ಸವಾರಿಯನ್ನು ಅರಮನೆ ಅಂಗಳಕ್ಕೆ ಸೀಮಿತಗೊಳಿಸಲಾಗಿತ್ತಾದರೂ ಅವರೆಡಕ್ಕಿಂತ ಈ ಬಾರಿಯ ದಸರೆ ವಿಭಿನ್ನವಾಗಿದೆ.

ಆ ಎರಡು ಬಾರಿಯು ಗಜಪಡೆ ಮೈಸೂರಿಗೆ ಬಂದ ನಂತರ, ಅದರಲ್ಲೂ 1004 ರಲ್ಲಿ ಚಾಮುಂಡಿಬೆಟ್ಟದಲ್ಲಿ ದಸರೆ ಉದ್ಧಾಟನೆಯ ನಂತರ ಮೆರವಣಿಗೆ ರದ್ದುಪಡಿಸುವ ತೀರ್ಮಾನ ಪ್ರಕಟಿಸಲಾಗಿತ್ತು. 2002 ರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಸರಿ ಇರಲಿಲ್ಲ. ಈ ಬಾರಿ ಗಜಪಡೆ ಮೈಸೂರಿಗೆ ಬರುವ ಮುನ್ನವೇ ಜಂಬೂಸವಾರಿಯನ್ನು ಅರಮನೆಗೆ ಸೀಮಿತಗೊಳಿಸುವ ತೀರ್ಮಾನ ಮಾಡಲಾಯಿತು. ಇದರಿಂದ ನಾಗರಹೊಳೆಯ ಹೆಬ್ಬಾಗಿಲು ವೀರನಹೊಸಳ್ಳಿ ಬಳಿ ಯಾವುದೇ ಜನಪ್ರತಿನಿಧಿಗಳಿಲ್ಲದೇ ಅಧಿಕಾರಿಗಳೇ ಗಜಪಡೆಗೆ ಪೂಜೆ ಸಲ್ಲಿಸಿ, ಮೈಸೂರಿಗೆ ಬೀಳ್ಕೊಟ್ಟರು. ಮರುದಿನ ಅರಮನೆ ಆವರಣದಲ್ಲಿ ಸ್ವಾಗತಿಸುವಾಗ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸಾಮಾನ್ಯವಾಗಿ ದಸರೆ ಎಷ್ಟೇ ಸರಳವಾದರೂ ಜಂಬೂ ಸವಾರಿ, ಪಂಜಿನ ಕವಾಯತು, ದಸರಾ ಫಲಪುಷ್ಪ ಪ್ರದರ್ಶನ, ಕುಸ್ತಿ ಪಂದ್ಯಾವಳಿ, ಕವಿಗೋಷ್ಠಿ, ಅರಮನೆ ಎದುರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಬಾರಿ ಜಂಬೂ ಸವಾರಿ ಅರಮನೆ ಆವರಣಕ್ಕೆ ಸೀಮಿತವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಅರಮನೆ ಎದುರು ಮಾತ್ರ ನಡೆಯಲಿದೆ. ಉಳಿದೆಲ್ಲವೂ ರದ್ದಾಗಿವೆ.

ಖಾಸಗಿ ದರ್ಬಾರ್‌ನಲ್ಲೂ

ಅರಮನೆಯಲ್ಲಿ ರಾಜವಂಶಸ್ಥರು ನಡೆಸುವ ಖಾಸಗಿ ದರ್ಬಾರ್‌ಗೂ ಈ ಬಾರಿ ಹಲವು ನಿರ್ಬಂಧ ವಿಧಿಸಲಾಗಿದೆ. ಸಂಬಂಧಿಕರು, ಮಾಧ್ಯಮದವರು ಸೇರಿದಂತೆ ಯಾರಿಗೂ ಪ್ರವೇಶವಿಲ್ಲ. ಧಾರ್ಮಿಕ ವಿಧಾನಗಳಿಗೆ ಮಾತ್ರ ಖಾಸಗಿ ದರ್ಬಾರ್‌ ಸೀಮಿತಿ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ತಿಳಿಸಿದ್ದಾರೆ. ಅಲ್ಲದೇ ಖಾಸಗಿ ದರ್ಬಾರ್‌ ಮುಕ್ತಾಯ ಅಂಗವಾಗಿ ನಡೆಯುತ್ತಿದ್ದ ವಜ್ರಮುಷ್ಠಿ ಕಾಳಗ ಕೂಡ ರದ್ದಾಗಿದೆ.

ದೀಪಾಲಂಕಾರಕ್ಕೆ ಆಕ್ಷೇಪ

ಈ ಬಾರಿ ಮೈಸೂರಿನಲ್ಲಿ ಸುಮಾರು 900ಕ್ಕೂ ಹೆಚ್ಚು ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 40 ಸಾವಿರ ದಾಟಿದೆ. ಹೀಗಿದ್ದರೂ ನಗರದ ಪ್ರಮಖ ರಸ್ತೆ, ವೃತ್ತಗಳಿಗೆ ದೀಪಾಲಂಕಾರ ಮಾಡಲಾಗಿದೆ. ಇದು ಕೆಲವರ ಆಕ್ಷೇಪಕ್ಕೂ ಕಾರಣವಾಗಿದೆ.

ದೀಪಾಲಂಕಾರದ ಮೂಲಕವೂ ಕೊರೋನಾ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿ, ಅಂತರ ಕಾಪಾಡಿ ಹಾಗೂ ಆಗಾಗ ಕೈ ತೊಳೆಯಿರಿ ಎಂಬ ತಿಳುವಳಿಕೆ ಮೂಡಿಸಲಾಗುತ್ತಿದೆ.

Follow Us:
Download App:
  • android
  • ios