ಬಿ.ಶೇಖರ್‌ ಗೋಪಿನಾಥಂ 

ಮೈಸೂರು (ಅ.02):  ಕೊರೋನಾ ಆತಂಕ ನಡುವೆಯೂ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಸಿದ್ಧತೆಗಳು ನಡೆಯುತ್ತಿದೆ. ದಸರಾ ಮೊದಲ ಅತಿಥಿಗಳಾದ ಗಜಪಡೆಯು ಗುರುವಾರ ಕಾಡಿನಿಂದ ನಾಡಿಗೆ ಆಗಮಿಸಿದ್ದು, ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನ ಆವರಣದಲ್ಲಿ ಬಿಡಾರ ಹೂಡಿವೆ.

ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು 5 ಆನೆಗಳು ಮಾತ್ರ ಆಗಮಿಸಿವೆ. ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಗೇಟ್‌ ಬಳಿ ಗುರುವಾರ ಬೆಳಗ್ಗೆ ದಸರಾ ಗಜಪಯಣಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಚಾಲನೆ ನೀಡಿದರು.

'ದಸರೆಗೆ ಹೋಗಬೇಕಂದ್ರೆ 5 ದಿನ ಮುಂಚೆ ಕೋವಿಡ್ ಟೆಸ್ಟ್ ಅಗತ್ಯ' ...

ಇದೇ ಮೊದಲ ಬಾರಿಗೆ 750 ಕೆ.ಜಿ. ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಆನೆಯೊಂದಿಗೆ ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳನ್ನು ಲಾರಿಗಳ ಮೂಲಕ ಮೈಸೂರಿಗೆ ಕರೆ ತರಲಾಗಿದೆ. 2020ರ ದಸರಾಗೆ ಕೋವಿಡ್‌-19 ಮಹಾಮಾರಿ ಅಡ್ಡಿಯಾಗಿರುವ ಕಾರಣ ಆನೆಗಳ ಸಂಖ್ಯೆಯನ್ನು 5ಕ್ಕೆ ಇಳಿಸಲಾಗಿದೆ. ಅರ್ಜುನ ಆನೆಗೆ 60 ವರ್ಷ ಆಗಿರುವ ಹಿನ್ನೆಲೆಯಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಈ ಬಾರಿ ಅಭಿಮನ್ಯು ಆನೆ ನಿರ್ವಹಿಸಲಿದೆ.

ಇಂದು ಆನೆಗಳಿಗೆ ಪೂಜೆ: ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಅ.2ರ ಬೆಳಗ್ಗೆ 9 ರಿಂದ 9.30ಕ್ಕೆ 5 ಆನೆಗಳಿಗೆ ಅರಣ್ಯ ಇಲಾಖೆ ವತಿಯಿಂದ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಗುತ್ತದೆ. ನಂತರ ಲಾರಿಯಲ್ಲಿ 5 ಆನೆಗಳನ್ನು ಅರಣ್ಯ ಭವನದಿಂದ ಅರಮನೆಗೆ ಕರೆದುಕೊಂಡು ಹೋಗಲಾಗುವುದು. ನಂತರ ಮಧ್ಯಾಹ್ನ 12.18ಕ್ಕೆ ಮೈಸೂರು ಅರಮನೆ ಮಂಡಳಿಯಿಂದ ಗಜಪಡೆಗೆ ಸ್ವಾಗತ ಕಾರ್ಯಕ್ರಮವನ್ನು ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಆಯೋಜಿಸಿದೆ.

ದಸರಾ ಆನೆಗಳ ವಿವರ

ಆನೆ ವಯ​​ಸ್ಸು ​ತೂ​ಕ (ಕೇ.​ಜಿ​ಗ​ಳ​ಲ್ಲಿ​)

ಅಭಿ​ಮ​ನ್ಯು 54 5000-5290

ವಿಕ್ರ​ಮ 47 3820

ಗೋಪಿ 38 3710

ವಿಜ​ಯ 61 3250

ಕಾವೇ​ರಿ 42 3000-3220