Mysuru Dasara 2026 ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಗವಿಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಈ ಬಾರಿ ಪ್ರಪ್ರಥಮವಾಗಿ ಕಂಬಳ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಅಕ್ಟೋಬರ್ 21ರಂದು ಜಂಬೂಸವಾರಿ ನಡೆಯಲಿದೆ.
ಅಂಶಿ ಪ್ರಸನ್ನಕುಮಾರ್
ಮೈಸೂರು (ಅ.11) ವಿಶ್ವವಿಖ್ಯಾತ ‘ನಾಡಹಬ್ಬ’ ಮೈಸೂರು ದಸರಾ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಕಲ ಸಿದ್ಥತೆಗಳು ಭರದಿಂದ ಸಾಗಿವೆ.
ಭಾನುವಾರ ಬೆಳಗ್ಗೆ 11.50ರಿಂದ 12.13ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಇದೇ ಮೊದಲ ದಸರಾ. ಡಿಸಿಎಂ ಆಗಿ ಡಾ। ಜಿ.ಪರಮೇಶ್ವರ ಅವರಿಗೆ ಇದು ಎರಡನೇ ದಸರಾ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಡಾ। ಜಿ.ಪರಮೇಶ್ವರ ಡಿಸಿಎಂ ಆಗಿ ದಸರೆಯಲ್ಲಿ ಪಾಲ್ಗೊಂಡಿದ್ದರು. ಅದೇ ರೀತಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್ ಮೂರು ಬಾರಿ ಪಾಲ್ಗೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ। ಯತೀಂದ್ರ ಸಿದ್ದರಾಮಯ್ಯ ಅವರಿಗೂ ಇದು ಮೊದಲ ದಸರಾ.
ಇದೇ ಪ್ರಪ್ರಥಮ ಬಾರಿಗೆ ನಾಡಿನ ಮೂಲೆಮೂಲೆಗಳಿಂದ ನೂರಾರು ಧರ್ಮಗುರುಗಳನ್ನು ಕೂಡ ಉದ್ಘಾಟನೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ. ಅಲ್ಲದೇ, ಮೊದಲ ಬಾರಿಗೆ ದಸರೆಯಲ್ಲಿ ಕಂಬಳ ಸ್ಪರ್ಧೆಯನ್ನು ಅ.18 ಮತ್ತು 19ರಂದು ಆಯೋಜಿಸಲಾಗಿದೆ. ಸ್ವತಃ ಮುಖ್ಯಮಂತ್ರಿ ಅವರೇ ಕಂಬಳ ಉದ್ಘಾಟಿಸುವರು. ದಸರೆಯ ಸಂದರ್ಭದಲ್ಲಿ ಕಂಬಳ ಆಯೋಜಿಸಿರುವುದಕ್ಕೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಸಾಕಷ್ಟು ಮಂದಿಯಿಂದ ಅಪಸ್ವರ ಕೇಳಿ ಬಂದಿದ್ದರೂ ಸರ್ಕಾರ ಸೊಪ್ಪು ಹಾಕಿಲ್ಲ. ಈ ಬಾರಿ ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ತೀವ್ರ ಬರದ ಛಾಯೆ ಇದ್ದರೂ ಸರ್ಕಾರ ಅದ್ಧೂರಿಯಾಗಿ ದಸರಾವನ್ನು ಆಚರಿಸುತ್ತಿದೆ. 21 ದಿನ ವರ್ಣರಂಜಿತ ದೀಪಾಲಂಕಾರ ಇರಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಉಪಸ್ಥಿತರಿರುವರು. ಸಚಿವರಾದ ಶಿವರಾಜ್ ತಂಗಡಗಿ, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಕೆ.ಎಸ್.ಬಸವಂತಪ್ಪ ವಿಶೇಷ ಆಹ್ವಾನಿತರಾಗಿರುವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೌರವ ಉಪಸ್ಥಿತಿ ಇರಲಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸುವರು.
ಇತರ ಕಾರ್ಯಕ್ರಮಗಳಿಗೂ ಚಾಲನೆ:
ದಸರಾ ಉದ್ಘಾಟನೆ ಜೊತೆಗೆ ಅರಮನೆ ವೇದಿಕೆಯಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಉತ್ತನಹಳ್ಳಿ ಹೊರ ವರ್ತುಲ ರಸ್ತೆಯ ಬಳಿ ಯುವ ದಸರಾ, ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಪುಸ್ತಕ ಮೇಳ, ಕುಪ್ಟಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ, ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕ್ರೀಡಾಕೂಟ, ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ, ದೊಡ್ಡಕೆರೆ ಮೈದಾನದಲ್ಲಿ ವಸ್ತು ಪ್ರದರ್ಶನ, ಮಾನಸ ಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ವಿವಿಧ ಕವಿಗೋಷ್ಠಿಗಳು, ಮಹಿಳಾ, ಮಕ್ಕಳ ದಸರಾ, ರೈತ ದಸರಾ. ಪಾರಂಪರಿಕೆ ನಡಿಗೆ, ಯೋಗ ಕೂಡ ನಡೆಯಲಿದೆ. ಈ ಬಾರಿ ಚಲನಚಿತ್ರೋತ್ಸವ ರದ್ದಾಗಿದೆ.
ಸಂಜೆ 5ಕ್ಕೆ ಸಿಎಂ ಅವರು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡುವರು.
21ರಂದು ಜಂಬೂಸವಾರಿ-ಪಂಜಿನ ಕವಾಯತು:
ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಅ.21ರಂದು ನಡೆಯಲಿದೆ. ಅಂದು ಮಧ್ಯಾಹ್ನ 1.36 ರಿಂದ 1.56ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಂದೀಧ್ವಜಕ್ಕೆ ಪೂಜೆ ಸಲ್ಲಿಸುವರು. ಸಂಜೆ 4.10ರಿಂದ 4.35 ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಸಾಗುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವರು.
ಜಂಬೂಸವಾರಿಯಲ್ಲಿ ಕಲಾತಂಡಗಳು, ಸ್ತಬ್ಧಚಿತ್ರಗಳ ಜೊತೆಗೆ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಯ ಮೂರು ತಂಡಗಳು ದಸರಾ ಮೆರವಣಿಗೆಯಲ್ಲಿ ಭಾಗವಹಿಸಿ ಶಿಸ್ತು ಮತ್ತು ದೇಶಭಕ್ತಿಯನ್ನು ಸಾರ್ವಜನಿಕರಿಗೆ ಸಾರಲಿವೆ. ಅಲ್ಲದೇ ಕನ್ನಡದ ಸುಮಾರು 50 ಚಲನಚಿತ್ರ ನಟ- ನಟಿಯರು ಭಾಗವಹಿಸುವರು.
ಅದೇ ದಿನ ಸಂಜೆ 7ಕ್ಕೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದ್ದು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಗೌರವ ವಂದನೆ ಸ್ವೀಕರಿಸುವರು.==
ಚಾಮುಂಡಿಬೆಟ್ಟದ ಮೇಲೆ ಸುಮಾರು 2 ಸಾವಿರ ಜನಕ್ಕೆ ಆಸನದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಅನೇಕ ಮಠದ 200ಕ್ಕೂ ಹೆಚ್ಚು ಮಠಾಧೀಶರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಲ್ಲಾ ಮಠಾಧೀಶರಿಗೆ ವಿಶೇಷ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ.
-ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾಧಿಕಾರಿ, ಮೈಸೂರು.


